ಕಾಯ್ದೆ ಅನುಷ್ಠಾನಕ್ಕೆ ಸಚಿವ ರೇವಣ್ಣ ಅಡ್ಡಗಾಲು ಹಾಕುತ್ತಿರುವುದು ಸರಿಯಲ್ಲ: ದಲಿತ ಮುಖಂಡ ಅಡಿವೆಪ್ಪ ಸಾಲಗಲ್ಲ

Update: 2019-02-09 17:46 GMT

ವಿಜಯಪುರ,ಫೆ.9: ರಾಜ್ಯದಲ್ಲಿ ಎಸ್ಸಿ-ಎಸ್ಟಿ ನೌಕರರ ಮೀಸಲಾತಿ ಜೇಷ್ಠತೆ ವಿಸ್ತರಿಸುವ ಕಾಯ್ದೆ-2017ನ್ನು ಅನುಷ್ಠಾನಗೊಳಿಸುವಲ್ಲಿ ಸಚಿವ ಎಚ್.ಡಿ. ರೇವಣ್ಣ ಅಡ್ಡಗಾಲು ಹಾಕುತ್ತಿರುವುದು ಸರಿಯಲ್ಲ. ಕೂಡಲೇ ತಮ್ಮ ವರ್ತನೆಯನ್ನು ತಿದ್ದುಕೊಳ್ಳಬೇಕು, ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ವಿಜಯಪುರ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ಅಡಿವೆಪ್ಪ ಸಾಲಗಲ್ಲ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸಿ-ಎಸ್‍ಟಿ ನೌಕರರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಮೀಸಲಾತಿ ಜೇಷ್ಠತೆ ವಿಸ್ತರಿಸುವ ಕಾಯ್ದೆ-2017 ಕ್ಕೆ ಈಗಾಗಲೇ ರಾಷ್ಟ್ರಪತಿಗಳ ಅಂಕಿತವಾಗಿದೆ. ಈಗ ಸರ್ಕಾರಿ ಹಂತದಲ್ಲಿ ಅನುಷ್ಠಾನದಲ್ಲಿದ್ದ ಸಂದರ್ಭದಲ್ಲಿ ಸಚಿವ ಎಚ್.ಡಿ. ರೇವಣ್ಣ ಬಹಿರಂಗವಾಗಿಯೇ ಇದನ್ನು ವಿರೋಧ ವ್ಯಕ್ತಪಡಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಸಚಿವ ಸಂಪುಟದಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆದಾಗ ಅನಗತ್ಯವಾಗಿ ಗೈರಾಗುವುದು, ಬಹಿರಂಗವಾಗಿ ಈ ಕಾಯ್ದೆಯ ವಿರುದ್ದ ಹೇಳಿಕೆ ನೀಡುವ ಮೂಲಕ ಎಚ್.ಡಿ. ರೇವಣ್ಣ ಪ್ರತಿ ಹಂತದಲ್ಲಿಯೂ ದಲಿತ ವಿರೋಧಿ ನೀತಿ ಅನುಸರಣೆ ಮಾಡುತ್ತಿದ್ದಾರೆ. ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಅಧಿಕಾರಿ, 10 ಸಾವಿರಕ್ಕೂ ಅಧಿಕ ಸಿಬ್ಬಂದಿ ಹಿಂಬಡ್ತಿ ಆದೇಶದಿಂದಾಗಿ ಮನನೊಂದಿದ್ದಾರೆ. ಈಗ ನೌಕರರಿಗೆ ನ್ಯಾಯ ಒದಗಿಸಬೇಕಾದ ಸರ್ಕಾರಗಳು ಕೆಲವರ ಮಾತು ಕೇಳಿ ಸಾವಿರಾರು ನೌಕರರಿಗೆ ಅನ್ಯಾಯ ಮಾಡುವಲ್ಲಿ ನಿರತವಾಗಿವೆ ಎಂದರು.

ಪ್ರಸ್ತುತ ದೋಸ್ತಿ ಸರ್ಕಾರವಿದೆ. ಹೀಗಾಗಿ ಕಾಂಗ್ರೆಸ್ ಸರ್ಕಾರಕ್ಕೂ ನಾವು ಈ ಬಗ್ಗೆ ಪ್ರಶ್ನೆ ಮಾಡುತ್ತೇವೆ. ಎಸ್ಸಿ-ಎಸ್‍ಟಿಗಳನ್ನು ಕೇವಲ ಕಾಂಗ್ರೆಸ್ ಮತ ಬ್ಯಾಂಕ್ ಆಗಿ ಅಷ್ಟೇ ನೋಡುತ್ತದೆಯೋ ಅಥವಾ ಅವರ ಬಗ್ಗೆ ನೈಜ ಕಾಳಜಿ ಹೊಂದಿದೆಯೇ ಎಂಬುದನ್ನು ಈ ಕಾಯ್ದೆ ಜಾರಿಗೆ ಒತ್ತಾಯಿಸಿ ತನ್ನ ಬದ್ಧತೆ ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು. 

ಅತ್ತ ಜೆಡಿಎಸ್ ಸಚಿವ ರೇವಣ್ಣ ಅವರು ದಲಿತ ವಿರೋಧಿ ನೀತಿ ಅನುಸರಿಸಿ ಸಾವಿರಾರು ದಲಿತ ನೌಕರರಿಗೆ ಅನ್ಯಾಯವಾಗುವಂತೆ ನಡೆದುಕೊಳ್ಳುತ್ತಿದ್ದಾರೆ. ಇತ್ತ ಜೆಡಿಎಸ್ ಪರಿಶಿಷ್ಟ ಜಾತಿ ಸಮಾವೇಶ ನಡೆಸಲು ಸಜ್ಜಾಗಿದೆ. ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಜೆಡಿಎಸ್ ಪಕ್ಷಕ್ಕೆ ಪರಿಶಿಷ್ಟ ಜಾತಿ ಸಮಾವೇಶ ನಡೆಸುವ ಯಾವುದೇ ನೈತಿಕ ಹಕ್ಕಿಲ್ಲ. ಒಂದು ವೇಳೆ ಮುಂದಿನ ದಿನಗಳಲ್ಲಿ ಸಮಾವೇಶ ಸಂಘಟಿಸಿದ್ದೇ ಆದಲ್ಲಿ ಕಪ್ಪುಬಾವುಟ ಪ್ರದರ್ಶಿಸಲಾಗುವುದು ಎಂದು ಕರೆ ನೀಡಿದರು.

ರಾಜಿನಾಮೆ ನೀಡಿ ಹೊರಬರಲಿ 
ಎಲ್ಲ ಪಕ್ಷಗಳಲ್ಲಿಯೂ ದಲಿತ ಸಮಾಜದ ಶಾಸಕರಿದ್ದಾರೆ, ರಮೇಶ ಜಿಗಜಿಣಗಿ, ಗೋವಿಂದ ಕಾರಜೋಳ, ಡಾ.ದೇವಾನಂದ ಚೌವ್ಹಾಣ, ಸಚಿವ ಪ್ರಿಯಾಂಕ್ ಖರ್ಗೆ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಎಲ್ಲರೂ ರಾಜೀನಾಮೆ ನೀಡಿ ಹೊರಬರಬೇಕು ಎಂದು ಸಾಲಗಲ್ ಒತ್ತಾಯಿಸಿದರು.

ದಲಿತ ನೌಕರರ ಹಿತರಕ್ಷಣೆ ಕಾಪಾಡಲು ಸಾಧ್ಯವಾಗದೇ ಇದ್ದರೆ ಅವರು ಅಧಿಕಾರದಲ್ಲಿರುವ ಉಪಯೋಗವಾದರೂ ಏನು? ಈಗಾಗಲೇ ಡಾ.ಜಿ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ ಮೊದಲಾದವರು ಈ ಕಾಯ್ದೆಯ ಬಗ್ಗೆ ಪ್ರಬಲವಾಗಿ ಒತ್ತಾಯಿಸುತ್ತಿದ್ದಾರೆ. ಅದರಲ್ಲಿ ಎರಡು ಮಾತಿಲ್ಲ. ಒಂದು ವೇಳೆ ಕಾಯ್ದೆ ಜಾರಿಗೊಳಿಸಲು ರೇವಣ್ಣ ಮತ್ತೆ ತಮ್ಮ ಅಸಡ್ಡೆ ಮುಂದುವರೆಸಿದರೆ ಎಲ್ಲರೂ ರಾಜಿನಾಮೆ ನೀಡಿ ಹೊರಬರಲಿ ಎಂದು ಒತ್ತಾಯಿಸುತ್ತೇವೆ ಎಂದು ಸಾಲಗಲ್ ಹೇಳಿದರು. 

ಆರೆಸ್ಸೆಸ್-ಮನುವಾದಿಗಿಂತ ರೇವಣ್ಣ ಡೇಂಜರ್
ದಲಿತ ಮುಖಂಡ ಜಿತೇಂದ್ರ ಕಾಂಬಳೆ ಮಾತನಾಡಿ, ದಲಿತ ನೌಕರರ ಹಿತರಕ್ಷಣೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಎಚ್.ಡಿ. ರೇವಣ್ಣ ಒಂದು ರೀತಿ ಮನುವಾದಿ ಸಂಸ್ಕೃತಿ ಅಷ್ಟೇ ಅಲ್ಲ, ಆರೆಸ್ಸೆಸ್ ಗಿಂತಲೂ ಭಯಂಕರವಾಗಿ ನಡೆದುಕೊಳ್ಳುತ್ತಿದ್ದಾರೆ. ತಮ್ಮ ಈ ವರ್ತನೆಯನ್ನು ಕೂಡಲೇ ಕೈ ಬಿಡದಿದ್ದರೆ ಸಮಾಜ ಬಾಂಧವರೊಡನೆ ಚರ್ಚಿಸಿ ಅವರ ಮನೆಯ ಮುಂದೆ ಬೃಹತ್ ಹೋರಾಟ ನಡೆಸಲಾಗುವುದು, ಅಷ್ಟೇ ಅಲ್ಲ ಅಗತ್ಯಬಿದ್ದರೆ ದಲಿತ ಜನಪ್ರತಿನಿಧಿಗಳ ಮನೆ ಮುಂದೆಯೇ ಧರಣಿ ನಡೆಸಲು ನಾವು ಹಿಂಜರಿಯುವುದಿಲ್ಲ ಎಂದು ಕಾಂಬಳೆ ಸ್ಪಷ್ಟಪಡಿಸಿದರು. ನ್ಯಾಯವಾದಿ, ದಲಿತ ಮುಖಂಡ ನಾಗರಾಜ ಲಂಬು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News