ಅಹಿಂದ ಸಮುದಾಯವನ್ನು ಕಡೆಗಣಿಸಿದ ರಾಜ್ಯ ಬಜೆಟ್: ಎಸ್‌ಡಿಪಿಐ

Update: 2019-02-09 14:27 GMT

ಬೆಂಗಳೂರು, ಫೆ.8: ರಾಜ್ಯ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ 2019-20ರ ಬಜೆಟ್‌ನಲ್ಲಿ ಅಹಿಂದ ಸಮುದಾಯವನ್ನು ಕಡೆಗಣಿಸಲಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರಾಜ್ಯ ಘಟಕ ಪ್ರತಿಕ್ರಿಯಿಸಿದೆ.

ರಾಜ್ಯದಲ್ಲಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯವು ಇತರ ವರ್ಗಗಳಿಗಿಂತ ಎಲ್ಲಾ ಕ್ಷೇತ್ರದಲ್ಲೂ ತೀರಾ ಹಿಂದುಳಿದಿದ್ದಾರೆ. ಆದರೆ, ರಾಜ್ಯ ಸರಕಾರ ಮಂಡಿಸಿರುವ ಬಜೆಟ್‌ನಲ್ಲಿ ಈ ಸಮುದಾಯಗಳಿಗೆ ನಿರೀಕ್ಷಿಸಿದಷ್ಟು ಬಜೆಟ್ ಅನ್ನು ನೀಡದೆ ಮೋಸ ಮಾಡಲಾಗಿದೆ ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ತಿಳಿಸಿದ್ದಾರೆ.

ಸರಕಾರಿ ಆಸ್ಪತ್ರೆ, ಶಿಕ್ಷಣ ಸಂಸ್ಥೆ, ಉರ್ದು ಶಾಲೆಗಳ ಅಭಿವೃದ್ಧಿ ಮತ್ತು ಗುಣಮಟ್ಟದ ಸೇವೆಗಳನ್ನು ನೀಡುವ ಬಗ್ಗೆ ಉಲ್ಲೇಖಿಸಲಾಗಿಲ್ಲ. ಸ್ಥಳೀಯ ನಗರ ಸಂಸ್ಥೆಯ ವ್ಯಾಪ್ತಿಯಲ್ಲಿನ ಒಳಚರಂಡಿ ವ್ಯವಸ್ಥೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವ ವಾಗ್ದಾನವನ್ನು ನೀಡಲಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಗಲ್ಫ್ ರಾಷ್ಟ್ರಗಳಿಂದ ಉದ್ಯೋಗ ಕಳೆದುಕೊಂಡು ತಾಯ್ನಾಡಿಗೆ ಮರಳುತ್ತಿರುವ ಅನಿವಾಸಿ ಕನ್ನಡಿಗರಿಗೆ ವಿಶೇಷ ಪ್ಯಾಕೇಜ್ ಘೋಷಣೆಯಾಗಿಲ್ಲ. ಅಂಗವಿಕಲರ ಮತ್ತು ವೃದ್ಧಾಪ್ಯ ವೇತನದ ಗರಿಷ್ಠ ಏರಿಕೆ ಮಾಡುವಲ್ಲಿ ರಾಜ್ಯ ಬಜೆಟ್ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಅತೀ ಹಿಂದುಳಿದಿರುವ ಮುಸ್ಲಿಂ ಸಮುದಾಯ ಶೈಕ್ಷಣಿಕ, ಆರ್ಥಿಕ, ಔದ್ಯೋಗಿಕ ಮತ್ತು ರಾಜಕೀಯವಾಗಿ ತೀರಾ ಹಿಂದುಳಿದಿದೆ. ಈ ಸಮುದಾಯವನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ನಮ್ಮ ಪಕ್ಷವು ಕಳೆದ ಮೂರು ವರ್ಷಗಳಿಂದ ಅಲ್ಪಸಂಖ್ಯಾತ ಸಮುದಾಯಕ್ಕೆ ಹತ್ತು ಸಾವಿರ ಕೋಟಿ ರೂ.ಬಜೆಟ್ ಮೀಸಲಿಡಬೇಕೆಂಬ ಬೇಡಿಕೆಯ ಹೊರಾಟ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ಬಜೆಟ್‌ನಲ್ಲೂ ಮುಸ್ಲಿಂ ಸಮುದಾಯದ ಬೇಡಿಕೆಯನ್ನು ಕಡೆಗಣಿಸಿರುವುದನ್ನು ಕಂಡರೆ ಮೈತ್ರಿ ಸರಕಾರವು ಕೆಳವರ್ಗದ ಜನತೆಯ ವಿರೋಧಿ ಎಂಬುವುದನ್ನು ಸಾಬೀತುಪಡಿಸಿದಂತಿದೆ. ಅದೇ ರೀತಿ ನಷ್ಟದಲ್ಲಿರುವ ಮತ್ತು ಈಗಾಗಲೇ ಬೀಗ ಜಡಿಯಲಾಗಿರುವ ಸರಕಾರಿ ಸ್ವಾಮ್ಯದ ಕಾರ್ಖಾನೆ ಮತ್ತು ಉದ್ಯಮಗಳ ಬಲವರ್ಧನೆಗಳ ಬಗ್ಗೆ ಯಾವುದೇ ಉಲ್ಲೇಖಗಳು ಕಾಣುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ. ಖಾಸಗಿ ವಲಯಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಯ ಬಗ್ಗೆ ಒತ್ತು ನೀಡಲಾಗಿಲ್ಲ. ರಾಜ್ಯದ ರೈತರಿಗೆ ನೀರಾವರಿ ಯೋಜನೆಗಳನ್ನು ಮತ್ತು ಸಾಲಮನ್ನಾದ ಬಗ್ಗೆ ಬಜೆಟ್‌ನಲ್ಲಿ ಉಲ್ಲೇಖಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಇದರ ಸಂಪೂರ್ಣ ಪ್ರಯೋಜನಗಳು ಅತೀ ಸಣ್ಣ ರೈತ ಮತ್ತು ರೈತ ಕೂಲಿ ಕಾರ್ಮಿಕರಿಗೂ ಸಿಗುವ ನಿಟ್ಟಿನಲ್ಲಿ ಸರಕಾರ ಮುತುವರ್ಜಿ ವಹಿಸಬೇಕು ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News