‘ಎಸ್‌ಐಟಿ ತನಿಖೆ’ ಕಳ್ಳನ ಕೈಗೆ ಬೀಗ ಕೊಟ್ಟಂತೆ: ಕೆ.ಎಸ್.ಈಶ್ವರಪ್ಪ

Update: 2019-02-11 14:53 GMT

ಬೆಂಗಳೂರು, ಫೆ.11: ನಮಗೆ ಎಸ್‌ಐಟಿ ತನಿಖೆ ಮೇಲೆ ನಂಬಿಕೆಯಿಲ್ಲ. ಇದು ಒಂದು ರೀತಿಯಲ್ಲಿ ಕಳ್ಳನ ಕೈಗೆ ಬೀಗ ಕೊಟ್ಟಂತೆ ಆಗುತ್ತದೆ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ನೀಡಿದ ಹೇಳಿಕೆಯು ಸದನದಲ್ಲಿ ಕೋಲಾಹಲ ಎಬ್ಬಿಸಿತು.

ಸೋಮವಾರ ಭೋಜನ ವಿರಾಮದ ಬಳಿಕ ಸದನವನ್ನು ಒಮ್ಮೆ ಮುಂದೂಡಿ ಮತ್ತೆ ಸಮಾವೇಶಗೊಂಡಾಗ ಸ್ಪೀಕರ್ ಕೆ.ಆರ್.ರಮೇಶ್‌ ಕುಮಾರ್, ಈ ಪ್ರಕರಣದಲ್ಲಿ ನನ್ನ ಹೆಸರು ಪ್ರಸ್ತಾಪವಾಗಿರುವುದರಿಂದ ನಾನೇ ಸ್ವಯಂಪ್ರೇರಿತವಾಗಿ ಸದನದ ಗಮನಕ್ಕೆ ಈ ವಿಷಯವನ್ನು ತಂದಿದ್ದೇನೆ ಎಂದರು.

ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ನನ್ನ ಮೇಲೆ ವಿಶ್ವಾಸವಿಟ್ಟು, ಹೇಳಿಕೆಗಳನ್ನು ನೀಡಿದ್ದಾರೆ. 15 ದಿನಗಳಲ್ಲಿ ಈ ಪ್ರಕರಣದ ತನಿಖೆ ನಡೆದು ಸತ್ಯಾಂಶ ಹೊರಬಂದರೆ, ನಾನು ನಿರಾಳರಾಗಬಹುದು. ಎಸ್‌ಐಟಿ ಮಾಡಿ ಎಂದು ಸರಕಾರಕ್ಕೆ ಸಲಹೆ ನೀಡಿದ್ದೇನೆ. ನನ್ನ ತೀರ್ಮಾನವನ್ನು ಪುನಃ ಪರಿಶೀಲನೆಗೊಳಿಸುವುದಿಲ್ಲ ಎಂದು ಸ್ಪೀಕರ್ ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಈಶ್ವರಪ್ಪ, ನಾವು ಸದನ ಸಮಿತಿಯೋ ಅಥವಾ ನ್ಯಾಯಾಂಗ ತನಿಖೆಗೆ ಆದೇಶ ಮಾಡುತ್ತೀರಾ ಎಂದು ನಂಬಿಕೊಂಡಿದ್ದೆವು. ಆದರೆ, ಈಗ ಎಸ್‌ಐಟಿ ತನಿಖೆಗೆ ಆದೇಶ ಕೊಟ್ಟರೆ, ಕಳ್ಳನ ಕೈಗೆ ಬೀಗ ಕೊಟ್ಟಂತೆ ಆಗುತ್ತದೆ. ಈ ತನಿಖೆಯನ್ನು ನಾವು ಒಪ್ಪಲು ಸಾಧ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಇದೇ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್, ‘ಕಳ್ಳ’ ಅನ್ನುವ ಪದವನ್ನು ಕಡತದಿಂದ ಕೈ ಬಿಡುವಂತೆ ಸೂಚನೆ ನೀಡಿದರು. ಸದನದಲ್ಲಿ ಕೋಲಾಹಲ ಹೆಚ್ಚಾಗುತ್ತಿದ್ದಂತೆ ಸದನವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News