ಪ್ರತ್ಯೇಕ ತಾಲೂಕು ರಚನೆಗೆ ಆಗ್ರಹ: ಕುಶಾಲನಗರ ಬಂದ್ ಗೆ ಉತ್ತಮ ಪ್ರತಿಕ್ರಿಯೆ

Update: 2019-02-11 12:19 GMT

ಮಡಿಕೇರಿ, ಫೆ.11: ಕುಶಾಲನಗರವನ್ನು ಪ್ರತ್ಯೇಕ ಕಾವೇರಿ ತಾಲೂಕು ಎಂದು ಘೋಷಣೆ ಮಾಡುವಂತೆ ಒತ್ತಾಯಿಸಿ ಕಾವೇರಿ ತಾಲೂಕು ಹೋರಾಟ ಸಮಿತಿ ಕರೆ ನೀಡಿದ್ದ ಕುಶಾಲನಗರ ಬಂದ್ ಯಶಸ್ವಿಯಾಯಿತು.

ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದರಿಂದ ಸಂಜೆಯವರೆಗೆ ಪಟ್ಟಣ ವ್ಯಾಪ್ತಿಯಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಲ್ಪಟ್ಟಿದ್ದವು. ಸರಕಾರಿ ಕಚೇರಿ, ಬ್ಯಾಂಕುಗಳು, ಅಂಚೆ ಕಚೇರಿಗಳು ಕಾರ್ಯನಿರ್ವಹಿಸಿದವು. ಸರಕಾರಿ ಬಸ್‍ಗಳು ಸೇರಿದಂತೆ ವಾಹನಗಳು ಎಂದಿನಂತೆ ಸಂಚರಿಸಿದವು. 

ಕೊಪ್ಪ ಸೇತುವೆ ಬಳಿ ಆಟೋರಿಕ್ಷಾಗಳನ್ನು ಬಲವಂತವಾಗಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತ್ತಿದ್ದ ಸಂದರ್ಭ ಪೊಲೀಸರು ಮಧ್ಯಪ್ರವೇಶಿಸಿ ವಾಹನ ಸಂಚಾರಕ್ಕೆ ತಡೆಯೊಡ್ಡದಂತೆ ಪ್ರತಿಭಟನಾಕಾರರಿಗೆ ಸೂಚನೆ ನೀಡಿದರು. ಅಡ್ಡಿಯುಂಟು ಮಾಡಿದಲ್ಲಿ ಕಾನೂನು ಕ್ರಮಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ಎಚ್ಚರಿಸಿದ ಕಾರಣ ವಾಹನ ಸಂಚಾರ ಎಂದಿನಂತೆ ಇತ್ತು.

ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ತಾಲೂಕು ರಚನೆಗೆ ಆಗ್ರಹಿಸಿ ಘೋಷಣೆ ಕೂಗಿದರು. ಮೆರವಣಿಗೆ ಮೂಲಕ ಸಾಗಿ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಯೂ ಕೆಲಕಾಲ ಘೋಷಣೆಗಳನ್ನು ಕೂಗಿ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು.
ಕಾವೇರಿ ಲಾರಿ ಮಾಲಕರ ಸಂಘ, ಬೀದಿ ಬದಿ ವ್ಯಾಪಾರಿಗಳ ಒಕ್ಕೂಟ, ಎಸ್‍ಡಿಪಿಐ ಮತ್ತಿತರ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದವು.

ಈ ಸಂದರ್ಭ ಮಾತನಾಡಿದ ತಾಲೂಕು ಹೋರಾಟ ಕೇಂದ್ರ ಸಮಿತಿ ಸಂಚಾಲಕ ವಿ.ಪಿ.ಶಶಿಧರ್, ತಾಲೂಕು ರಚನೆಗೆ ಬೇಕಾದ ಎಲ್ಲಾ ರೀತಿಯ ಅರ್ಹತೆ, ಮಾನದಂಡಗಳನ್ನು ಒಳಗೊಂಡ ಕುಶಾಲನಗರವನ್ನು ಪ್ರತ್ಯೇಕ ತಾಲೂಕನ್ನಾಗಿ ಘೋಷಿಸುವಲ್ಲಿ ಸರಕಾರಗಳು ಹಿಂದೇಟು ಹಾಕುತ್ತಿರುವುದು ವಿಷಾದನೀಯ ಎಂದರು. ಹಲವು ಬಾರಿ ಬೃಹತ್ ಜನಾಂದೋಲನ ನಡೆಸಿ ಎಲ್ಲಾ ಸರಕಾರಗಳ ಗಮನ ಸೆಳೆಯಲಾಗಿದೆ. ಆದರೂ ಬೇಡಿಕೆ ಈಡೇರಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News