ಎಸ್‌ಐಟಿ ತನಿಖೆಗೆ ಬಿಜೆಪಿ ವಿರೋಧವೇಕೆ?: ಸಿದ್ದರಾಮಯ್ಯ ಪ್ರಶ್ನೆ

Update: 2019-02-11 14:42 GMT

ಬೆಂಗಳೂರು, ಫೆ.11: ಆಪರೇಷನ್ ಕಮಲಕ್ಕೆ ಸಂಬಂಧಿಸಿದ್ದು ಎನ್ನಲಾದ ಆಡಿಯೋ ಸಂಬಂಧ ವಿಶೇಷ ತನಿಖಾ ತಂಡ ರಚಿಸುವಂತೆ ಸ್ಪೀಕರ್ ಸೂಚನೆ ನೀಡಿದ್ದಾರೆ. ಆದರೆ, ಬಿಜೆಪಿ ನಾಯಕರು ಯಾವ ಕಾರಣಕ್ಕೆ ಇದನ್ನು ವಿರೋಧಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕೇಂದ್ರದಲ್ಲಿ ನಮ್ಮ ಸರಕಾರವಿದ್ದಾಗ ಸಿಬಿಐ ತನಿಖೆಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಬಿಜೆಪಿಯವರು, ಅವರ ಪಕ್ಷದ ಸರಕಾರ ಬರುತ್ತಿದ್ದಂತೆ ಎಲ್ಲ ಪ್ರಕರಣಗಳಿಗೂ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದಾರೆ ಎಂದರು.

ಡಿವೈಎಸ್ಪಿ ಎಂ.ಕೆ.ಗಣಪತಿ ಪ್ರಕರಣ ಹಾಗೂ ಪರೇಶ್ ಮೆಸ್ತ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಬಿಜೆಪಿ ಪಟ್ಟು ಹಿಡಿದಿತ್ತು. ಸಿಬಿಐ ತನಿಖೆಗೆ ಒಪ್ಪುವ ಬಿಜೆಪಿಯವರು, ಎಸ್‌ಐಟಿ ತನಿಖೆಗೆ ಯಾಕೆ ವಿರೋಧಿಸುತ್ತಿದ್ದಾರೆ ಅನ್ನೋದು ಅರ್ಥವಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಎಸ್‌ಐಟಿ ತನಿಖೆ ಬೇಡ, ನ್ಯಾಯಾಂಗ ತನಿಖೆ ಅಥವಾ ಸದನ ಸಮಿತಿ ಮೂಲಕ ತನಿಖೆಯಾಗಲಿ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ತಪ್ಪು ಮಾಡಿಲ್ಲ ಎಂದರೆ ಯಾವ ತನಿಖೆಯಾದರೂ ಏನು, ಯಾಕೆ ಈ ಪ್ರಕರಣದಲ್ಲಿ ಅವರಿಗೆ ಭಯ ಕಾಡುತ್ತಿದೆ ಎಂದು ಅವರು ತಿಳಿಸಿದರು.

ಸ್ಪೀಕರ್ ಘನತೆಗೆ ಚ್ಯುತಿ ಬರುವಂತೆ ಮಾತನಾಡಿರುವುದು ಯಾರು ಎಂಬುದನ್ನು ತಿಳಿಯಲು ತನಿಖೆಯ ಅಗತ್ಯವಿದೆ. ಸ್ಪೀಕರ್ ಘನತೆಗೆ ಧಕ್ಕೆ ಬರುವಂತೆ ಮಾತನಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದೊಂದು ಎಚ್ಚರಿಕೆಯ ಪಾಠ ಆಗಬೇಕು ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News