ಹಿರಿಯರು, ಅಭಿಮಾನಿಗಳ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ: ಸುಮಲತಾ ಅಂಬರೀಶ್
ಮಂಡ್ಯ,ಫೆ.10: ಅಭಿಮಾನಿಗಳು ತುಂಬಾ ಆಸೆ ಇಟ್ಟುಕೊಂಡಿದ್ದಾರೆ, ಅವರು ನಿರಾಶರಾಗಬಾರದು ಅನ್ನೋದು ನನ್ನ ಆಸೆ ಎಂದು ಹೇಳುವ ಮೂಲಕ ದಿವಂಗತ ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ತಮ್ಮ ರಾಜಕೀಯ ಪ್ರವೇಶವನ್ನು ಪರೋಕ್ಷವಾಗಿ ಖಚಿತಪಡಿಸಿದ್ದಾರೆ.
ಭಾನುವಾರ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಅವರು, ಕಾಲಭೈರವೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರೊಡನೆ ಕೆಲಕಾಲ ಮಾತುಕತೆ ನಡೆಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.
ರಾಜಕೀಯ ಪ್ರವೇಶದ ಬಗ್ಗೆ ಇನ್ನೂ ಗೊಂದಲ ಇದೆ. ಹಿರಿಯರು ಹಾಗೂ ಅಭಿಮಾನಿಗಳ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ ಕೈಗೊಳ್ಳುವೆ. ನನಗೂ ಅಂಬಿ ಥರ ಜನರ ವಿಶ್ವಾಸ ಉಳಿಸಿಕೊಳ್ಳುವ ಆಸೆಯಿದೆ. ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರ ವಿವಾದಾತ್ಮಕ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದ ಅವರು, ಕ್ಷೇತ್ರ ಗೊಂದಲ ವಿಚಾರ ಕುರಿತ ಪ್ರಶ್ನೆಗೆ ಮಂಡ್ಯ ಬಿಟ್ಟು ಬೇರೆಡೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಆದಿಚುಂಚನಗಿರಿ ಶ್ರೀಗಳೊಂದಿಗಿನ ಭೇಟಿ ಕುರಿತು ಮಾತನಾಡಿದ ಅವರು, ಶ್ರೀಗಳೊಂದಿಗೆ ಬೇರೇನೂ ಚರ್ಚೆ ಮಾಡಿಲ್ಲ. 2 ತಿಂಗಳ ಹಿಂದೆ ಭೇಟಿ ಕೊಡಬೇಕಿತ್ತು. ಇವತ್ತು ಕಾಲ ಕೂಡಿ ಬಂದಿದೆ. ಪುತ್ರ ಅಭಿಷೇಕ್ ಅಭಿನಯದ ಅಮರ್ ಚಿತ್ರದ ಟೀಸರ್ ಫೆ.14ರಂದು ಬಿಡುಗಡೆಯಾಗುತ್ತಿದೆ. ಹಾಗಾಗಿ ದೇವರ ದರ್ಶನ, ಶ್ರೀಗಳ ಅಶೀರ್ವಾದ ಪಡೆಯಲು ಬಂದಿದ್ದೇವೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದರು.
ಈ ವೇಳೆ ಅಂಬಿ ಪುತ್ರ ಅಭಿಷೇಕ್, ಹಿರಿಯ ನಟ ದೊಡ್ಡಣ್ಣ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಕಾಂಗ್ರೆಸ್ ಮುಖಂಡ ಕೆ.ಎಸ್.ಸಚ್ಚಿದಾನಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.