ಹೊಸ ಮನೆಯಲ್ಲಿ ಮಲಗಿದ್ದ ಮನೆ ಮಾಲಕ, ಸಂಬಂಧಿ ಮೃತ್ಯು: ಓರ್ವ ಅಸ್ವಸ್ಥ

Update: 2019-02-11 13:22 GMT

ಚಿಕ್ಕಮಗಳೂರು, ಫೆ.11: ನೂತನವಾಗಿ ನಿರ್ಮಿಸಲಾಗಿದ್ದ ಮನೆಯಲ್ಲಿ ಮಲಗಿದ್ದ ಇಬ್ಬರು ಸಾವನ್ನಪ್ಪಿ, ಮತ್ತೋರ್ವ ಅಸ್ವಸ್ಥನಾಗಿರುವ ಘಟನೆ ಸೋಮವಾರ ಮುಂಜಾನೆ ನಗರ ಸಮೀಪದ ಹರಿಹರದಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ. ಕೋಣೆಯ ಕಿಟಕಿ, ಬಾಗಿಲು ಹಾಕಿದ್ದರಿಂದ ಉಸಿರುಗಟ್ಟಿ ಇಲ್ಲವೇ ವಿದ್ಯುತ್ ಶಾಕ್‍ನಿಂದ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ತಾಲೂಕಿನ ಹರಿಹರದಹಳ್ಳಿ ಗ್ರಾಮದ ಶಿವಕುಮಾರ್(35), ಭರತ್(20) ಮೃತಪಟ್ಟಿದ್ದು, ಸಚಿನ್ ಎಂಬಾತ ಅಸ್ವಸ್ಥಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಹರಿಹರದಹಳ್ಳಿ ಗ್ರಾಮದ ಶಿವಕುಮಾರ್ ಎಂಬವರು ಗ್ರಾಮದಲ್ಲಿ ಹೊಸದಾಗಿ ಇತ್ತೀಚೆಗೆ ಹೊಸ ಮನೆಯೊಂದನ್ನು ಕಟ್ಟಿಸಿದ್ದರು. ಈ ನೂತನ ಮನೆಯ ಗೃಹಪ್ರವೇಶ ಇದೇ ತಿಂಗಳ 15ರಂದು ನಡೆಯಬೇಕಿತ್ತು. ಈ ಕಾರಣಕ್ಕೆ ರವಿವಾರ ಮನೆಯ ಸಣ್ಣಪುಟ್ಟ ಕೆಲಸ ಮಾಡಿದ ಬಳಿಕ ಮನೆ ಮಾಲಕ ಶಿವಕುಮಾರ್ ತನ್ನ ಸಹೋದರಿಯ ಮಗ ಭರತ್ ಹಾಗೂ ಸಂಬಂಧಿ ಸಚಿನ್ ಎಂಬವರೊಂದಿಗೆ ಫೆ.10ರಂದು ರಾತ್ರಿ ತಮ್ಮ ಹೊಸ ಮನೆಯಲ್ಲಿಯೇ ಮಲಗಿದ್ದರು. ಹೊಸ ಮನೆಗೆ ಹೋದಾಗ ವಿದ್ಯುತ್ ಕಡಿತಗೊಂಡಿದ್ದ ಹಿನ್ನೆಲೆಯಲ್ಲಿ ಜನರೇಟರ್ ಚಾಲನೆಯಲ್ಲಿಟ್ಟು ಮನೆಯ ಕಿಟಕಿ ಹಾಗೂ ಬಾಗಿಲು ಮುಚ್ಚಿ ಮಲಗಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಸೋಮವಾರ ಮುಂಜಾನೆ ಶಿವಕುಮಾರ್ ಅವರ ಪತ್ನಿ ಹೊಸ ಮನೆಗೆ ಹೋಗಿ ಬಾಗಿಲು ಬಡಿದು ಕೂಗಿದರೂ ಯಾರೂ ಪ್ರತಿಕ್ರಿಯೆ ನೀಡಿಲ್ಲ. ಕೂಡಲೇ ಪತ್ನಿಯು ಮನೆಗೆ ಹೋಗಿ ಶಿವಕುಮಾರ್ ಅವರ ಸಹೊದರ ಎಚ್.ಎಂ.ನಾಗರಾಜ್ ಅವರಿಗೆ ತಿಳಿಸಿದಾಗ ಅವರೂ ಬಂದು ಕೂಗಿದ್ದಾರೆ. ಆಗಲೂ ಪ್ರತಿಕ್ರಿಯೆ ಬಾರದಿದ್ದಾಗ ಹಾರೆಯಿಂದ ಬಾಗಿಲನ್ನು ಮೀಟಿ ತೆಗೆದು ಒಳಗೆ ನೋಡಿದಾಗ ಶಿವಕುಮಾರ್ ಹಾಗೂ ಭರತ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಚಿನ್ ನೆಲದ ಮೇಲೆ ಹೊರಳಾಡುತ್ತಾ ನರಳುತ್ತಿದ್ದ ಎನ್ನಲಾಗಿದ್ದು, ಕೂಡಲೇ ಅವರನ್ನು ನಗರದ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು.

ಪರೀಕ್ಷಿಸಿದ ವೈದ್ಯರು ಶಿವಕುಮಾರ್ ಹಾಗೂ ಭರತ್ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದು, ಸಚಿನ್‍ಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿಗೆ ರವಾನಿಸಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ, ವಿದ್ಯುತ್ ಶಾಕ್ ಅಥವಾ ಜನರೇಟರ್ ಹೊಗೆಯಿಂದ ಸಾವನ್ನಪ್ಪಿರಬಹುದೆಂದು ಶಂಕಿಸಿರುವ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮೃತರಿಬ್ಬರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಬಂದ ನಂತರ ಸಾವಿನ ನಿಖರ ಕಾರಣ ತಿಳಿಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News