ಬಗರ್ ಹುಕುಂ ಸಾಗುವಳಿದಾರರಿಗೆ ವಿಧಿಸಿರುವ ಷರತ್ತು ಹಿಂತೆಗೆಯುವಂತೆ ಒತ್ತಾಯಿಸಿ ಧರಣಿ

Update: 2019-02-08 17:39 GMT

ಮೈಸೂರು,ಫೆ.8: ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರಕ್ಕೆ ಆಗ್ರಹಿಸಿ, ಸಾಗುವಳಿ ಪತ್ರ ನೀಡಲು ವಿಧಿಸಿರುವ ಷರತ್ತುಗಳನ್ನು ತೆಗೆಯಲು ಮತ್ತು ಎಲ್ಲರಿಗೂ ಸಾಗುವಳಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.

ತಹಶೀಲ್ದಾರ್ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ, ಕಳೆದ 50-60ವರ್ಷಗಳಿಂದ ಗೋಮಾಳ, ಗುಂಡು ತೋಪು, ಅರಣ್ಯ ಭೂಮಿಗಳಲ್ಲಿ ಬಡ ಬಗರ್ ಹುಕುಂ ಸಾಗುವಳಿದಾರರು ಉಳುಮೆ ಮಾಡುತ್ತಾ ತಮ್ಮ ಜೀವನ ನಡೆಸುತ್ತಾ ಬಂದಿದ್ದಾರೆ. ಆದರೆ ಆಳುವ ಯಾವುದೇ ಸರ್ಕಾರಗಳೂ ಬಂದರೂ ಈ ಬಡ ಬಗರ್ ಹುಕುಂ ಸಾಗುವಳಿದಾರರನ್ನು ಮರೆತಿವೆ. ಅಲ್ಲದೇ ಸಾಗುವಳಿ ಪತ್ರ ಇಲ್ಲದ ಕಾರಣ ಸರ್ಕಾರಿ ಸವಲತ್ತುಗಳು, ಸಾಲ ಸೌಲಭ್ಯ, ಬರ ಪರಿಹಾರ ಇತ್ಯಾದಿ ಸೌಲಭ್ಯಗಳಿಂದ ಈ ಸಾಗುವಳಿ ರೈತರು ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.

ಸರ್ಕಾರ ಸಾಗುವಳಿ ಪತ್ರ ನೀಡಿತು. ಆದರೆ ಹಲವು ಷರತ್ತು ವಿಧಿಸಿದೆ. ಈ ಷರತ್ತುಗಳು ಸಾಗುವಳಿ ಮಾಡುತ್ತಿರುವ ರೈತರಿಗೆ ಅನ್ಯಾಯವಾಗಲಿದೆ. ತುಂಡು ಭೂಮಿಯನ್ನೇ ನಂಬಿ ಹತ್ತಾರು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಸಾವಿರಾರು ರೈತರಿಗೆ ಇದರಿಂದ ಅನ್ಯಾಯವಾಗಲಿದೆ. ಸಾಗುವಳಿ ಪತ್ರ ನೀಡಲು ವಿಧಿಸಿರುವ ಷರತ್ತುಗಳನ್ನು ತೆಗೆಯಬೇಕು. ಎಲ್ಲಾ ರೈತರಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. ಅರ್ಜಿ ಸಲ್ಲಿಸಿದ ಎಲ್ಲಾ ರೈತರಿಗೂ ಸಾಗುವಳಿ ಪತ್ರ ನೀಡಬೇಕು. ಸಾಗುವಳಿ ಪತ್ರ ಸಲ್ಲಿಸುವಾಗ ಒದಗಿಸಬೇಕಾದ ದಾಖಲೆಗಳನ್ನು ಅರ್ಜಿ ಸಲ್ಲಿಸಿದ ರೈತರಿಗೆ ತಕ್ಷಣವೇ ಒದಗಿಸಬೇಕು. ಅರ್ಜಿ ಸಲ್ಲಿಸಿದ ಎಲ್ಲರಿಗೂ ಕೂಡಲೇ ರೇಷನ್ ಕಾರ್ಡ್ ನೀಡಬೇಕು. ಅರ್ಜಿ ಸಲ್ಲಿಸಲು ಇರುವ ಕಾಲಮಿತಿಯನ್ನು ವಿಸ್ತರಿಸಬೇಕು. ಈ ಸಂಬಂಧ ಚರ್ಚಿಸಲು ಕೂಡಲೇ ರೈತರ ಸಭೆಯನ್ನು ಕರೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಚಿಕ್ಕಣ್ಣೇಗೌಡ ಗೌರಿಪುರ, ಕೆ.ಬಸವರಾಜು, ದೂರಕೆಂಪಯ್ಯ, ಜಗದೀಶ್ ಸೂರ್ಯ, ಜವರೇಗೌಡ ಮಾರ್ಬಳ್ಳಿಹುಂಡಿ, ಶಂಕರ್ ಅಲಗಯ್ಯನ ಹುಂಡಿ, ರಾಮಯ್ಯ ದೂರ, ಮಾಲತೇಶ್ ಉದ್ಬೂರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News