ವಿಜಯಪುರ: ದ್ರಾಕ್ಷಿ ಬೆಳೆಗಾರರಲ್ಲಿ ಸಂತಸದ ಅಲೆ ಮೂಡಿಸಿದ ಬಜೆಟ್

Update: 2019-02-08 18:27 GMT

ವಿಜಯಪುರ, ಫೆ.8: ಬಹು ವರ್ಷಗಳ ನಂತರ ವಿಜಯಪುರ ಜಿಲ್ಲೆಗೆ ಬಜೆಟ್‌ನಲ್ಲಿ ಬಂಪರ್ ಭಾಗ್ಯ ದೊರಕಿದ್ದು, ಜಿಲ್ಲೆಯ ಜನತೆಯಲ್ಲಿ ಅದರಲ್ಲೂ ವಿಶೇಷವಾಗಿ ದ್ರಾಕ್ಷಿ ಬೆಳೆಗಾರರಲ್ಲಿ ಸಂತಸದ ಅಲೆಯನ್ನು ಮೂಡುವಂತೆ ಮಾಡಿದೆ.

ಹಲವು ವರ್ಷಗಳಿಂದ ಈಡೇರಿಕೆಯಾಗದ ಬೇಡಿಕೆಗಳಿಗೆ ಪ್ರಸಕ್ತ ಬಜೆಟ್‌ನಲ್ಲಿ ಹಸಿರು ನಿಶಾನೆ ದೊರಕಿದೆ. ದೋಸ್ತಿ ಸರಕಾರದಲ್ಲಿ ವಿಜಯಪುರ ಜಿಲ್ಲೆಯ ಮೂವರು ಪ್ರಭಾವಿ ಸ್ಥಾನದಲ್ಲಿದ್ದರಿಂದ ಈ ಬಾರಿ ಜಿಲ್ಲೆಯ ಜನತೆ ಬಜೆಟ್ ಮೇಲೆ ಅಪಾರ ನಿರೀಕ್ಷೆ ಹೊಂದಿದ್ದರು. ಆ ನಿರೀಕ್ಷೆ ಹುಸಿಯಾಗಲಿಲ್ಲ. ಮೂವರು ಸಚಿವರು ವಿಜಯಪುರ ಜಿಲ್ಲೆಗೆ ಬಂಪರ್ ಭಾಗ್ಯ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಸತತ ಹೊಡೆತ ಅನುಭವಿಸಿದ ದ್ರಾಕ್ಷಿ, ದಾಳಿಂಬೆ ಬೆಳೆಗಾರರು ವಿಶೇಷ ಪ್ಯಾಕೇಜ್ ನೀಡುವಂತೆ ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ನಿಯೋಗದ ಮೇಲೆ ನಿಯೋಗ ತೆರಳಿ ಒತ್ತಾಯಿಸುತ್ತಲೇ ಇದ್ದರು.

ಈ ಬಾರಿ ದ್ರಾಕ್ಷಿ ಬೆಳೆಗಾರರ ಸಮಸ್ಯೆಗೆ ಸಿಎಂ ಕುಮಾರಸ್ವಾಮಿ ಸ್ಪಂದಿಸಿದ್ದು ದ್ರಾಕ್ಷಿ ಹಾಗೂ ದಾಳಿಂಬೆ ಬೆಳೆಗಾರರ ಸುಧಾರಣೆಗೆ 150 ಕೋಟಿ ರೂ. ಅನುದಾನ ಮೀಸಲಿರಿಸಿದ್ದಾರೆ. ವಿಜಯಪುರ- ಬಾಗಲಕೋಟೆಯ ದ್ರಾಕ್ಷಿ ಬೆಳೆಗಾರರಿಗೆ ಈ ನಿರ್ಧಾರ ವರದಾನವಾಗಿದ್ದು ದ್ರಾಕ್ಷಿ ಬೆಳೆಗಾರರಲ್ಲಿ ಹೊಸ ಭರವಸೆ ಮೂಡಿಸುವಂತಾಗಿದೆ. ತೋಟಗಾರಿಕಾ ಕಾಲೇಜು ತರುವಲ್ಲಿ ಸಫಲರಾಗದಿದ್ದರೂ ದ್ರಾಕ್ಷಿ ಬೆಳೆಗಾರರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ತೋಟಗಾರಿಕಾ ಸಚಿವ ಎಂ.ಸಿ.ಮನಗೂಳಿ ಯಶಸ್ವಿಯಾಗಿದ್ದಾರೆ. ಇಸ್ರೇಲ್ ಮಾದರಿಯ ಕೃಷಿ ಯೋಜನೆಗೆ 145 ಕೋಟಿ ರೂ. ಮೀಸಲಿರಿಸಲಾಗಿದ್ದು ಈ ಯೋಜನೆಯಡಿಯಲ್ಲಿ ವಿಜಯಪುರವನ್ನು ಸೇರ್ಪಡೆ ಮಾಡುವಂತೆ ಕಳೆದ ಸಚಿವ ಸಂಪುಟ ಸಭೆಯಲ್ಲಿ ಎಂ.ಸಿ.ಮನಗೂಳಿ ಒತ್ತಡ ಹೇರಿದ್ದರು. ಹೀಗಾಗಿ ಈ ಯೋಜನೆಯಡಿಯಲ್ಲಿಯೂ ಜಿಲ್ಲೆಗೆ ಅನುದಾನ ದೊರಕಲಿದೆ.

ಸರಕಾರಿ ಮೆಡಿಕಲ್ ಕಾಲೇಜು ತರುವಲ್ಲಿ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ವಿಫಲರಾದರೂ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಅನೇಕ ಮಹತ್ವದ ಯೋಜನೆಗಳು ವಿಜಯಪುರಕ್ಕೆ ದೊರಕುವಂತೆ ಮಾಡಿದ್ದಾರೆ. 40 ಕೋಟಿ ರೂ. ವೆಚ್ಚದಲ್ಲಿ 100 ಹಾಸಿಗೆಯ ಸಂಜಯ ಗಾಂಧಿ ಟ್ರಾಮಾ ಹಾಗೂ ಅಸ್ಥಿ ಚಿಕಿತ್ಸಾ ಕೇಂದ್ರ ಸ್ಥಾಪನೆ, 10 ಕೋಟಿ ರೂ. ವೆಚ್ಚದಲ್ಲಿ ಡಿಜಿಟಲ್ ಸ್ತನರೇಖನ ವ್ಯವಸ್ಥೆ (ವೈದ್ಯಕೀಯ ಪರಿಭಾಷೆಯಲ್ಲಿ ಮ್ಯಾಮೋಗ್ರಾಮ್) ಹಾಗೂ ಅಪಸ್ಮಾರ ಸ್ಕಾನಿಂಗ್ ವ್ಯವಸ್ಥೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಪ್ರತಿಯೊಂದು ಹಳ್ಳಿಗೂ ಕುಡಿಯುವ ನೀರು ಪೂರೈಸುವ ಮಹತ್ವದ ಜಲಧಾರೆ ಯೋಜನೆಯನ್ನು ವಿಜಯಪುರದಲ್ಲಿ ಅನುಷ್ಠಾನಗೊಳಿಸುವ ನಿರ್ಧಾರ ಬಜೆಟ್‌ನಲ್ಲಿ ಹೊರಬಂದಿದೆ.

ಇತ್ತೀಚಿಗಷ್ಟೇ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ನಡೆಸಿದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೆಗೌಡರು ಜಲಧಾರೆ ಯೋಜನೆಯನ್ನು ಪೈಲಟ್ ಪ್ರಾಜೆಕ್ಟ್ ಆಗಿ ವಿಜಯಪುರದಲ್ಲಿ ಅನುಷ್ಠಾನಗೊಳಿಸುವ ಇಂಗಿತ ವ್ಯಕ್ತಪಡಿಸಿದ್ದರು. ಅದರಂತೆ 4000 ಸಾವಿರ ಕೋಟಿ ರೂ.ವೆಚ್ಚದ ಜಲಧಾರೆ ಯೋಜನೆಯನ್ನು ಪ್ರಥಮ ಹಂತವಾಗಿ ವಿಜಯಪುರ, ರಾಯಚೂರು, ಮಂಡ್ಯ ಮೊದಲಾದ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರಸ್ತುತ ಐತಿಹಾಸಿಕ ಕೇಂದ್ರವೊಂದರಲ್ಲಿರುವ ಜಿಲ್ಲಾ ಕಾರಾಗೃಹ ಪ್ರತ್ಯೇಕ ಕಟ್ಟಡವಾಗಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಜಿಲ್ಲೆಯವರೇ ಆಗಿರುವ ಗೃಹ ಸಚಿವ ಎಂ.ಬಿ. ಪಾಟೀಲರ ಪ್ರಭಾವದಿಂದಾಗಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಬಜೆಟ್‌ನಲ್ಲಿ ಚಾಲನೆ ದೊರಕಿದೆ. ಬೀದರ್ ಹಾಗೂ ವಿಜಯಪುರದಲ್ಲಿ 100 ಕೋಟಿ ರೂ. ಯೋಜನಾ ವೆಚ್ಚದ 1000 ಬಂಧಿಗಳ ಸಾಮರ್ಥ್ಯದ ಜಿಲ್ಲಾ ಕೇಂದ್ರ ಕಾರಾಗೃಹ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ದೊರಕಿದ್ದು, ಪ್ರಸಕ್ತ ಬಜೆಟ್‌ನಲ್ಲಿಯೇ 30 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ.

ಅದರಂತೆ ವಿಜಯಪುರ ಮಹಾನಗರ ಪಾಲಿಕೆಗೆ 125 ಕೋಟಿ ರೂ. ಅನುದಾನ, ಮುಳವಾಡ ಕೈಗಾರಿಕಾ ಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆಗಳು ವಿಜಯಪುರಕ್ಕೆ ಸಿಹಿಯಾಗಿವೆ.

ಒಂದಷ್ಟು ಕಹಿ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾದ ಜೊತೆಗೆ ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕಾಮಗಾರಿಯ ನಿರ್ಣಾಯಕ ಹಂತಕ್ಕೆ ವಿಶೇಷ ಅನುದಾನ ಮೀಸಲಿರಿಸುವುದು, ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ಅನುದಾನ ಬಿಡುಗಡೆ, ವಿಜಯಪುರದಲ್ಲಿ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ, ತೋಟಗಾರಿಕಾ ಕಾಲೇಜು ಸ್ಥಾಪನೆ ಹೀಗೆ ಅನೇಕ ಬೇಡಿಕೆಗಳಿಗೆ ಈ ಬಾರಿಯೂ ಮನ್ನಣೆ ದೊರಕಿಲ್ಲ .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News