ಬಜೆಟ್‍ನಲ್ಲಿ ಮಂಡ್ಯ ಜಿಲ್ಲೆಗೆ ಅಪಾರ ಕೊಡುಗೆ: ಶಾಸಕ ಎಂ.ಶ್ರೀನಿವಾಸ್ ಮೆಚ್ಚುಗೆ

Update: 2019-02-10 16:51 GMT

ಮಂಡ್ಯ,ಫೆ.10: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬಜೆಟ್‍ನಲ್ಲಿ ಮಂಡ್ಯ ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ಮೈಷುಗರ್ ಕಾರ್ಖಾನೆ ಪುನಶ್ಚೇತನಕ್ಕೆ ಕೋಟ್ಯಾಂತರ ರೂ. ಹಣ ನೀಡಿದ್ದರೂ ಸಹ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳಲು ಸಿಎಂ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ ಎಂದು ಶಾಸಕ ಎಂ.ಶ್ರೀನಿವಾಸ್ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ 16ನೇ ವಾರ್ಡ್‍ನಲ್ಲಿ ರಾಮನಹಳ್ಳಿ-ಹೊಸಹಳ್ಳಿಯಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಶ್ರೀ ಮಾರಮ್ಮ ದೇವಾಲಯದ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಹೊಸ ಕಾರ್ಖಾನೆ 400 ಕೋಟಿ ಯೋಜನಾ ವೆಚ್ಚ ಹೊಂದಿದ್ದು, ಮೊದಲ ಹಂತದಲ್ಲಿ 100 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಜಿಲ್ಲೆಯ ರೈತರು, ಜನತೆಯ ಪರವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ದೇವಾಲಯಗಳು ಭಾರತೀಯ ಸಂಸ್ಕೃತಿಯ ಪ್ರತೀಕ. ಮನುಷ್ಯ ಶಾಂತಿ, ನೆಮ್ಮದಿಯಿಂದ ಜೀವನ ನಡೆಸಲು ಧರ್ಮದ ಹಾದಿಯಲ್ಲಿ ಸಾಗಬೇಕು ಎಂದು ಸಲಹೆ ನೀಡಿದರು. ನಾನು ಎರಡನೇ ಅವಧಿಯಲ್ಲಿ ಶಾಸಕನಾಗಿದ್ದ ಸಂದರ್ಭದಲ್ಲಿ ದೇವಾಲಯದ ಕಾಂಪೌಂಡ್ ಕಾಮಗಾರಿಗೆ ಅನುದಾನ ನೀಡಿದ್ದೆ. ಪ್ರಸ್ತುತ ದೇವಾಲಯದ ಜೀರ್ಣೋದ್ಧಾರಕ್ಕೆ ಚಾಲನೆ ನೀಡಿದ್ದು, ಬಡಾವಣೆಯ ಬಹುದಿನದ ಕನಸು ನನಸಾಗುತ್ತಿದೆ ಎಂದು ಹೇಳಿದರು.

ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಸ್.ಪಿ.ಗೌರೀಶ್, ನಗರಸಭೆ ಸದಸ್ಯರಾದ ಮೀನಾಕ್ಷಿ ಪುಟ್ಟಸ್ವಾಮಿ, ವಿದ್ಯಾ ಮಂಜುನಾಥ್, ಪವಿತ್ರ ಬೋರೇಗೌಡ, ಮಾಜಿ ಅಧ್ಯಕ್ಷೆ ನಾಗಮ್ಮ ರಮೇಶ್, ಮುಖಂಡರಾದ ಎಚ್.ಎಂ.ಸುರೇಶ್, ಮನು, ಚಿಕ್ಕತಮ್ಮಯ್ಯ ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News