97ನೇ ವಯಸ್ಸಲ್ಲಿ ಚಾಲನಾ ಲೈಸನ್ಸ್ ಅಧಿಕಾರಿಗಳಿಗೆ ಒಪ್ಪಿಸಿದ ಇಂಗ್ಲೆಂಡಿನ ರಾಜ

Update: 2019-02-10 03:36 GMT

ಲಂಡನ್, ಫೆ. 10: ಶತಕದ ಸನಿಹದಲ್ಲೂ ಕಾರು ಚಾಲನೆ ಮಾಡಿ ಕಳೆದ ತಿಂಗಳು ಅಪಘಾತಕ್ಕೀಡಾದ ಬಗ್ಗೆ ಮಾಧ್ಯಮ ಹಾಗೂ ಸಮಾಜದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಣಿ ಎಲಿಜಬೆತ್ ಅವರ ಪತಿ ರಾಜ ಫಿಲಿಪ್ (97) ತಮ್ಮ ಚಾಲನಾ ಪರವಾನಗಿಯನ್ನು ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಈ ಅಪಘಾತ ವೃದ್ಧಾಪ್ಯದಲ್ಲಿ ಕಾರು ಚಾಲನೆ ಮಾಡುವುದನ್ನು ನಿಷೇಧಿಸುವ ಬಗ್ಗೆ ದೇಶವ್ಯಾಪಿ ಚರ್ಚೆ ಹುಟ್ಟುಹಾಕಿತ್ತು.

ಡ್ಯೂಕ್ ಆಫ್ ಎಡಿನ್‌ ಬರ್ಗ್ ಎಂದು ಹಿಂದೆ ಕರೆಯಲ್ಪಡುತ್ತಿದ್ದ ರಾಜ ಫಿಲಿಪ್, ಕಳೆದ ವಾರ ತಮ್ಮ ಲ್ಯಾಂಡ್ ರೋವರ್ ಚಾಲನೆ ಮಾಡುವಾಗ ಮಾರ್ಗದ ಮಧ್ಯದಲ್ಲಿ ಉರುಳಿದ ಹಿನ್ನೆಲೆಯಲ್ಲಿ ಚಾಲನಾ ಲೈಸನ್ಸ್ ಮರಳಿ ಒಪ್ಪಿಸಲು ಸ್ವಯಂ ನಿರ್ಧಾರ ಕೈಗೊಂಡಿದ್ದಾರೆ.

"ಈ ಘಟನೆಯನ್ನು ಜಾಗರೂಕವಾಗಿ ಪರಿಗಣಿಸಿದ ಬಳಿಕ ಎಡಿನ್‌ಬರ್ಗ್‌ನ ಡ್ಯೂಕ್ ಸ್ವಯಂಪ್ರೇರಿತರಾಗಿ ಲೈಸನ್ಸ್ ಒಪ್ಪಿಸುವ ನಿರ್ಧಾರಕ್ಕೆ ಬಂದರು" ಎಂದು ಬಕಿಂಗ್‌ಹ್ಯಾಮ್ ಪ್ಯಾಲೇಸ್‌ನ ಪ್ರಕಟಣೆ ಹೇಳಿದೆ.

ಪೂರ್ವ ಇಂಗ್ಲೆಂಡಿನಲ್ಲಿರುವ ರಾಜನಿವಾಸದ ಹೊರಗೆ ಈ ಅಪಘಾತ ಸಂಭವಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಯಾರ ವಿರುದ್ಧವಾದರೂ ಪ್ರಕರಣ ದಾಖಲಿಸಬೇಕೇ ಎಂದು ಪರಿಶೀಲಿಸುವ ಸಲುವಾಗಿ ಕಾನೂನು ತಜ್ಞರ ಬಳಿಗೆ ಫಿಲಿಪ್ ಅವರ ಕಡತ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News