2 ಕೋಟಿ ರೂ. ವಂಚನೆ ಪ್ರಕರಣ: ಬಿಜೆಪಿ ಮಾಜಿ ಶಾಸಕನ ಸಂಬಂಧಿಕರ ಬಂಧನ

Update: 2019-02-09 13:56 GMT

ಬೆಂಗಳೂರು, ಫೆ.9: ಪ್ರತಿಷ್ಠಿತ ಕಂಪೆನಿಗಳ ಹೆಸರಿನಲ್ಲಿ 2 ಕೋಟಿ ರೂಪಾಯಿಗೂ ಅಧಿಕ ಮೊತ್ತ ವಂಚನೆ ಪ್ರಕರಣವನ್ನು ಇಲ್ಲಿನ ಸುಬ್ರಮಣ್ಯಪುರ ಠಾಣಾ ಪೊಲೀಸರು ಭೇದಿಸಿದ್ದು, ಬಿಜೆಪಿ ಮಾಜಿ ಶಾಸಕ ರಾಜು ಕಾಗೆ ಅವರ ಸಂಬಂಧಿಕರನ್ನು ಬಂಧಿಸಲಾಗಿದೆ.

ಪ್ರಕರಣ ಸಂಬಂಧ ಉತ್ತರಹಳ್ಳಿಯ ಗೌಡನಪಾಳ್ಯ ಸಿರಿ ಪ್ಯಾರಾಮೌಂಟ್ ಅಪಾರ್ಟ್‌ಮೆಂಟ್ ನಿವಾಸಿ ದರ್ಶನ್ ಶ್ರೀರಾಂ(32) ಹಾಗೂ ಸಹಕರಿಸುತ್ತಿದ್ದ ಬಿಟಿಎಂ ಲೇಔಟ್‌ನ ಷಣ್ಮುಗ(46)ರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಕೃತ್ಯದಲ್ಲಿ ದರ್ಶನ್ ಶ್ರೀರಾಂ ಜೊತೆ ಆತನ ಪತ್ನಿ ನಿಖಿತಾ ಗಾಡ್ವಿ ಭಾಗಿಯಾಗಿದ್ದು, ಆಕೆಗೆ ಒಂದು ವರ್ಷದ ಮಗು ಇರುವ ಹಿನ್ನೆಲೆ ನೋಟಿಸ್ ನೀಡಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿತೆ ನಿಖಿತಾ ಗಾಡ್ವಿ ಬೆಳಗಾವಿಯ ಕಾಗವಾಡ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ರಾಜು ಕಾಗೆ ಅವರ ಸಹೋದರನ ಪುತ್ರಿಯಾಗಿದ್ದು, ದರ್ಶನ್ ಶ್ರೀರಾಂರನ್ನು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಕಾಲ್‌ಸೆಂಟರ್ ವಂಚನೆ ಪ್ರಕರಣದಲ್ಲಿ ನಿಖಿತಾ ಆತನ ಪತಿ ಜೊತೆಗೆ ಕೈಜೋಡಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಏನಿದು ಪ್ರಕರಣ?: ಆರೋಪಿ ದಂಪತಿಗಳು ಆನ್‌ಲೈನ್ ಪೋರ್ಟಲ್‌ನಲ್ಲಿ ಕಂಪೆನಿ ನಡೆಸುತ್ತಿದ್ದ ಸಂಜೀತ್ ಬೋಹಾ ಎಂಬಾತನನ್ನು ಪರಿಚಯಿಸಿಕೊಂಡು 2015ರಲ್ಲಿಯೇ ‘ಡಿಎನ್‌ಎಸ್ ಪ್ರೈಮ್’ ಹೆಸರಿನ ನಕಲಿ ಕಂಪೆನಿಯನ್ನು ನೋಂದಣಿ ಮಾಡಿಸಿ ಸುಬ್ರಮಣ್ಯಪುರದಲ್ಲಿ ಕಚೇರಿ ಆರಂಭಿಸಿದ್ದಾರೆ.

ಬೆಂಗಳೂರು ಸೇರಿದಂತೆ ಆಂಧ್ರಪ್ರದೇಶ, ತಮಿಳುನಾಡು, ಕೇರಳ ಹಾಗೂ ಗೋವಾ ರಾಜ್ಯಗಳಲ್ಲಿ ಹೊಸದಾಗಿ ‘ಕಾಲ್‌ಸೆಂಟರ್ ಹಾಗೂ ಔಟ್ ಸೋರ್ಸಿಂಗ್’ ಕಂಪೆನಿಗಳನ್ನು ತೆರೆಯುವವರನ್ನು ಸಂಪರ್ಕಿಸುತ್ತಿದ್ದರು.

ಪ್ರತಿಷ್ಠಿತ ಇನ್ಫೋಸಿಸ್, ಹೆಚ್‌ಪಿ ಸೇರಿದಂತೆ ಹಲವು ಕಂಪೆನಿಗಳ ಹೆಸರಿನಲ್ಲಿ ನಕಲಿ ಇ-ಮೇಲ್ ಐಡಿಗಳನ್ನು ಸೃಷ್ಟಿಸಿದ್ದರು. ಇವುಗಳನ್ನು ತೋರಿಸಿ ಕಂಪೆನಿಗಳಿಂದ ಬರುವ ಔಟ್ ಸೋರ್ಸಿಂಗ್ ಪ್ರಾಜೆಕ್ಟ್ ಗಳನ್ನು ಕೊಡಿಸುವುದಾಗಿ ನಂಬಿಸುತ್ತಿದ್ದರು. ‘ರಾಯಲ್ಟಿ ಮತ್ತು ಬಂಡವಾಳ’ ನೆಪದಲ್ಲಿ ಲಕ್ಷಾಂತರ ರೂ. ಹಣ ಪಡೆದು, ಅನಧಿಕೃತ ಪ್ರಾಜೆಕ್ಟ್‌ಗಳನ್ನು ನೀಡುತ್ತಿದ್ದರು. ಬಳಿಕ ಉದ್ದೇಶಪೂರ್ವಕವಾಗಿ ಪ್ರಾಜೆಕ್ಟ್ ಸರಿಯಿಲ್ಲ ಎಂದು ನೆಪ ಹೇಳಿ ದಿಢೀರ್ ಕಾಂಟ್ರ್ಯಾಕ್ಟ್ ರದ್ದುಪಡಿಸುತ್ತಿದ್ದರು ಎಂದು ಅಣ್ಣಾಮಲೈ ವಿವರಿಸಿದರು.

ಬಳಿಕ ಹಣವನ್ನು ನೀಡದೇ ಗ್ರಾಹಕರನ್ನು ವಂಚಿಸುತ್ತಿದ್ದರು. ಹಣ ಕೊಡುವಂತೆ ಒತ್ತಾಯಿಸುವವರ ಮೇಲೆ ಸ್ಥಳೀಯ ರೌಡಿ ಷಣ್ಮುಗನನ್ನು ಬಿಟ್ಟು ಬೆದರಿಸುತ್ತಿದ್ದರು. ಹಳೆ ಕಂಪೆನಿಯನ್ನು ಮುಚ್ಚಿ, ಇತ್ತೀಚೆಗೆ ‘ಫಾಕ್ಸ್ ರನ್’ ಹೆಸರಿನ ಮತ್ತೊಂದು ನಕಲಿ ಕಂಪನಿಯನ್ನು ಆರಂಭಿಸಿದ್ದರು.

ಆರೋಪಿ ದಂಪತಿಗಳು ವಂಚನೆಯ ಹಣದಿಂದ ಸುಬ್ರಮಣ್ಯಪುರ ವ್ಯಾಪ್ತಿಯಲ್ಲಿ ನಿವೇಶನ ಖರೀದಿಸಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಹೊಂಡಾ ಸಿಟಿ ಕಾರ್, ಆ್ಯಪಲ್ ಕಂನಿಯ ಲ್ಯಾಪ್‌ಟಾಪ್ ಹಾಗೂ ಇನ್ನಿತರ ದಾಖಲಾತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಹತ್ತಾರು ಪ್ರಕರಣ, ಕೋಟ್ಯಂತರ ವಂಚನೆ..!

ಕುಮಾರಸ್ವಾಮಿ ಲೇಔಟ್ 1, ಯಲಹಂಕ 2 ಸೇರಿದಂತೆ ಒಟ್ಟು 8 ಪ್ರಕರಣಗಳು ದಾಖಲಾಗಿವೆ. ಇದುವರೆಗಿನ ಪ್ರಕರಣಗಳಿಂದ ಒಟ್ಟು 2.10 ಕೋಟಿ ರೂ. ಹಣ ವಂಚನೆಯಾಗಿರುವುದು ಪತ್ತೆಯಾಗಿದೆ. ಸುಮಾರು 75ಕ್ಕೂ ಹೆಚ್ಚು ವಂಚಿತ ಗ್ರಾಹಕರು ದೂರು ನೀಡಲು ಮುಂದಾಗಿದ್ದಾರೆ. ಪ್ರತಿಯೊಬ್ಬರಿಂದ ತಲಾ 8 ರಿಂದ 10 ಲಕ್ಷ ರೂ. ಹಣ ಪಡೆದುಕೊಂಡಿದ್ದಾರೆ.

-ಅಣ್ಣಾಮಲೈ, ಡಿಸಿಪಿ, ದಕ್ಷಿಣ ವಿಭಾಗ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News