×
Ad

ರಾಜ್ಯಾದ್ಯಂತ 70 ಸಾವಿರ ಮಕ್ಕಳು ಶಾಲೆಯಿಂದ ಹೊರಗೆ: ಸಮೀಕ್ಷಾ ವರದಿ

Update: 2019-02-09 22:42 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ.9: ಪ್ರಾಥಮಿಕ ಶಿಕ್ಷಣ ಇಲಾಖೆ ನಡೆಸಿರುವ ಸಮೀಕ್ಷೆ ನೀಡಿದ ವರದಿಯಲ್ಲಿ ರಾಜ್ಯಾದ್ಯಂತ ಒಟ್ಟು 70,116 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಬೆಂಗಳೂರು ದಕ್ಷಿಣದಲ್ಲೇ ಅತಿ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎನ್ನುವ ಮಾಹಿತಿ ಬಹಿರಂಗಗೊಂಡಿದೆ.

ಕಲಬುರಗಿ, ಯಾದಗಿರಿ ಹಾಗೂ ಇತರೆ ಜಿಲ್ಲೆಗಳಲ್ಲಿ ಶಾಲೆಯಿಂದ ದೂರ ಉಳಿದಿರುವ ಮಕ್ಕಳಿದ್ದು, ಅದರಲ್ಲಿ ಬೆಂಗಳೂರು ದಕ್ಷಿಣದಲ್ಲಿ ಹೆಚ್ಚು ಮಕ್ಕಳು ಶಾಲೆಯಿಂದ ವಂಚಿತರಾಗಿದ್ದಾರೆ ಎಂಬ ಅಂಶ ವರದಿಯಾಗಿದೆ.

ಮಕ್ಕಳ ಪೋಷಕರು ಕೆಲಸವನ್ನು ಹುಡುಕಿಕೊಂಡು ಪ್ರತಿವರ್ಷ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಲಸೆ ಹೋಗುವುದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ. ಇನ್ನುಳಿದಂತೆ ಮಕ್ಕಳ ಅನಾರೋಗ್ಯ ಸಮಸ್ಯೆ, ಮನೆಯಿಂದ ದೂರ, ಹೆಣ್ಣು ಮಕ್ಕಳಿಗೆ ಶಿಕ್ಷಣ ನಿರಾಕರಣೆಯ ಕಾರಣಗಳೂ ಕೆಲವು ಸೇರಿಕೊಂಡಿವೆ.

ರಾಜ್ಯಾದ್ಯಂತ ಒಟ್ಟು 70,116 ಮಕ್ಕಳು ಶಾಲೆಯಿಂದ ದೂರ ಉಳಿದಿದ್ದಾರೆ. ಕಳೆದ ವರ್ಷ 14,192 ಮಂದಿ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದರು. ಪ್ರಸಕ್ತ ವರ್ಷದಲ್ಲಿ 39,059 ಮಂದಿ ಗಂಡು ಮಕ್ಕಳಿದ್ದು, 39,054 ಮಂದಿ ಹೆಣ್ಣು ಮಕ್ಕಳಿದ್ದಾರೆ. 2018ರ ನವೆಂಬರ್ 14ರಿಂದ 30ರವರೆಗೆ 14 ವರ್ಷದೊಳಗೆ ಮಕ್ಕಳ ಸಮೀಕ್ಷೆಯನ್ನು ರಾಜ್ಯಾದ್ಯಂತ ನಡೆಸಲಾಗಿತ್ತು.

ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಸರಕಾರಿ ಶಾಲೆಗಳಷ್ಟೇ ಅಲ್ಲದೆ, ಖಾಸಗಿ ಶಾಲೆಯ ಡಾಟಾವನ್ನು ಪಡೆದುಕೊಳ್ಳಲಾಗುತ್ತಿದೆ. ಬೆಂಗಳೂರು ದಕ್ಷಿಣ-10,233, ಕಲಬುರಗಿ-5,752, ಯಾದಗಿರಿ-5,741, ವಿಜಯಪುರ-4,417 ಬಳ್ಳಾರಿ-4,132, ತುಮಕೂರು-299, ಮಧುಗಿರಿ-288, ಬೆಳಗಾವಿ-527 ಬೆಂಗಳೂರು ಗ್ರಾಮಾಂತರ-553, ಉಡುಪಿ-775, ಕೊಪ್ಪಳ-775 ಮಂದಿ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News