×
Ad

ಸಿದ್ದಾಪುರ ವಿದ್ಯಾರ್ಥಿನಿ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು: ಪೊದೆಯಲ್ಲಿ ಬ್ಯಾಗ್, ಶೂ ಪತ್ತೆ

Update: 2019-02-10 17:53 IST

ಸಿದ್ದಾಪುರ (ಕೊಡಗು), ಫೆ.10: ಕಳೆದ ಏಳು ದಿನಗಳಿಂದ ಕಾಲೇಜು ವಿದ್ಯಾರ್ಥಿನಿಯೋರ್ವಳು ನಿಗೂಢವಾಗಿ ನಾಪತ್ತೆಯಾಗಿದ್ದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ವಿದ್ಯಾರ್ಥಿನಿಯ ಬ್ಯಾಗ್ ಮತ್ತು ಶೂ ಟಾಟಾ ಕಾಫಿ ಸಂಸ್ಥೆಯ ತೋಟದ ಪೊದೆಯೊಂದರಲ್ಲಿ ಪತ್ತೆಯಾಗಿದೆ.

ಕಾರ್ಮಿಕ ದಂಪತಿಗಳಾದ ಚಂದ್ರ ಮತ್ತು ಪಾರ್ವತಿ ಎಂಬವರ ಪುತ್ರಿ ನೆಲ್ಯಹುದಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಂಧ್ಯಾ (17) ಕಾಣೆಯಾದ ವಿದ್ಯಾರ್ಥಿನಿ. ಈಕೆ ಫೆ.4 ರಂದು ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಟಾಟಾ ಕಾಫಿ ಸಂಸ್ಥೆಯ ಸಿದ್ದಾಪುರ ಎಸ್ಟೇಟ್‍ನ ತೋಟದ ಮನೆಯ ಸಮೀಪದ ಕೆರೆಯ ಬಳಿಯಿಂದ ನಾಪತ್ತೆಯಾಗಿದ್ದಳು. ಮನೆಗೆ ತೆರಳುತ್ತಿದ್ದ ವೇಳೆ ಮುಂಬಯಿಯಲ್ಲಿ ಕೆಲಸದಲ್ಲಿರುವ ತನ್ನ ಸಂಬಂಧಿ ಯುವಕನೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಾ ಹೋಗುತ್ತಿದ್ದಳು ಎನ್ನಲಾಗಿದೆ. ತೋಟದೊಳಗಿನ ಕೆರೆ ಸಮೀಪ ಬಂದಾಗ ಆಕೆ ಜೋರಾಗಿ ಕಿರುಚಿದ ಶಬ್ದ ಕೇಳಿಸಿದ್ದು, ಅದಾದ ಬಳಿಕ ಯುವಕ ಆಕೆಯ ದೂರವಾಣಿಗೆ ಕರೆ ಮಾಡಲು ಪ್ರಯತ್ನಿಸಿದಾಗ ಎರಡು ಬಾರಿ ಕರೆಯನ್ನು ಕಡಿತಗೊಳಿಸಿದ್ದು ಮೂರನೇ ಬಾರಿ ಕರೆ ಮಾಡಿದಾಗ ಮೊಬೈಲ್ ಸ್ವಿಚ್ಛ್ ಆಫ್ ಆಗಿತ್ತು ಎನ್ನಲಾಗಿದೆ.

ತಕ್ಷಣ ಸಂಬಂಧಿಕರಿಗೆ ವಿಷಯ ತಿಳಿಸಲಾಗಿ ಕಾಫಿ ತೋಟದಲ್ಲಿ ಹುಡುಕಾಡಿದ್ದಾರೆ. ಬಳಿಕ ಪೋಷಕರು ಸಿದ್ದಾಪುರ ಠಾಣೆಗೆ ದೂರು ನೀಡಲಾಗಿದ್ದು, ಎರಡು ದಿನಗಳ ಕಾಲ ಕಾರ್ಮಿಕರು ಕೆಲಸಕ್ಕೆ ತೆರಳದೆ ತೋಟದಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಪೊಲೀಸರು ಆಕೆಯ ಮೊಬೈಲ್ ಸಂಪರ್ಕದಲ್ಲಿದ್ದ ಸಹಪಾಠಿಗಳನ್ನು ಹಾಗೂ ಕೆಲವು ಸಂಶಯಾಸ್ಪದ ವ್ಯಕ್ತಿಗಳನ್ನು ಪ್ರಶ್ನೆ ಮಾಡಿದ್ದಾರೆ. ವಿದ್ಯಾರ್ಥಿನಿಯ ಮೊಬೈಲ್ ಸ್ವಿಚ್ಛ್ ಆಫ್ ಆದ ನಂತರ ಗುಹ್ಯ ಸಮೀಪದಲ್ಲಿ ಟವರ್ ಲೊಕೇಶನ್ ಇರುವುದಾಗಿ ತಿಳಿದುಬಂದಿದೆ. ವಿದ್ಯಾರ್ಥಿನಿ ಪತ್ತೆ ಆಗದ ಕಾರಣ ಫೆ.7 ರಂದು ಮಡಿಕೇರಿ ಅಗ್ನಿ ಶಾಮಕ ದಳದ ಸಹಕಾರದೊಂದಿಗೆ ಪೊಲೀಸರು ಕಾಫಿ ತೋಟದೊಳಗಿನ ಕೆರೆಯಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ. ವಿದಾರ್ಥಿನಿಯು ನಾಪತ್ತೆ ಆಗುವ ನಿಮಿಷಗಳ ಮೊದಲು ಕಾಫಿ ತೋಟದ ಕಾವಲುಗಾರ ಹಾಗೂ ಸಂಸ್ಥೆಗೆ ಸೇರಿದ ಟಿಪ್ಪರ್ ಲಾರಿಯ ಚಾಲಕ ವಿದ್ಯಾರ್ಥಿನಿಯನ್ನು ಕಂಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. 

ಪೊದೆಯೊಳಗೆ ಪತ್ತೆಯಾದ ವಿದ್ಯಾರ್ಥಿನಿಯ ಬ್ಯಾಗ್, ಶೂ: ನಿಗೂಢವಾಗಿ ನಾಪತ್ತೆಯಾಗಿದ್ದ ವಿದ್ಯಾರ್ಥಿನಿಯ ಬ್ಯಾಗ್ ಮತ್ತು ಶೂ ಸಿದ್ದಾಪುರ ಎಸ್ಟೇಟ್‍ನ ಕಾಫಿ ತೋಟದ ಪೊದೆಯೊಂದರಲ್ಲಿ ರವಿವಾರ ಬೆಳಿಗ್ಗೆ ಪತ್ತೆಯಾಗಿದೆ. ಕಾರ್ಮಿಕರು ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಕೆರೆಯಿಂದ ಅಂದಾಜು 100 ಮೀ. ದೂರದಲ್ಲಿ ತೋಟದ ಪೊದೆಯೊಂದರಲ್ಲಿ ಅಡಗಿಸಿಟ್ಟಿರುವಂತೆ ಬ್ಯಾಗ್ ಮತ್ತು ಶೂ ಕಂಡಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸಿದ್ದಾಪುರ ಪಿಎಸ್‍ಐ ದಯಾನಂದ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭ ವಿದ್ಯಾರ್ಥಿನಿ ನಾಪತ್ತೆಯಾದ ಸಂದರ್ಭದಲ್ಲಿ ತೋಟದಲ್ಲಿ ಹುಡುಕಾಟ ನಡೆಸಿದವರನ್ನು ವಿಚಾರಿಸಿದಾಗ 5 ದಿನಗಳ ಹಿಂದೆ ಈ ಸ್ಥಳದಲ್ಲಿಯೂ ಹುಡುಕಾಟ ನಡೆಸಿದ್ದು ಇಲ್ಲಿ ಯಾವುದೇ ವಸ್ತುಗಳು ಇರಲಿಲ್ಲ ಎಂಬುದಾಗಿ ಕಾರ್ಮಿಕರು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. 

ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ: ವಿದ್ಯಾರ್ಥಿನಿಯ ಬ್ಯಾಗ್ ಮತ್ತು ಶೂ ಪತ್ತೆಯಾದ ಕೂಡಲೆ ಮಡಿಕೇರಿಯಿಂದ ಬೆರಳಚ್ಚು ತಜ್ಞರು ಮತ್ತು ಶ್ವಾನ ದಳ ಸ್ಥಳಕ್ಕೆ ಭೇಟಿ ನೀಡಿದರು. ಬ್ಯಾಗ್ ಮತ್ತು ಶೂ ಪತ್ತೆಯಾದ ಸ್ಥಳದಿಂದ ಸಾಗಿದ ಶ್ವಾನ ನೇರವಾಗಿ ಕಾಫಿ ತೋಟದ ಲೈನ್ ಮನೆ ಹಾಗೂ ಸುತ್ತಮುತ್ತಲಿನಲ್ಲಿ ಓಡಾಡಿದೆ. ವಿದ್ಯಾರ್ಥಿನಿಯ ಶೂ ಸೇರಿದಂತೆ ಬ್ಯಾಗಿನಲ್ಲಿದ್ದ ಪುಸ್ತಕಗಳನ್ನು ಹಾಗೂ ಇತರ ವಸ್ತುಗಳನ್ನು ಬೆರಳಚ್ಚು ತಜ್ಞರು ಪರೀಶೀಲನೆ ನಡೆಸಿದ್ದಾರೆ. ಸಿಐ ಅನೂಪ್ ಮಾದಪ್ಪ ನೇತೃತ್ವದಲ್ಲಿ ಪೊಲೀಸ್ ತಂಡ ಚುರುಕಿನ ತನಿಖೆ ಮುಂದುವರೆಸಿದ್ದಾರೆ.

ಕಳೆದ ಏಳು ದಿನಗಳಿಂದ ವಿದ್ಯಾರ್ಥಿನಿಯು ಪತ್ತೆ ಆಗದ ಕಾರಣ ಗ್ರಾಮಸ್ಥರು, ಪೋಷಕರು ಸೇರಿದಂತೆ ಗ್ರಾಮವೇ ಆತಂಕಕ್ಕೀಡಾಗಿದ್ದು, ಪೊಲೀಸರು ಶೀಘ್ರ ತನಿಖೆ ಮಾಡಬೇಕೆಂದು ಆಗ್ರಹಿಸಿ ಕೆಲವು ಸಂಘಟನೆಗಳು ಕೂಡಾ ಪೊಲೀಸ್ ಇಲಾಖೆಯನ್ನು ಒತ್ತಾಯಿಸುತ್ತಿದೆ. ಇದೀಗ ಬ್ಯಾಗ್ ಮತ್ತು ಶೂ ಪತ್ತೆಯಾಗಿದ್ದರಿಂದ ಪ್ರಕರಣ ಕೂಡಲೇ ಬೇಧಿಸುವ ಭರವಸೆಯನ್ನು ಪೊಲೀಸರು ವ್ಯಕ್ತ ಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News