ಯಡಿಯೂರಪ್ಪರೊಬ್ಬರೇ ಹೊಣೆಗಾರರೇ?

Update: 2019-02-10 18:36 GMT

ಕರ್ನಾಟಕದಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಾ ಬಂದಿರುವ ‘ಆಪರೇಷನ್ ಕಮಲ’ ಪ್ರಯತ್ನ ಬಿಜೆಪಿಗೆ ತಿರುಗಿ ಹೊಡೆದಂತಿದೆ. ಶಾಸಕನ ಪುತ್ರರೊಬ್ಬರ ಬಳಿ ಯಡಿಯೂರಪ್ಪ ಚೌಕಾಶಿ ಮಾಡುತ್ತಿರುವ ಆಡಿಯೊ ಬಿಜೆಪಿಯ ತೆರೆಮರೆಯ ಆಟವನ್ನು ಬಯಲು ಮಾಡಿದೆ. ಈ ಮೊದಲು ಯಡಿಯೂರಪ್ಪ ‘ಧ್ವನಿ ನನ್ನದಲ್ಲ’ ಎಂದಿದ್ದರು. ಬಿಜೆಪಿ ನಾಯಕರು ಕೂಡ ಇದಕ್ಕೆ ಬೆಂಬಲವಾಗಿ ನಿಂತು ‘‘ಯಡಿಯೂರಪ್ಪರ ಅಣಕು ಧ್ವನಿ ಅದು’’ ಎಂದು ಆರೋಪಿಸಿದ್ದರು. ಆದರೆ ಇದೀಗ ಬಿಜೆಪಿ ನಾಯಕರ ಬಾಯಿ ಮುಚ್ಚಿ ಸುವಂತೆ ಸ್ವತಃ ಯಡಿಯೂರಪ್ಪರೇ ‘‘ಧ್ವನಿ ನನ್ನದು’’ ಎಂದು ಹೇಳಿದ್ದಾರೆ. ಅಲ್ಲಿಗೆ, ಸರಕಾರ ತನ್ನಷ್ಟಕ್ಕೇ ಉರುಳುತ್ತಿಲ್ಲ, ಬಿಜೆಪಿಯ ಒಳಸಂಚಿನಿಂದ ಉರುಳುತ್ತಿದೆ ಎನ್ನುವುದು ಜಗಜ್ಜಾಹೀರಾದಂತಾಯಿತು. ಚುನಾವಣೆಯ ಮೂಲಕ ಆಯ್ಕೆಯಾದ ಶಾಸಕರನ್ನು ಹಣದ ಆಮಿಷದ ಮೂಲಕ ಕೊಂಡುಕೊಳ್ಳುವುದು, ಪರೋಕ್ಷವಾಗಿ ‘ಇವಿಎಂ’ ಹ್ಯಾಕಿಂಗ್‌ಗೆ ಸಮ. ಇದೊಂದು ರೀತಿಯಲ್ಲಿ ಜನರ ಮತಗಳನ್ನೇ ಹಣದ ಮೂಲಕ ತಿರುಚಿದಂತೆ. ಜನಸಾಮಾನ್ಯರಿಗೆ ಎಸಗುವ ದ್ರೋಹವಿದು. ಈ ದ್ರೋಹವನ್ನು ಬಿಜೆಪಿ ಬಹಿರಂಗವಾಗಿ ಒಪ್ಪಿಕೊಂಡಿದೆ. ಅದಕ್ಕಾಗಿ ಬೆಲೆ ತೆರಬೇಕಾದವರು ಯಾರು? ಎನ್ನುವುದನ್ನು ರಾಜ್ಯ ಬಿಜೆಪಿಯೇ ತೀರ್ಮಾನಿಸಬೇಕಾಗಿದೆ.

ಯಡಿಯೂರಪ್ಪ ತಪ್ಪೊಪ್ಪಿಕೊಂಡ ಬೆನ್ನಿಗೇ ಅವರ ಮೇಲೆ ತೀವ್ರ ದಾಳಿಗಳು ಆರಂಭವಾಗಿವೆ. ಬಿಜೆಪಿಯೊಳಗಿಂದಲೇ ಟೀಕೆಗಳು ಬರುತ್ತಿವೆ. ಆದರೆ ನಾವು ಒಂದು ಸೂಕ್ಷ್ಮವನ್ನು ಗಮನಿಸಬೇಕು. ಆಪರೇಷನ್ ಕಮಲದ ನೇತೃತ್ವ ವಹಿಸಿದ ಯಡಿಯೂರಪ್ಪ ಮತ್ತು ತಪ್ಪೊಪ್ಪಿಕೊಂಡ ಯಡಿಯೂರಪ್ಪ ಇವರನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಬಾರದು. ಇತ್ತೀಚಿನ ದಿನಗಳಲ್ಲಿ ಅದೆಂತಹ ಆರೋಪಗಳು ಬಂದರೂ ಯಾವ ಲಜ್ಜೆಯೂ ಇಲ್ಲದೆ ಅದನ್ನು ನಿರಾಕರಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಆಡಿಯೊ ಆರೋಪ ಯಡಿಯೂರಪ್ಪ ಮೇಲೆ ಬಂದಾಗ ಆ ಕುರಿತಂತೆ ನಿರಾಕರಿಸುವ ಎಲ್ಲ ಅವಕಾಶಗಳೂ ಅವರಿಗಿದ್ದವು. ವಿವಿಧ ಆರೋಪಗಳ ಜವಳಿ ಅಂಗಡಿಗಳನ್ನೇ ತೆರೆದಿರುವ ಯಡಿಯೂರಪ್ಪ ಅವರಿಗೆ, ಈ ಆಡಿಯೊ ಎನ್ನುವ ಪುಟ್ಟ ‘ಟವೆಲ್’ ಭಾರವಾಗುತ್ತಿರಲಿಲ್ಲ. ಈಗಾಗಲೇ ಹತ್ತು ಹಲವು ಆರೋಪಗಳು ಸಾಬೀತಾದವರು ಕೂಡ, ಅದನ್ನು ವಿರೋಧಿಗಳ ತಲೆಗೆ ಕಟ್ಟಿ ಸಾರ್ವಜನಿಕವಾಗಿ ನಾಯಕರಾಗಿಯೇ ಓಡಾಡುತ್ತಿರುವ ದಿನಗಳಲ್ಲಿ, ಈ ಆಡಿಯೊದಲ್ಲಿರುವ ಧ್ವನಿ ನನ್ನದೇ ಎಂದು ಯಡಿಯೂರಪ್ಪ ಒಪ್ಪಿಕೊಂಡಿರುವುದು ಅವರ ವ್ಯಕ್ತಿತ್ವವನ್ನು ಒಂದಿಷ್ಟು ಸಹ್ಯವಾಗಿಸಿದೆ. ಅವರು ಆಪರೇಷನ್ ಕಮಲವನ್ನು ‘ಒಪ್ಪಿಕೊಂಡ’ ಕಾರಣಕ್ಕಾಗಿ ಅವರನ್ನು ನಾವು ಟೀಕಿಸಬಾರದು. ಅಷ್ಟರ ಮಟ್ಟಿಗಾದರೂ ಅವರು ಆತ್ಮಸಾಕ್ಷಿಯನ್ನು ಉಳಿಸಿಕೊಂಡಿದ್ದಾರಲ್ಲ ಎಂದು ಸಮಾಧಾನ ಪಟ್ಟುಕೊಳ್ಳಬೇಕು. ಉಳಿದಂತೆ ‘ಆಪರೇಷನ್ ಕಮಲ’ ಯಡಿಯೂರಪ್ಪ ಒಬ್ಬರದೇ ಕಾರ್ಯಾಚರಣೆಯಲ್ಲ. ಆದುದರಿಂದ ತಪ್ಪೊಪ್ಪಿಕೊಂಡ ಕಾರಣಕ್ಕಾಗಿ ಅವರೊಬ್ಬರನ್ನೇ ದೂಷಿಸಿದರೆ, ಆಪರೇಷನ್ ಕಮಲದ ಹಿಂದಿರುವ ಹಿರಿ ತಲೆಗಳಿಗೆ ಕ್ಲೀನ್ ಚಿಟ್ ನೀಡಿದಂತಾದೀತು.

‘ಗೆಲುವಿಗೆ ಸಾವಿರ ಒಡೆಯರು. ಸೋಲಿಗೆ ಒಬ್ಬನೇ ಒಡೆಯ’ ಎಂಬ ಮಾತಿದೆ. ಬಿಜೆಪಿ ಆಪರೇಷನ್ ಕಮಲ ನಡೆಸಿ ಒಂದು ವೇಳೆ ಸರಕಾರ ರಚನೆ ಮಾಡಿದ್ದೇ ಆಗಿದ್ದರೆ ಅದರೆಲ್ಲ ಹೆಗ್ಗಳಿಕೆಯನ್ನು ಅಮಿತ್ ಶಾ ಮತ್ತು ನರೇಂದ್ರ ಮೋದಿ ಹೊತ್ತುಕೊಳ್ಳುತ್ತಿದ್ದರು. ಬಿಜೆಪಿ ನಡೆಸುತ್ತಿರುವ ‘ಆಪರೇಷನ್ ಕಮಲ’ವನ್ನು ಒಂದು ಸಾಧನೆ ಮತ್ತು ಹೆಗ್ಗಳಿಕೆ ಎಂಬ ರೀತಿಯಲ್ಲಿ ಮಾಧ್ಯಮಗಳು ಬಿತ್ತರಿಸುತ್ತಾ ಬಂದಿದ್ದವು. ಸರಕಾರ ಇನ್ನೇನು ಬಿದ್ದೇ ಬಿಟ್ಟಿತು ಎಂದು ಪ್ರತಿ ದಿನವೂ ಟಿವಿಗಳಲ್ಲಿ ಆ್ಯಂಕರ್‌ಗಳು ಒದರ ತೊಡಗಿದ್ದರು. ಒಂದು ರೀತಿಯಲ್ಲಿ ಬಿಜೆಪಿಯ ಆಪರೇಷನ್ ಕಮಲಕ್ಕೆ ಮಾಧ್ಯಮಗಳೂ ಪರೋಕ್ಷ ಕೈಜೋಡಿಸಿದ್ದವು. ಆಪರೇಷನ್ ಯಶಸ್ವಿಯಾಗಿದ್ದರೆ ಎಲ್ಲರೂ ಒಂದಾಗಿ ಸಂಭ್ರಮಿಸುತ್ತಿದ್ದರು. ಆದರೆ ಯಡಿಯೂರಪ್ಪ ರವಿವಾರ ನೀಡಿರುವ ಹೇಳಿಕೆ ಎಲ್ಲರನ್ನೂ ತಬ್ಬಿಬ್ಬುಗೊಳಿಸಿದೆ. ಈ ಕಾರಣದಿಂದಲೇ ತಪ್ಪೊಪ್ಪಿಕೊಂಡ ಯಡಿಯೂರಪ್ಪ ಅವರನ್ನೇ ಅಪರಾಧಿಯನ್ನಾಗಿ ಮಾಡಿ ಮಾಧ್ಯಮಗಳು ಟೀಕಿಸತೊಡಗಿವೆ. ಇವರೆಲ್ಲರೂ ಕಿಡಿಕಾರುತ್ತಿರುವುದು ‘ಯಡಿಯೂರಪ್ಪ ಆಪರೇಷನ್ ಕಮಲ ನಡೆಸಿರುವುದರ ಕುರಿತಂತೆ ಅಲ್ಲ’. ಅವರು ತಪ್ಪೊಪ್ಪಿಕೊಂಡಿರುವುದು ಸಿಟ್ಟು ತರಿಸಿದೆ. ಮುಂದಿನ ಲೋಕಸಭಾ ಚುನಾವಣೆಗೆ ಮುನ್ನ ಕರ್ನಾಟಕವೂ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಮೋದಿ ಬಳಗಕ್ಕೆ ಅಗತ್ಯವಿದೆ.

ಎಲ್ಲೆಲ್ಲ ಅಲ್ಪ ಬಹುಮತದ ಸರಕಾರವಿದೆಯೋ ಅಲ್ಲೆಲ್ಲ ಆಪರೇಷನ್ ಕಮಲ ನಡೆಸಲು ಅಮಿತ್ ಶಾ ಈಗಾಗಲೇ ನಿರ್ದೇಶನ ನೀಡಿದ್ದಾರೆ. ಸರಕಾರ ರಚನೆ ಸಾಧ್ಯವಾಗದೇ ಇದ್ದರೂ ಪರವಾಗಿಲ್ಲ, ಮತದಾರರಲ್ಲಿ ಸರಕಾರದ ಕುರಿತಂತೆ ಅಪನಂಬಿಕೆಯನ್ನಾದರೂ ಬೆಳೆಸುವುದು ಅವರ ಉದ್ದೇಶವಾಗಿದೆ. ವರಿಷ್ಠರ ಸೂಚನೆಯಿಲ್ಲದೇ ಯಡಿಯೂರಪ್ಪ ಆಪರೇಷನ್ ಕಮಲಕ್ಕಿಳಿಯಲು ಸಾಧ್ಯವೇ ಇಲ್ಲ. ಅದಕ್ಕೆ ಬೇಕಾಗಿರುವ ಹಣದ ಗಂಟು ಮೇಲಿನಿಂದಲೇ ಬರಬೇಕಾಗುತ್ತದೆ. ಒಂದು ರೀತಿಯಲ್ಲಿ ಬಿಜೆಪಿ ಯಡಿಯೂರಪ್ಪರನ್ನು ಬಳಸಿಕೊಂಡಿದೆ. ಅಲ್ಲಿರುವ ನಾಯಕರು ತಾವು ತಿಂದು, ಅದನ್ನು ಯಡಿಯೂರಪ್ಪರ ಮೂತಿಗೆ ಒರೆಸಿದ್ದಾರೆ. ಬಿಜೆಪಿಯ ಪಾಲಿಗೆ ಯಡಿಯೂರಪ್ಪ ಗಂಟಲಲ್ಲಿ ಸಿಕ್ಕಿಕೊಂಡ ಮುಳ್ಳು. ಬಿಜೆಪಿಯ ರಾಜ್ಯ ನಾಯಕತ್ವವನ್ನು ಅವರಿಂದ ಕಿತ್ತುಕೊಳ್ಳಲು ಹಲವು ವರ್ಷಗಳಿಂದ ಸಂಚು ನಡೆಯುತ್ತಲೇ ಬಂದಿದೆ. ಬಿಜೆಪಿಯ ಬೆನ್ನಿಗೆ ಲಿಂಗಾಯತರ ದೊಡ್ಡ ಶಕ್ತಿಯಿದೆ. ಬಿಜೆಪಿಗೆ ಅದು ಬೇಕು. ಯಡಿಯೂರಪ್ಪರನ್ನು ಕಿತ್ತು ಹಾಕಿದರೆ, ಆ ಲಿಂಗಾಯತರ ಬೆಂಬಲ ಇಲ್ಲವಾಗಬಹುದು ಎನ್ನುವ ಭಯ ಅದಕ್ಕಿದೆ.

ಲಿಂಗಾಯತರು ರಾಜ್ಯದಲ್ಲಿ ಸ್ವತಂತ್ರ ಧರ್ಮ ಕೇಳುತ್ತಿರುವುದು ಆರೆಸ್ಸೆಸ್‌ಗೆ ಉಭಯಸಂಕಟವನ್ನುಂಟು ಮಾಡುತ್ತಿದೆ. ಲಿಂಗಾಯತರ ದೊಡ್ಡ ಗುಂಪು ಇಂದು ಆರೆಸ್ಸೆಸ್‌ನ ಜೋಳಿಗೆಯಲ್ಲಿದ್ದರೆ ಅದಕ್ಕೆ ಕಾರಣ ಯಡಿಯೂರಪ್ಪ. ಅವರನ್ನು ಬದಿಗೆ ತಳ್ಳಿದರೆ ಲಿಂಗಾಯತ ಧರ್ಮ ಹೋರಾಟ ಬಲಿಷ್ಠವಾಗಬಹುದು ಮಾತ್ರವಲ್ಲ, ಲಿಂಗಾಯತರು ಬಿಜೆಪಿಯಿಂದ ದೂರ ಸರಿಯಬಹುದು ಎನ್ನುವ ಆತಂಕ ಆರೆಸ್ಸೆಸ್‌ಗೂ ಇದೆ. ಈ ಕಾರಣದಿಂದ ಮರೆಯಲ್ಲಿ ನಿಂತು ಯಡಿಯೂರಪ್ಪರ ರಾಜಕೀಯ ವರ್ಚಸ್ಸಿನ ಮೇಲೆ ಕೆಲವು ಬಿಜೆಪಿ ನಾಯಕರು ಕಳಂಕವನ್ನು ಎರಚುತ್ತಿದ್ದಾರೆ. ‘ಸಿಎಂ ಪಟ್ಟದ ಆಸೆ’ ತೋರಿಸಿ ಅವರನ್ನು ಪದೇ ಪದೇ ಬಿಜೆಪಿಯ ನಾಯಕರು ತಮಾಷೆಗೀಡು ಮಾಡುತ್ತಿದ್ದಾರೆ. ಇದೀಗ ‘ತಪ್ಪೊಪ್ಪಿಕೊಂಡ’ ಬಳಿಕ ಯಡಿಯೂರಪ್ಪ ಬಿಜೆಪಿಯೊಳಗೆ ಇನ್ನಷ್ಟು ದುರ್ಬಲವಾಗಿದ್ದಾರೆ. ಪ್ರಧಾನಿ ಮೋದಿಯವರು ಕರ್ನಾಟಕಕ್ಕೆ ಆಗಮಿಸಿದ ದಿನವೇ ಯಡಿಯೂರಪ್ಪ ಹೇಳಿಕೆ ನೀಡಿರುವುದು ಬಿಜೆಪಿಗೆ ತೀವ್ರ ಮುಜುಗರವನ್ನು ತಂದಿದೆ. ಮೋದಿಯ ಪ್ರಚಾರಕ್ಕೂ ಭಾರೀ ಹಾನಿಯುಂಟು ಮಾಡಿದೆ. ತನ್ನ ವಿರುದ್ಧ ಬಿಜೆಪಿಯೊಳಗೆ ನಡೆಯುತ್ತಿರುವ ಸಂಚನ್ನು ಯಡಿಯೂರಪ್ಪ ಅರ್ಥ ಮಾಡಿಕೊಂಡ ಬಳಿಕವೇ ಇಂತಹ ಹೇಳಿಕೆಯನ್ನು ನೀಡಿದರೇ? ಈ ತಪ್ಪೊಪ್ಪಿಗೆ ಯಡಿಯೂರಪ್ಪರ ಮುಂದಿನ ಹೊಸ ರಾಜಕೀಯ ನಡೆಯೊಂದಕ್ಕೆ ಪೀಠಿಕೆಯೇ? ಕಾಲವೇ ಹೇಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News