ಕೊಡವ ಜಾನಪದ, ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸಿ: ಶಾಸಕ ಕೆ.ಜಿ.ಬೋಪಯ್ಯ

Update: 2019-02-10 17:55 GMT

ಮಡಿಕೇರಿ, ಫೆ.10 : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಮುತ್ತುನಾಡು ಅಭಿಮಾನಿ ಒಕ್ಕೂಟ ಇವರ ಸಹಯೋಗದಲ್ಲಿ ಕಾಲೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಡವ ಜಾನಪದ ನಮ್ಮೆ ಕಾರ್ಯಕ್ರಮವು ಶನಿವಾರ ನಡೆಯಿತು.    

ಗಾಳಿಬೀಡು ಗ್ರಾ.ಪಂ.ಮಾಜಿ ಉಪಾಧ್ಯಕ್ಷರಾದ ಅಯ್ಯಲಪ್ಪಂಡ ಎ.ಪೊನ್ನಪ್ಪ ಮತ್ತು ಕಾರೇರ ಜಮುನಾ ಪಳಂಗಪ್ಪ ಅವರು ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿದರು. 

ಉಮ್ಮತ್ತಾಟ್, ಕೊಡವ ತಿಂಗ ಪೆದ, ಕೋರ್ ಚೌಕ ಕಟ್ಟುವೊ, ಬಾಳೋಪಾಟ್, ತಾಲಿಪಾಟ್, ಪರಿಯಕಳಿ, ಸಮ್ಮಂದ ಅಡ್‍ಕುವೊ, ಪುತ್ತರಿ ಕೋಲಾಟ್, ಬೊಳಕಾಟ್, ಕತ್ತಿಯಾಟ್, ವಾಲಗತ್ತಾಟ್, ಕೊಡವ ಪಾಟ್, ಕೊಡವ ಗಾದೆ ಹೀಗೆ ವಿವಿಧ ಸ್ಪರ್ಧೆಗಳು ನಡೆದವು.  

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಶಾಸಕರಾದ ಕೆ.ಜಿ.ಬೋಪಯ್ಯ, ಕೊಡವ ಜಾನಪದ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವಂತಾಗಬೇಕು ಎಂದು ಅವರು ಕರೆ ನೀಡಿದರು. ಕೊಡವ ಜಾನಪದ ಕಲೆ ಮತ್ತು ಸಂಸ್ಕೃತಿ ವಿಶಿಷ್ಟವಾಗಿದ್ದು, ಕೊಡವ ಜಾನಪದಕ್ಕೆ ತನ್ನದೇ ಆದ ವೈಶಿಷ್ಟ್ಯ ಇತಿಹಾಸ ಹೊಂದಿದೆ. ಆದ್ದರಿಂದ ಕೊಡವ ಭಾಷೆ, ಸಾಹಿತ್ಯ, ಕಲೆ ಸಂಸ್ಕೃತಿಯನ್ನು ಉಳಿಸಬೇಕು. ಕಾಲೂರಿನ ಮುತ್ತುನಾಡು ಭಾಗದಲ್ಲಿ ಜಾನಪದ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು. 

ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಗೆ ಸಾಕಷ್ಟು ಕುಟುಂಬಗಳು ತೊಂದರೆಗೆ ಸಿಲುಕಿದ್ದವು. ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಎಲ್ಲಾ ಕುಟುಂಬಗಳಿಗೂ ಪರಿಹಾರ ದೊರೆಯಲಿದೆ ಎಂದು ಶಾಸಕರು ಇದೇ ಸಂದರ್ಭದಲ್ಲಿ ತಿಳಿಸಿದರು.  

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ.ಪೊನ್ನಪ್ಪ ಮಾತನಾಡಿ ಕೊಡವ ಸಂಸ್ಕೃತಿ, ಕಲೆ, ಜಾನಪದವನ್ನು ಉಳಿಸಿ ಬೆಳೆಸುವಲ್ಲಿ ಅಕಾಡೆಮಿ ಶ್ರಮಿಸುತ್ತಿದೆ. ಆ ನಿಟ್ಟಿನಲ್ಲಿ ಜಿಲ್ಲೆಯ ನಾನಾ ಭಾಗಗಳಲ್ಲಿ ಕೊಡವ ನಮ್ಮೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು. 

ಪ್ರಕೃತಿ ವಿಕೋಪಕ್ಕೆ ಸಿಲುಕಿ ಇಲ್ಲಿನ ಜನರು ಸಾಕಷ್ಟು ಸಂಕಷ್ಟಕ್ಕೆ ತುತ್ತಾಗಿದ್ದರು. ಇದರಿಂದಾಗಿ ಮುತ್ತುನಾಡು ಭಾಗದಲ್ಲಿ ಕೊಡವ ಜಾನಪದ ನಮ್ಮೆ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಸದ್ಯ ಇಲ್ಲಿನ ಜನರು ಯಥಾಸ್ಥಿತಿಗೆ ಮರಳುತ್ತಿದ್ದಾರೆ. ಆ ನಿಟ್ಟಿನಲ್ಲಿ ಕೊಡವ ಸಂಸ್ಕೃತಿ, ಜಾನಪದ ಕಲೆಗಳನ್ನು ಮತ್ತಷ್ಟು ಉಳಿಸಿ ಬೆಳೆಸಿಕೊಂಡು ಹೋಗುವಂತಾಗಬೇಕು ಎಂದು ಪೆಮ್ಮಂಡ ಕೆ.ಪೊನ್ನಪ್ಪ ಅವರು ನುಡಿದರು.      

ಮುತ್ತುನಾಡು ಬಗ್ಗೆ ಅಯ್ಯಲಪಂಡ ಎ. ಉತ್ತಪ್ಪ ಅವರು ವಿಚಾರ ಮಂಡಿಸಿದರು. ಸಾಹಿತಿ ನಾಗೇಶ್ ಕಾಲೂರು, ಪೊನ್ನಂಪೇಟೆ ಸಾಯಿ ಶಂಕರ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಕೋಳೇರ ಝರು ಗಣಪತಿ ಮತ್ತು ಕಾಲೂರು ನಾಡಿನ ಕೊಡವ ಜನಪದ ಅಭಿಮಾನಿ ಚೆನ್ನಪಂಡ ಮಂದಣ್ಣ ಗಾಳಿಬೀಡು ಗ್ರಾ.ಪಂ.ಮಾಜಿ ಉಪಾಧ್ಯಕ್ಷರಾದ ಅಯ್ಯಲಪ್ಪಂಡ ಎ.ಪೊನ್ನಪ್ಪ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.   

ಗಾಳಿಬೀಡು ಗ್ರಾ.ಪಂ.ಅಧ್ಯಕ್ಷರಾದ ಪುದಿಯತಂಡ ಸುಭಾಷ್ ಸೋಮಯ್ಯ, ಅಯ್ಯಲಪಂಡ ಎ.ಉತ್ತಪ್ಪ, ಅಕಾಡೆಮಿ ಸದಸ್ಯರಾದ ಅಪಟ್ಟೀರ ಟಾಟು ಮೊಣ್ಣಪ್ಪ, ಸುಳ್ಳಿಮಾಡ ಭವಾನಿ ಕಾವೇರಿಯಪ್ಪ, ಕುಡಿಯರ ಶಾರಾದ, ಮನ್ನಕ್ಕಮನೆ ಬಾಲಕೃಷ್ಣ, ಎಚ್.ಎ.ಗಣಪತಿ ಇತರರು ಇದ್ದರು.  

ಬೊಳ್ಳಜೀರ ಬಿ.ಅಯ್ಯಪ್ಪ ಸ್ವಾಗತಿಸಿದರು, ಆಂಗೀರ ಕುಸುಮ್ ಮತ್ತು ನಾಳಿಯಮ್ಮಂಡ ಉಮೇಶ್ ಕೇಚಮ್ಮಯ್ಯ ಅವರು ನಿರೂಪಿಸಿದರು, ಮುಕ್ಕಾಟೀರ ತಂಗಮ್ಮ ಅವರು ಪ್ರಾರ್ಥಿಸಿದರು, ಚಂಗುಲಂಡ ಸೂರಜ್ ವಂದಿಸಿದರು. ಪಂಚಮ್ ತ್ಯಾಗರಾಜ್ ಅವರಿಂದ ಕೊಡವ ಜಾನಪದ ಗೀತಗಾಯನ ಕಾರ್ಯಕ್ರಮ ಜರುಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News