ವಿವಾಹಿತೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ: ಕೊಲೆ ಶಂಕೆ- ಪತಿ ಬಂಧನ
ಸಕಲೇಶಪುರ,ಫೆ.10: ನೇಣು ಬಿಗಿದ ಸ್ಥಿತಿಯಲ್ಲಿ ವಿವಾಹಿತೆಯ ಶವ ಶನಿವಾರ ಸಂಜೆ ಪಟ್ಟಣದ ಮಹೇಶ್ವರಿನಗರದ ಸ್ವಗೃಹದಲ್ಲಿ ಪತ್ತೆಯಾಗಿದ್ದು, ಮೃತ ಯುವತಿಯ ಪೋಷಕರ ದೂರಿನ ಅನ್ವಯ ಪತಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಜೀನತ್ (22) ಅನುಮಾನಸ್ಪದವಾಗಿ ಮೃತಪಟ್ಟಿರುವ ಮಹಿಳೆಯಾಗಿದ್ದು, ಪತಿ ಸಿಕಂದರ್(31) ಪೋಲಿಸರ ಬಂಧನದಲ್ಲಿದ್ದಾನೆ. ಶನಿವಾರ ಮದ್ಯಾಹ್ನ 3 ಗಂಟೆಯ ಸಮಯದಲ್ಲಿ ಜೀನತ್ ಶವ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈಕೆಯ ಸಾವಿನ ಬಗ್ಗೆ ಕುಟುಂಬಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಜೀನತ್ ಪೋಷಕರ ಆರೋಪ: 4 ವರ್ಷಗಳ ಹಿಂದೆ ನಗದು ವರದಕ್ಷಿಣೆ ಮತ್ತು ಚಿನ್ನವನ್ನು ನೀಡಿ ಮದುವೆ ಮಾಡಲಾಗಿತ್ತು. ಹಣಕ್ಕಾಗಿ ಸಿಕಂದರ್ ಪೀಡಿಸುತ್ತಿದ್ದ. ಮಗಳಿಗೆ ಹಿಂಸೆ ನೀಡುತ್ತಿದ್ದ. ಅನೇಕ ಬಾರಿ ಹಿರಿಯರ ಸಮ್ಮುಖದಲ್ಲಿ ಪಂಚಾಯತಿ ನಡೆಸಲಾಗಿತ್ತು. ಚಿನ್ನವನ್ನು ಮಾರಿಕೊಂಡಿದ್ದ. ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದ. ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಕೊಲೆ ಮಾಡಲಾಗಿದೆ ಈ ಬಗ್ಗೆ ಪೋಲಿಸರಿಗೆ ದೂರು ನೀಡಲಾಗಿದೆ ಎಂದು ಮೃತೆಯ ತಾಯಿ ಪತ್ರಿಕೆಗೆ ತಿಳಿಸಿದ್ದಾರೆ.
ಸಾವಿನ ದಿನ ಮಾವನ ಮನೆಯಲ್ಲಿದ್ದ ಪತಿ: ಜೀನತ್ ಸಾವನ್ನಪ್ಪಿದ ಶನಿವಾರ 3 ಗಂಟೆಯ ವೇಳೆಗೆ ಪತಿ ಸಿಕಂದರ್ ಪಟ್ಟಣದಿಂದ 35 ಕಿ ಮೀ ದೂರದಲ್ಲಿರುವ ಗೋಣೀಬೀಡು ಗ್ರಾಮದಲ್ಲಿರುವ ಮಾವನ ಮನೆಗೆ ಹೋಗಿ ನಾನು ಮತ್ತು ಪತ್ನಿ (ಜೀನತ್) ಸುಖವಾಗಿದ್ದೇವೆ ಎಂದು ತಿಳಿಸಿದ್ದ ಎನ್ನಲಾಗಿದ್ದು, ತಾನು ಕಾರ್ಯ ನಿಮಿತ್ತ ಬಂದಿದ್ದು, ತುರ್ತಾಗಿ ಹೋಗಬೇಕಾಗಿದೆ ಎಂದು ಹೊರಟು ಹೋಗಿದ್ದ ಎಂದು ಮೃತ ಯುವತಿಯ ಸಂಬಂಧಿಕರು ತಿಳಿಸಿದ್ದಾರೆ.
ಪಟ್ಟಣ ಠಾಣೆಯ ಪೋಲಿಸರು ಪ್ರಕರಣವನ್ನು ದಾಖಲಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.