ರಾಜ್ಯದ ಸಿಎಂ ಪ್ರತಿದಿನ ಅಳುತ್ತಿರುತ್ತಾರೆ: ಹುಬ್ಬಳ್ಳಿಯಲ್ಲಿ ನರೇಂದ್ರ ಮೋದಿ ಲೇವಡಿ

Update: 2019-02-10 15:20 GMT

ಹುಬ್ಬಳ್ಳಿ,ಫೆ.10: ಕರ್ನಾಟಕದಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಹೇಳಿದ್ದರು. ಆದರೆ 60 ಸಾವಿರ ರೈತರ ಸಾಲಮನ್ನಾ ಮಾಡಿದ್ದಾರೆ. ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರಧಾನಿ‌ ನರೇಂದ್ರ ಮೋದಿ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. 

ನಗರದಲ್ಲಿಂದು ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೇವಲ ಶೇ.30 ರಷ್ಟು ರೈತರ ಸಾಲಮನ್ನಾ ಆಗಿದೆ. ಇವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೊಡೆದಾಡುತ್ತಿದ್ದಾರೆ. ಶಾಸಕರು ಹೊಟೇಲ್‌ಗಳಲ್ಲಿ ಹೊಡೆದಾಡಿ ತಲೆ ಹೊಡೆದುಕೊಳ್ಳುತ್ತಿದ್ದಾರೆ‌. ಇಲ್ಲಿನ ಸಿಎಂ ಪ್ರತಿದಿನ ಅಳುತ್ತಿರುತ್ತಾರೆ. ಬೆಳಗಾದರೆ ಕುರ್ಚಿ‌ ಕಾಪಾಡಿಕೊಳ್ಳಲು ಪರದಾಡುತ್ತಿರುತ್ತಾರೆ ಎಂದು ವ್ಯಂಗ್ಯವಾಡಿದ ಅವರು, ವಿಕಾಸವಾದ ಬೇಕಾ, ವಂಶವಾದ ಬೇಕಾ ಎಂದು ಜನ ತೀರ್ಮಾನಿಸುತ್ತಾರೆ ಎಂದರು. 

ಬೇನಾಮಿ ಹೆಸರಲ್ಲಿ ದುಡ್ಡು ಮಾಡಿದವರನ್ನು ಟಚ್ ಮಾಡಲು ಆಗುತ್ತಿರಲಿಲ್ಲ. ಈಗ ಅಂತವರು ಕಟಕಟೆಯಲ್ಲಿ ನಿಲ್ಲಬೇಕಾದ ಸ್ಥಿತಿ ಬಂದಿದೆ. ಇದೇ ನಿಜವಾದ ಬದಲಾವಣೆ ಎಂದು ಹೇಳಿದ ಮೋದಿ, ನಾವು ವರ್ತಮಾನದ ಜೊತೆಗೆ ಭವಿಷ್ಯದ ಅವಶ್ಯಕತೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ಹುಬ್ಬಳ್ಳಿಯಲ್ಲಿ ಮನೆ ಮನೆಗೆ ಗ್ಯಾಸ್ ಕನೆಕ್ಷನ್ ಕೊಡುತ್ತಿದ್ದೇವೆ. ದೇಶದ ಬಡ ಜನರಿಗೆ ಸದೃಢ ಮನೆಗಳನ್ನು ಕೊಡುತ್ತಿದ್ದೇವೆ. ನಗರದ ಬಡವರು ಅಥವಾ ಮಧ್ಯಮ ವರ್ಗದವರ ಅಭಿವೃದ್ಧಿ ಮಾಡುತ್ತಿದ್ದೇವೆ. ಎಲ್ಲರ ಜೊತೆ ಎಲ್ಲರ ಅಭಿವೃದ್ಧಿ ನಮ್ಮ ಧ್ಯೇಯವಾಗಿದೆ.ಕಾಂಗ್ರೆಸ್‌ನವರು ನಲ್ವತ್ತೈದು ವರ್ಷಗಳಲ್ಲಿ ಮಾಡದ ಕೆಲಸವನ್ನು ನಾವು ಐವತ್ತು ತಿಂಗಳಲ್ಲಿ ಮಾಡಿದ್ದೇವೆ. ಮನೆ ಬಾಡಿಗೆಯಿಂದ ಬರುವ ಆದಾಯಕ್ಕೆ ತೆರಿಗೆ ವಿಧಿಸದಿರಲು ತೀರ್ಮಾನಿಸಲಾಗಿದೆ. ನಿಮ್ಮ ಹಣ ತಿನ್ನುತ್ತಿರುವವರನ್ನು ನಾನು ಮನೆಗೆ ಕಳಿಸುತ್ತಿದ್ದೇನೆ‌. ಪ್ರಾಮಾಣಿಕರಿಗೆ ನಾನು ಇಷ್ಟವಾಗುತ್ತೇನೆ, ಭ್ರಷ್ಟರಿಗೆ ನಾನೆಂದರೆ ಕಷ್ಟವಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News