×
Ad

‘ನಿವೃತ್ತಿ ಘೋಷಿಸಿ, ನುಡಿದಂತೆ ನಡೆಯಲಿ’: ಯಡಿಯೂರಪ್ಪರಿಗೆ ಮೈತ್ರಿ ನಾಯಕರ ಒತ್ತಾಯ

Update: 2019-02-10 18:02 IST

ಬೆಂಗಳೂರು, ಫೆ. 10: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕ ಬಿ.ಎಸ್. ಯಡಿಯೂರಪ್ಪ ಕೂಡಲೇ ರಾಜಕೀಯ ನಿವೃತ್ತಿ ಘೋಷಿಸಿ, ನುಡಿದಂತೆ ನಡೆಯಲಿ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಪರಿಷತ್ ಸದಸ್ಯ ಟಿ.ಎ.ಶರವಣ ಸೇರಿದಂತೆ ಕಾಂಗ್ರೆಸ್-ಜೆಡಿಎಸ್ ಮುಖಂಡರು ಆಗ್ರಹಿಸಿದ್ದಾರೆ.

‘ಆಪರೇಷನ್ ಕಮಲ’ ಸಂಬಂಧದ ಆಡಿಯೋ ಟೇಪ್‌ನಲ್ಲಿದ್ದ ಧ್ವನಿ ನನ್ನದೆಂದು ಸಾಬೀತಾದರೆ ರಾಜಕೀಯ ನಿವೃತ್ತಿಯಾಗುತ್ತೇನೆ ಎಂದು ಘೋಷಿಸಿದ್ದ ಯಡಿಯೂರಪ್ಪ, ಇದೀಗ ತಾವೇ ತಪ್ಪೊಪ್ಪಿಕೊಂಡಿದ್ದು, ಅವರು ನುಡಿದಂತೆ ನಡೆಯಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಯಡಿಯೂರಪ್ಪ ತಮ್ಮ ತಪ್ಪನ್ನು ಅವರೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರು ನಿವೃತ್ತಿಯಾಗಬೇಕು. ಅಲ್ಲದೆ, ಸ್ಪೀಕರ್ ರಮೇಶ್‌ ಕುಮಾರ್ ಅವರು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಮನವಿ ಮಾಡಿದರು.

ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಶಿವಕುಮಾರ್, ರಾಜಕೀಯದಲ್ಲಿ ಯಾವುದನ್ನೂ ಮುಚ್ಚಿಡಲು ಸಾಧ್ಯವಿಲ್ಲ. ಶಾಸಕರ ಪುತ್ರನ ಜತೆ ಮಾತನಾಡಿದ್ದು ತಾನೇ ಎಂದು ತಪ್ಪೊಪ್ಪಿಕೊಂಡಿರುವ ಬಿಎಸ್‌ವೈ ಅವರ ಆತ್ಮಸಾಕ್ಷಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಲೇವಡಿ ಮಾಡಿದರು.

ಆತ್ಮಸಾಕ್ಷಿಯಿಂದಲೇ ಎಲ್ಲರೂ ನಡೆಯಬೇಕು. ಉಳಿದ ವಿಚಾರವನ್ನು ಸ್ಪೀಕರ್ ರಮೇಶ್ ಕುಮಾರ್ ಅವರು ನೋಡಿಕೊಳ್ಳಲಿದ್ದಾರೆ. ಪ್ರಕರಣ ಯಾವ ದೃಷ್ಟಿಯಲ್ಲಿ ಹೋಗುತ್ತದೆ ಎಂಬುದನ್ನು ಕಾದುನೋಡಬೇಕು ಎಂದು ಶಿವಕುಮಾರ್ ಇದೇ ವೇಳೆ ಹೇಳಿದರು.

ಜೆಡಿಎಸ್ ವಕ್ತಾರ ಶರವಣ, ನನ್ನ ಧ್ವನಿಯನ್ನು ಮಿಮಿಕ್ರಿ ಕಲಾವಿದರಿಂದ ಡಬ್ಬಿಂಗ್ ಮಾಡಿಸಲಾಗಿದೆ ಎಂದ ಯಡಿಯೂರಪ್ಪ ಇದೀಗ ತಪ್ಪೊಪ್ಪಿಕೊಂಡಿದ್ದು, ಕೂಡಲೇ ಅವರು ಘೋಷಿಸಿದಂತೆ ನಿವೃತ್ತಿ ಪಡೆಯಬೇಕು. ದಿನಕ್ಕೊಂದು ಹೇಳಿಕೆ ನೀಡುವ ಬಿಎಸ್‌ವೈ ಏನೆಂದು ರಾಜ್ಯದ ಜನತೆ ಗಮನಿಸುತ್ತಿದ್ದಾರೆಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News