ಕುಮಾರಸ್ವಾಮಿ ಮಂಡಿಸಿದ ಬಜೆಟ್ ಟೊಳ್ಳು: ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ

Update: 2019-02-08 17:43 GMT

ಮೈಸೂರು,ಫೆ.8: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿರುವ ಬಜೆಟ್ ಮೇಲ್ನೋಟಕ್ಕೆ ರೈತಪರ ಇದ್ದರೂ ಒಳಹೊಕ್ಕು ನೋಡಿದಾಗ ಇದೊಂದು ಟೊಳ್ಳು ಬಜೆಟ್ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಕಿಡಿಕಾರಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ರೈತರಿಗೆ ಏನೋ ದೊಡ್ಡ ಕೊಡುಗೆ ನೀಡಿದ್ದಾರೆ ಅಂದುಕೊಳ್ಳುವ ರೀತಿಯಲ್ಲಿ ಬಜೆಟ್ ಮಂಡಿಸಿದ್ದಾರೆ. ಆದರೆ ಅದೆಲ್ಲಾ ಟೊಳ್ಳು, ಬರೀ ಪತ್ರದಲ್ಲಿ ಮಾತ್ರ ಘೋಷಣೆಯಾಗುತ್ತದೆ ಹೊರತು ಅನುಷ್ಠಾನಕ್ಕೆ ಬರುವುದಿಲ್ಲ, ಒಂದು ಬಜೆಟ್ ಮಂಡನೆ ಮಾಡಬೇಕೆಂದರೆ ಆರ್ಥಿಕ ಶಿಸ್ತು ಇರಬೇಕು. ಅದ್ಯಾವುದನ್ನು ಮುಖ್ಯಮಂತ್ರಿಗಳು ಮಾಡಿಲ್ಲ ಎಂದು ದೂರಿದರು.

ರೈತರ ಆರ್ಥಿಕ ಅಭಿವೃದ್ಧಿಗೆ ಸಂಬಂಧ ಪಟ್ಟಂತೆ ಯಾವುದೇ ಘೊಷಣೆ ಮಾಡಿಲ್ಲ, ಕೃಷಿ ಸಂಕಷ್ಟದಲ್ಲಿದೆ. ಅದಕ್ಕೆ ಪರಿಹಾರ ಕಂಡುಹಿಡಿದಿಲ್ಲ. ರಾಜ್ಯದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರ ಬ್ಯಾಂಕ್‍ಗಳ 1.17 ಸಾವಿರ ಕೋಟಿ ರೂ. ಸಾಲದಲ್ಲಿ 48 ಸಾವಿರ ಕೋಟಿ ರೂ. ಮನ್ನಾ ಮಾಡುವುದಾಗಿ ಹೇಳಿರುವುದನ್ನೇ ಇನ್ನೂ ಮಾಡಿಲ್ಲ. ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರೈತರ ಕಣ್ಣೊರೆಸಲು ಹೊಸ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ ಎಂದು ಕಿಡಿಕಾರಿದರು.

ರೈತರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹಿಂದಿನಿಂದಲೂ ಮಾಡಿಕೊಂಡು ಬರುತ್ತಿದ್ದು, ರೈತರ ಸಾಲ ಮನ್ನಾ ತಾತ್ಕಾಲಿಕ ಪರಿಹಾರವಷ್ಟೇ. ರೈತರಿಗೆ ಶಾಶ್ವತವಾದಂತಹ ಕೃಷಿ ಕ್ಷೇತ್ರದಲ್ಲಿ ಉತ್ತೇಜನ ನೀಡುವಂತಹ ಕೆಲಸವನ್ನು ಮಾಡಲಿ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News