ಸಮ್ಮಿಶ್ರ ಸರಕಾರದ ಬಜೆಟ್‍ನಲ್ಲಿ ಕಾಫಿನಾಡಿಗೆ ಬಂಪರ್ ಕೊಡುಗೆ

Update: 2019-02-08 17:20 GMT

ಚಿಕ್ಕಮಗಳೂರು, ಫೆ.8: ಸಿಎಂ ಎಚ್.ಡಿ.ಕುಮಾರಸ್ವಾಮಿ ಶುಕ್ರವಾರ ಮಂಡಿಸಿದ ಬಜೆಟ್‍ನಲ್ಲಿ ಕಾಫಿನಾಡಿನ ಜನರ ದಶಕಗಳ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಬಂಪರ್ ಕೊಡುಗೆಗಳನ್ನು ಘೋಷಿಸಿದ್ದು, ಸರಕಾರದ ಬಜೆಟ್ ಜಿಲ್ಲೆಯ ಜನರಲ್ಲಿ ಸಂತಸಕ್ಕೆ ಕಾರಣವಾಗಿದೆ.

ಜಿಲ್ಲೆಯೂ ಕಾಫಿಬೆಳೆಗೆ ಪ್ರಸಿದ್ಧಿ ಪಡೆದಿದ್ದು, ಬಡಕೂಲಿ ಕಾರ್ಮಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಒಳಗೊಂಡಿದೆ. ಬಡಕೂಲಿ ಕಾರ್ಮಿಕರಿಗೆ ಆರೋಗ್ಯದಲ್ಲಿ ವ್ಯತ್ಯಾಯವಾದರೆ ಸುಸಜ್ಜಿತ ಜಿಲ್ಲಾಸ್ಪತ್ರೆಯಿಲ್ಲ ಎಂಬ ಕೂಗು ಬಹಳ ವರ್ಷಗಳಿಂದ ಕೇಳಿಬರುತ್ತಿತ್ತು. ಜಿಲ್ಲೆಯ ಜನತೆ ಹೆಚ್ಚಿನ ಚಿಕಿತ್ಸೆಗಾಗಿ ಪಕ್ಕದ ಜಿಲ್ಲೆಗಳಾದ ಹಾಸನ, ಶಿವಮೊಗ್ಗಕ್ಕೆ ತೆರಳಬೇಕಾಗಿತ್ತು. ನಗರದಲ್ಲಿರುವ ಜಿಲ್ಲಾಸ್ಪತ್ರೆ ಮೇಲ್ದರ್ಜೆಗೇರಿಸುವ ಬೇಡಿಕೆಯು ಹಲವು ವರ್ಷಗಳಿಂದಲೂ ಬಾಕಿ ಉಳಿದಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಜೆಟ್‍ನಲ್ಲಿ ಆಸ್ಪತ್ರೆ ಮೇಲ್ದರ್ಜೆಗೇರಿಸುವುದಾಗಿ ಘೋಷಿಸಿ 50ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. 

ಜಿಲ್ಲಾಸ್ಪತ್ರೆಯ ರಕ್ತಸಂಗ್ರಹಣೆ ಮತ್ತು ವಿತರಣೆಗಾಗಿ 4 ವಿಭಾಗೀಯ ರಕ್ತನಿಧಿ ಕೇಂದ್ರಗಳ ಸ್ಥಾಪನೆಗೆ 10ಕೋಟಿ ರೂಪಾಯಿಗಳ ಅನುದಾನವನ್ನು ಬಜೆಟ್‍ನಲ್ಲಿ ಕಾಯ್ದಿರಿಸಲಾಗಿದೆ. ಇದರೊಂದಿಗೆ 10 ಕೋಟಿ ವೆಚ್ಚದಲ್ಲಿ ಡಿಜಿಟಲ್‍ ಸ್ತನ ರೇಖನ ವ್ಯವಸ್ಥೆ (ಮೇಮೋಗ್ರಾಮ್, ಪ್ಯಾಪ್‍ಸ್ಮಿಯರ್ ಸ್ಕ್ಯಾನಿಂಗ್ ವ್ಯವಸ್ಥೆಯನ್ನು ಆರಂಭಿಸಲು ಬಜೆಟ್‍ನಲ್ಲಿ ಅನುದಾನ ಕಾಯ್ದಿರಿಸಲಾಗಿರುವುದು ಸಹ ಜಿಲ್ಲೆಯ ಜನರಿಗೆ ಜಿಲ್ಲಾಸ್ಪತ್ರೆಯ ಉನ್ನತೀಕರಣದ ನಿರೀಕ್ಷೆಯನ್ನು ಹೆಚ್ಚಿಸಿದೆ. ಬಿಜೆಪಿ ಆಡಳಿತಾವಧಿಯಲ್ಲಿ ಮಿನಿಏರ್‍ಸ್ಟ್ರೀಪ್ ನಿರ್ಮಾಣಕ್ಕೆ ನಗರದ ಹೊರವಲಯದಲ್ಲಿರುವ ಗೌಡನಹಳ್ಳಿ ಹತ್ತಿರ 10ಎಕರೆ  ಸರ್ಕಾರಿ ಜಮೀನು ಮೀಸಲಿಡಲಾಗಿದೆ. ಒಟ್ಟು ಅಗತ್ಯವಿರುವ 34 ಎಕರೆ ಪ್ರದೇಶಕ್ಕೆ ಉಳಿದ 24A ಎಕರೆ ಪ್ರದೇಶವನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ಪಿಪಿಪಿ ಮಾದರಿಯಲ್ಲಿ ಎರ್‍ಸ್ಟ್ರಿಪ್ ಅಭಿವೃದ್ದಿಗೆ ಯೋಜನೆ ರೂಪಿಸಿ ಅನುದಾನ ಕಾಯ್ದಿರಿಸಲಾಗಿದೆ. ಈ ಮೂಲಕ ಕುಮಾರಸ್ವಾಮಿ ಸರಕಾರ ಜಿಲ್ಲೆಯ ಜನತೆಯ ಅನೇಕ ವರ್ಷಗಳ ಬೇಡಿಕೆಗಳನ್ನು ಈಡೇರಿದಂತಾಗಿದೆ. 

ಬರಪೀಡಿತ ತಾಲೂಕು ಎಂದು ಕರೆಯಲ್ಪಡುವ ಕಡೂರು ತಾಲೂಕಿನ ಕೆರೆಗಳಿಗೆ ಹೆಬ್ಬೆ ಜಲಪಾತದಿಂದ ಮದಗದ ಕೆರೆ ಹಾಗೂ ಅಯ್ಯನಕೆರೆಗೆ ನೀರು ಹರಿಸಿ ಅಲ್ಲಿಂದ ತಾಲೂಕಿನ ವಿವಿಧ 19 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 100 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ತಾಲೂಕಿನ ಜನತೆಯಲ್ಲಿ ಸಂತಸ ಮೂಡಿಸಿದೆ. ಜಿಲ್ಲೆಯ ಮಲೆನಾಡಿನ ಭಾಗದಲ್ಲಿ ಕಾಡಾನೆಗಳು ಜನವಸತಿ ಪ್ರದೇಶಗಳಿಗೆ ನುಗ್ಗಿ ಅಪಾರ ಪ್ರಮಾಣದ ಹಾನಿ ಉಂಟು ಮಾಡುತ್ತಿವೆ. ಪ್ರಾಣ ಹಾನಿ ಮಾಡಿರುವ ಘಟನೆ ಕೂಡ ನಡೆದಿದ್ದು, ಕಾಡಾನೆ ಹಾವಳಿ ತಪ್ಪಿಸುವಂತೆ ಅನೇಕ ಹೋರಾಟ ಮಾಡಲಾಗಿತ್ತು. ಮುಖ್ಯಮಂತ್ರಿ ಅವರು ರಾಜ್ಯಾದ್ಯಂತ ಸುಮಾರು 520 ಕಿ.ಮೀ.ಗೆ ರೈಲ್ವೆ ಹಳಿ ಬೇಲಿ ನಿರ್ಮಿಸುವುದಾಗಿ ಬಜೆಟ್‍ನಲ್ಲಿ ಘೋಷಿಸಿದ್ದಾರೆ. ಇದರಲ್ಲಿ ಸಿಂಹಪಾಲು ಜಿಲ್ಲೆಯ ಮೂಡಿಗೆರೆ ಭಾಗಕ್ಕೆ ಸಿಗುವ ನಿರೀಕ್ಷೆಯಲ್ಲಿ ಜನತೆ ಇದ್ದಾರೆ. ಇದರೊಂದಿಗೆ ಬಾಲಕಿಯರ ಬಾಲಮಂದಿರ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಡಿ ಮಹಿಳೆಯರ ಕ್ರೀಡಾ ವಸತಿ ನಿಲಯ ಮಂಜೂರು ಮಾಡುವುದರೊಂದಿಗೆ ಕಾಫಿಯನಾಡಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಭರ್ಜರಿ ಕೊಡುಗಳನ್ನು ನೀಡಿದ್ದಾರೆ.

ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ ಸುಮಾರು 100 ಕಿ.ಮೀ ಅಂತರದಲ್ಲಿರುವ ಕಳಸ ಹೋಬಳಿಯ ಜನ ತಮ್ಮ ದೈನಂದಿನ ಕಚೇರಿ ಕೆಲಸಗಳನ್ನು ಮಾಡಿಸಿಕೊಳ್ಳಲು 60 ಕಿ.ಮೀ ದೂರದ ಮೂಡಿಗೆರೆಗೆ ಬರಬೇಕಾದ ಅನಿವಾರ್ಯತೆ ಎದುರಾಗಿತ್ತು. ಇದರಿಂದ ಬಹು ಸಂಕಷ್ಟಕರ ಜೀವನ ನಡೆಸುತ್ತಿದ್ದ ಜನತೆ ಕಳಸವನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸುವಂತೆ ಹಲವು ದಶಕಗಳ ಕಾಲ ಮನವಿ, ಧರಣಿ, ಹೋರಾಟ, ಪ್ರತಿಭಟನೆ, ಕಾಲ್ನಡಿಗೆ ಜಾಥಾದ ಮೂಲಕ ಆಗ್ರಹಿಸಲಾಗಿತ್ತಾದರೂ ಈವರೆಗಿನ ಸರಕಾರಗಳು ಗಮನಹರಿಸಿರಲಿಲ್ಲ. ಕಳೆದ ಕೆಲವು ವರ್ಷಗಳ ಹಿಂದೆ ಕಳಸದ ಇನಾಂ ಭೂಮಿ ಒತ್ತುವರಿ ತೆರವಿಗೆ ಸಂಬಂಧಿಸಿದ ಪ್ರತಿಭಟನೆಗೆ ಭಾಗವಹಿಸಲು ಬಂದಿದ್ದ ಸಂದರ್ಭದಲ್ಲಿ ಕುಮಾರಸ್ವಾಮಿಯವರು ನಮ್ಮ ಸರ್ಕಾರ ಬಂದರೆ ಕಳಸ ತಾಲೂಕು ಕೇಂದ್ರವನ್ನಾಗಿ ಘೋಷಿಸುವ ಭರವಸೆ ನೀಡಿದ್ದರು ಅದರಂತೆ ಈ ಬಾರಿಯ ಬಜೆಟ್‍ನಲ್ಲಿ ಘೋಷಿಸಿದ್ದಾರೆ. ಕಳಸ ಪಟ್ಟಣದಲ್ಲಿರುವ ಪದವಿ ಕಾಲೇಜ್ ಅಭಿವೃದ್ದಿಗೆ 50 ಲಕ್ಷ ಕಾಯ್ದಿರಿಸಲಾಗಿರುವುದು ಸಹ ಆ ಭಾಗದ ಜನರಲ್ಲಿ ಹರ್ಷ ಮೂಡಿಸಿದೆ.

ಅಂಗನವಾಡಿ ಕಾರ್ಯಕರ್ತೆಯರಿಗೆ 500 ರೂಪಾಯಿಗಳು ಮತ್ತು ಸಹಾಯಕಿಯರಿಗೆ 250 ರೂಪಾಯಿಗಳು, ಆಶಾಕಾರ್ಯಕರ್ತೆಯರಿಗೆ 500 ರೂಪಾಯಿಗಳ ಗೌರವಧನವನ್ನು ಹೆಚ್ಚಳ ಮಾಡಿರುವುದು ಸಹ ಅವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಜಿಲ್ಲೆಯ ಬಯಲು ಭಾಗದ ತಾಲೂಕುಗಳಾದ ಕಡೂರು, ತರೀಕೆರೆ, ಅಜ್ಜಂಪುರಗಳಲ್ಲಿ ಬೇಸಿಗೆ ಕಾಲದಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಸಮಗ್ರ ಶಾಶ್ವತ ನೀರಾವರಿ ಯೋಜನೆಗಳನ್ನು ರೂಪಿಸುವಂತೆ ಹಲವು ದಶಕಗಳಿಂದ ನಡೆಸಿದ ಹೋರಾಟವನ್ನು ಪರಿಗಣಿಸಿರುವ ಸರಕಾರ ಈ ಬಾರಿಯ ಬಜೆಟ್‍ನಲ್ಲಿ ಹೆಬ್ಬೆ ಜಲಪಾತ ತಿರುವು ಯೋಜನೆಯ ಅನುಷ್ಟಾನಗೊಳೀಸುವ ಮೂಲಕ 100 ಕೋಟಿ ವೆಚ್ಚದಲ್ಲಿ ಕೆರೆಗಳನ್ನು ತುಂಬಿಸುವ ಯೋಜನೆಗೆ ಅಸ್ತು ಎಂದಿರುವುದು ಸಹ ಬಯಲು ಭಾಗದ ಜನರಿಗೆ ಭರವಸೆ ಮೂಡಿಸಿದಂತಾಗಿದೆ.

ರಾಜ್ಯ ಸರಕಾರ ಈ ಹಿಂದೆ ಮಂಡಿಸಿದ ಬಜೆಟ್‍ನಲ್ಲಿ ಜಿಲ್ಲೆಯ ಹೆಸರು ಕೇಳಿರಲಿಲ್ಲ. ಸಣ್ಣಪುಟ್ಟ ಅನುದಾನಕ್ಕೆ, ಯೋಜನೆಗೆ ತೃಪ್ತಿಪಡುವಂತಾಗಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಶುಕ್ರವಾರ ಮಂಡಿಸಿದ ಬಜೆಟ್‍ನಲ್ಲಿ ಹೆಚ್ಚಿನ ಪ್ರಮಾಣದ ಅನುದಾನ ನೀಡುರುವುದು ಜನತೆಗೆ ಸಂತಸ ತಂದಿದೆ. ಆದರೂ ಜಿಲ್ಲೆಯ ತರೀಕೆರೆ ತಾಲೂಕುಗಳ ಬಹುಗ್ರಾಮಗಳಿಗೆ ಕುಡಿಯುವ ನೀರು ಯೋಜನೆ ಮಂಜೂರಾತಿ ನೀಡಿಲ್ಲ, ಕರಗಡ ಯೋಜನೆಗೆ ಅನುದಾನ ಪ್ರತ್ಯೇಕ ಹಾಲು ಒಕ್ಕೂಟದ ಬೇಡಿಕೆ ನೆನೆಗುದಿಗೆ ಬಿದ್ದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News