ಗಾಂಧಿಯನ್ನು ಹೀಯಾಳಿಸುವ ಬಿಜೆಪಿ ಗಾಂಧಿ ಪುತ್ಥಳಿ ಮುಂದೆ ಪ್ರತಿಭಟನೆ ನಡೆಸಿದ್ದು ಹಾಸ್ಯಾಸ್ಪದ: ಕಿಮ್ಮನೆ ರತ್ನಾಕರ್

Update: 2019-02-09 13:19 GMT

ಬೆಂಗಳೂರು, ಫೆ. 9: ರಾಷ್ಟ್ರಪಿತ ಮಹಾತ್ಮ ಗಾಂಧಿ, ನೆಹರೂ ಸೇರಿದಂತೆ ದೇಶದ ಗಣ್ಯರನ್ನು ಸದಾ ಹೀಯಾಳಿಸುವ ಬಿಜೆಪಿಯವರು ಗಾಂಧಿ ಪುತ್ಥಳಿ ಬಳಿ ಪ್ರತಿಭಟನೆ ನಡೆಸುವುದು ನಿಜಕ್ಕೂ ಹಾಸ್ಯಾಸ್ಪದ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಟೀಕಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಗಾಂಧೀಜಿಯವರಿಗೆ ಸಂಘ ಪರಿವಾರದವರು ಯಾವುದೇ ಮಾನ್ಯತೆ ನೀಡುವುದಿಲ್ಲ. ಆದರೆ, ಅದರ ಅಂಗಪಕ್ಷ ಬಿಜೆಪಿ ತಮಗೆ ಅನ್ಯಾಯವಾಯಿತು ಎಂದು ಬೊಬ್ಬೆ ಹೊಡೆಯುವ ಕಾಲದಲ್ಲಿ ಗಾಂಧೀಜಿ ಅವರನ್ನ ನೆನಪು ಮಾಡಿಕೊಳ್ಳುತ್ತಿರುವುದು ವಿಪರ್ಯಾಸ ಎಂದು ಲೇವಡಿ ಮಾಡಿದರು.

ರಾಜ್ಯಪಾಲರ ಭಾಷಣವನ್ನು ವಿರೋಧಿಸಿ ಸದನದಲ್ಲಿ ನಿರಂತರ ಅಡ್ಡಿಪಡಿಸುತ್ತಿದ್ದ ಬಿಜೆಪಿ ಬಜೆಟ್ ಪತ್ರಿ ಕೊಡಲಿಲ್ಲ ಎಂದು ನಿನ್ನೆ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ್ದಾರೆ. ಲೋಕಸಭೆ ಸಂಪ್ರದಾಯವನ್ನ ವಿಧಾನಸಭೆಯಲ್ಲಿ ಪಾಲಿಸಲಾಗಿದೆ. ಮುಖ್ಯಮಂತ್ರಿ ಬಜೆಟ್ ಭಾಷಣದ ನಂತರ ಬಜೆಟ್ ಪತ್ರಿಯನ್ನ ವಿತರಿಸಲಾಗಿದೆ. ಇದನ್ನ ವಿರೋಧಿಸಿ ಬಿಜೆಪಿಯವರು ಪ್ರತಿಭಟನೆ ನಡೆಸಿದ್ದು ಸಮಂಜಸವಲ್ಲ ಎಂದರು.

ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಬಿಜೆಪಿ ನಿರಂತರ ಯತ್ನ ನಡೆಸುತ್ತಿದೆ. ಸಂವಿಧಾನಾತ್ಮಕವಾಗಿ ರಚನೆಯಾದ ಮೈತ್ರಿ ಸರಕಾರ ಉರುಳಿಸಲು ಷಡ್ಯಂತ್ರ ಮಾಡುತ್ತಿದೆ. ಆಪರೇಷನ್ ಕಮಲದ ಮೂಲಕ ಖರೀದಿ ಮಾಡಲು ನಡೆಸಿದ ಪ್ರಯತ್ನದ ಆಡಿಯೋ ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ಸತ್ಯಾಂಶ ಕಂಡುಬಂದಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News