ಬೆಳಗಾವಿ: ಫೆ.10ಕ್ಕೆ ರಾಷ್ಟ್ರ, ಅಂತರ್‌ರಾಷ್ಟ್ರೀಯ ಕುಸ್ತಿ ಪಟುಗಳಿಂದ ಜಂಗಿ ಕುಸ್ತಿ ಪ್ರದರ್ಶನ

Update: 2019-02-09 14:45 GMT

ಬೆಳಗಾವಿ, ಫೆ.9: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರದಿಂದ ಆರಂಭಗೊಂಡಿರುವ ಕರ್ನಾಟಕ ಕುಸ್ತಿ ಹಬ್ಬದಲ್ಲಿ ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಗಳು ಬರದಿಂದ ನಡೆಯುತ್ತಿದ್ದು, ಫೆ.10ರಂದು ರಾಷ್ಟ್ರ ಮತ್ತು ಅಂತರ್‌ರಾಷ್ಟ್ರೀಯ ಕುಸ್ತಿ ಪಟುಗಳಿಂದ ಜಂಗಿ ಕುಸ್ತಿ ಪ್ರದರ್ಶನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ. 

ಅಂದು ಅಂತರ್‌ರಾಷ್ಟ್ರೀಯ ಕುಸ್ತಿಪಟು ಜಾರ್ಜಿಯಾ ದೇಶದ ಪೈಲ್ವಾನ್ ಇಬಾನೈಡಿಜ್ ಟೆಡೊರ್ ಮತ್ತು ಕಾಮನ್‌ವೆಲ್ತ್ ಪದಕ ಮತ್ತು 14 ಬಾರಿ ಭಾರತ ಕೇಸರಿ ವಿಜೇತ ಹರಿಯಾಣದ ಪೈಲ್ವಾನ್ ಮೌಸಮ್ ಖತ್ರಿ ಹಾಗೂ ಜಾರ್ಜಿಯಾದ ಪೈಲ್ವಾನ್ ಮಾಮುಕಾ ಕೋರ್ಡ್ಜಾಲಾ-ಪಂಜಾಬ್‌ನ ಪೈಲ್ವಾನ್ ಗೌರವ ಸಿಂಗ್ ನಡುವೆ ವಿಶ್ವ ಮಲ್ಲಯುದ್ಧ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ಅಜರ್‌ಬೈಜಾನ್ ದೇಶದ ಅಂತರ್‌ರಾಷ್ಟ್ರೀಯ ಮಹಿಳಾ ಕುಸ್ತಿ ಪಟು ಪೈಲ್ವಾನ್ ಅಲಿಯಾನಾ ಕೊಲೆಸ್ನಿಕ್, ರಾಷ್ಟ್ರೀಯ ಚಾಂಪಿಯನ್ ಆದ ಹರಿಯಾಣದ ಪೈಲ್ವಾನ್ ಪಿಂಕಿ ಅವರೊಂದಿಗೆ, ಅಜರ್‌ಬೈಜಾನ್‌ದ ಪೈಲ್ವಾನ್ ಜಯ್ಲಾ ನಾಗಿಸೇಡೆ ಹಾಗೂ ಹರಿಯಾಣದ ರೀತೂ ಮಲ್ಲಿಕ್ ಮಧ್ಯೆ ಸೆಣಸಾಟ ನಡೆಯಲಿದೆ.

ಪುಣೆಯ ಪೈಲ್ವಾನ್ ವಿಷ್ಣು ಕೋಶೆ ಅವರು ದಿಲ್ಲಿಯ ಪೈಲ್ವಾನ್ ಮಂಜೀತ್ ಖತ್ರಿ, ಕೊಲ್ಹಾಪುರದ ಪೈಲ್ವಾನ್ ಜ್ಞಾನೇಶ್ವರ ಮೌಲಿ ಅವರು ಅಂತರ್‌ರಾಷ್ಟ್ರೀಯ ಕುಸ್ತಿ ಪಟು ಹರಿಯಾಣದ ಪೈಲ್ವಾನ್ ಪ್ರವೀಣ ಬೋಲಾ, ಉತ್ತರ ಪ್ರದೇಶದ ಉಮೇಶ್ ಚೌಧರಿ ಜೊತೆ ಪಂಜಾಬಿನ ಪೈಲ್ವಾನ್ ಕವಲಜೀತ್.

ಪೂನಾದ ಪೈಲ್ವಾನ್ ಸಾಗರ್ ಬಿರಾದಾರ್ ಜೊತೆ ಪಂಜಾಬಿನ ಪೈಲ್ವಾನ್ ಸುಖಚೆನ್ ಸಿಂಗ್, ಅಂತರ್‌ರಾಷ್ಟ್ರೀಯ ಕುಸ್ತಿಪಟು ಹರಿಯಾಣದ ಸುಮಿತ್ ಕುಮಾರ್ ಜೊತೆ ಕರ್ನಾಟಕ ಕೇಸರಿ ರಾಣಿಬೆನ್ನೂರಿನ ಪೈಲ್ವಾನ್ ಕಾರ್ತಿಕ್ ಕಾಟೆ, ರಾಷ್ಟ್ರೀಯ ಚಾಂಪಿಯನ್ ಆದ ಮಧ್ಯಪ್ರದೇಶದ ರಾಣಿ ರಾಣಾ ಗ್ವಾಲಿಯರ್ ಜೊತೆ ಅಂತರ್ ರಾಷ್ಟ್ರೀಯ ಪದಕ ವಿಜೇತೆ ಮಹಾರಾಷ್ಟ್ರದ ಪೈಲ್ವಾನ್ ಸ್ವಾತಿ ಶಿಂದೆ ಮಲ್ಲಯುದ್ಧ ನಡೆಸಲಿದ್ದಾರೆ ಎಂದು ಎಸ್.ಬಿ.ಬೊಮ್ಮನಳ್ಳಿ ಪ್ರಕಟಣೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News