25 ಕೋಟಿ ಕೇಳಿದ ಕುಮಾರಸ್ವಾಮಿಯ ವಿಡಿಯೋ ಸದನದಲ್ಲಿ ಬಿಡುಗಡೆ: ಬಿಜೆಪಿ ಎಚ್ಚರಿಕೆ

Update: 2019-02-09 14:15 GMT

ಬೆಂಗಳೂರು, ಫೆ. 9: ‘ಆಪರೇಷನ್ ಕಮಲ’ದ ಆಡಿಯೋ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿಗೆ ತಿರುಗೇಟು ನೀಡಲು ಸಿದ್ಧತೆ ನಡೆಸಿರುವ ಬಿಜೆಪಿ, ಪರಿಷತ್ ಸದಸ್ಯರನ್ನಾಗಿ ಮಾಡಲು 25 ಕೋಟಿ ರೂ.ಲಂಚ ಕೇಳಿದ ವಿಡಿಯೋವನ್ನು ಸೋಮವಾರ ಸದನದಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ವಿಡಿಯೋ ಸತ್ಯಾಸತ್ಯತೆಯನ್ನು ಅರಿಯಲು ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರಿಗೆ ಮನವಿ ಮಾಡಲಾಗುವುದು. ಅಲ್ಲದೆ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಸ್ಪೀಕರ್ ಕೊಠಡಿಗೆ ಕರೆಸಿ ವಿಚಾರಣೆ ನಡೆಸುವಂತೆ ಬಿಜೆಪಿ ನಾಯಕರು ಮನವಿ ಮಾಡಲಿದ್ದಾರೆ ಎಂದು ಲಿಂಬಾವಳಿ ತಿಳಿಸಿದ್ದಾರೆ.

ಕುಮಾರಸ್ವಾಮಿ ಕೀಳುಮಟ್ಟದ ರಾಜಕೀಯ ಎಷ್ಟರ ಮಟ್ಟಿಗೆ ಮಾಡುತ್ತಾರೆ ಎನ್ನುವ ಮಾತಿಗೆ ನಮ್ಮಲ್ಲಿರುವ ದೃಶ್ಯ ಮತ್ತು ಧ್ವನಿ ಸುರುಳಿಯೇ ಸಾಕ್ಷಿ. ಕುಮಾರಸ್ವಾಮಿ ಮತ್ತವರ ಕುಟುಂಬದ ಇತಿಹಾಸದಲ್ಲಿ ಇಂತಹ ಕೀಳುಮಟ್ಟದ ಘಟನೆ ಮೊದಲನೆಯದೂ ಅಲ್ಲ, ಕೊನೆಯದೂ ಅಲ್ಲ ಎಂದು ಲಿಂಬಾವಳಿ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ಹಳೆಯ ವಿಡಿಯೋ: ಪರಿಷತ್ ಸದಸ್ಯರನ್ನಾಗಿ ಮಾಡಲು ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಅವರ ಬೆಂಬಲಿಗರ ಜತೆ ಕುಮಾರಸ್ವಾಮಿ ಐದು ವರ್ಷಗಳ ಹಿಂದೆ ನಡೆಸಿದ್ದಾರೆ ಎನ್ನಲಾದ ವಿಡಿಯೋವನ್ನು ಬಿಡುಗಡೆ ಮಾಡುವ ಮೂಲಕ ಎಚ್‌ಡಿಕೆಗೆ ತಿರುಗೇಟು ನೀಡಲು ಬಿಜೆಪಿ ಮುಂದಾಗಿದೆ ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News