ಕಾಂಗ್ರೆಸ್, ಜೆಡಿಎಸ್‍ನ ಅತೃಪ್ತ ಶಾಸಕರೇ ಸರಕಾರ ಉರುಳಿಸುತ್ತಾರೆ: ಕೆ.ಎಸ್ ಈಶ್ವರಪ್ಪ

Update: 2019-02-10 17:28 GMT

ಶಿವಮೊಗ್ಗ, ಫೆ. 10: ಸಮ್ಮಿಶ್ರ ಸರ್ಕಾರ ಅಸ್ಥಿರಕ್ಕೆ ಬಿಜೆಪಿ ಯತ್ನಿಸುವುದೂ ಇಲ್ಲ. ಬೀಳಿಸುವುದೂ ಇಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಅತೃಪ್ತ ಶಾಸಕರೇ ಸರ್ಕಾರವನ್ನು ಉರುಳಿಸುತ್ತಾರೆ. ನಾಲ್ಕು ದಿನ ಕಾದು ನೋಡಿ ಎಲ್ಲವೂ ಗೊತ್ತಾಗುತ್ತದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.

ಭಾನುವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ತಮ್ಮ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಉಳಿಸಿಕೊಳ್ಳುವಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿಫಲರಾಗಿದ್ದಾರೆ. ವಿನಾ ಕಾರಣ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಮೈತ್ರಿ ಸರ್ಕಾರ ಬಿದ್ದು ಹೋಗುತ್ತೆ ಎಂಬ ಭಯದಲ್ಲಿರುವ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ, ಬಿಜೆಪಿ ಪಕ್ಷದ ವಿರುದ್ಧ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಸತ್ಯಕ್ಕೆ ದೂರವಾದ ಆರೋಪ ಮಾಡುತ್ತಿದ್ದಾರೆ. ನಕಲಿ ಆಡಿಯೋ ಸಂದೇಶ ಬಿಡುಗಡೆ ಮಾಡಿದ್ದಾರೆ. ಒಮ್ಮೆ ಧ್ವನಿ ಮುದ್ರಿಕೆಯಲ್ಲಿರುವುದು ಯಡಿಯೂರಪ್ಪ ಧ್ವನಿಯಲ್ಲ ಎನ್ನುತ್ತಾರೆ, ಮತ್ತೊಮ್ಮೆ ಅವರ ಧ್ವನಿ ಅಲ್ಲದಿದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎನ್ನುತ್ತಾರೆ. ಇನ್ನೊಮ್ಮೆ ಅವರ ಧ್ವನಿ ಎಂದು ನಾನೆಲ್ಲಿ ಹೇಳಿದ್ದೆನೆ ಎಂದೆಲ್ಲ ಕುಮಾರಸ್ವಾಮಿ ಗೊಂದಲಕಾರಿ ಹೇಳಿಕೆ ನೀಡುತ್ತಿದ್ದಾರೆ. ಕುಮಾರಸ್ವಾಮಿಯವರ ಈ ನಡವಳಿಕೆ ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ. ಇಂತಹ ಬೇಜವಾಬ್ದಾರಿ ಮುಖ್ಯಮಂತ್ರಿಯನ್ನು ರಾಜ್ಯದ ಜನತೆ ಹಿಂದೆಂದೂ ನೋಡಿಲ್ಲ ಎಂದು ಹೇಳಿದರು.

ಕರ್ನಾಟಕ ರಾಜ್ಯದ ಜನತೆಗೆ ಈ ಮೈತ್ರಿ ಸರ್ಕಾರ ಬೇಡವಾಗಿದೆ. ಮೈತ್ರಿ ಸರ್ಕಾರದ ಶಾಸಕರು ಹಾಗೂ ಮುಖಂಡರು ಸರ್ಕಾರದ ವಿರುದ್ದ ಮಾತನಾಡುತ್ತಿದ್ದಾರೆ. ಕಠಿಣ ಕ್ರಮದ ಎಚ್ಚರಿಕೆಯ ಹೊರತಾಗಿಯೂ ಕಾಂಗ್ರೆಸ್‍ನ ಅತೃಪ್ತ ಶಾಸಕರು ಕಾಂಗ್ರೆಸ್‍ನಿಂದ ದೂರ ಉಳಿದಿದ್ದಾರೆ. ಇದೆಲ್ಲ ಗಮನಿಸಿದರೆ ಈ ಸರ್ಕಾರ ಬಿದ್ದು ಹೋಗುವುದರಲ್ಲಿ ಅನುಮಾನವಿಲ್ಲ ಎಂದಿದ್ದಾರೆ.

ಹುಲಿಗಳಿದ್ದಂತೆ: ಬಿಜೆಪಿ ಶಾಸಕರು 104 ಜನ ಹುಲಿಯಂತೆ ಇದ್ದಾರೆ. ನಮ್ಮನ್ನು ಯಾರೂ ಮುಟ್ಟುವುದಕ್ಕೆ ಆಗುವುದಿಲ್ಲ. ಆಪರೇಷನ್ ಕಮಲ ಎಂದು ಬೊಬ್ಬೆ ಹೊಡೆದರೆ ನಾವೇನು ಮಾಡುವುದಕ್ಕಾಗುತ್ತದೆ ? ಕಾಂಗ್ರೆಸ್, ಜೆಡಿಎಸ್ ಅತೃಪ್ತರೇ ಸರ್ಕಾರ ಉರುಳಿಸಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News