‘ಕರ್ನಾಟಕ ಜನತಾ ರಂಗ’ ಪಕ್ಷದಿಂದ 28 ಕ್ಷೇತ್ರಗಳಲ್ಲೂ ಸ್ಪರ್ಧೆ: ರವಿ ಕೃಷ್ಣಾರೆಡ್ಡಿ

Update: 2019-02-11 15:12 GMT

ಬೆಂಗಳೂರು, ಫೆ.11: ಕರ್ನಾಟಕ ಜನತಾ ರಂಗ ಪಕ್ಷದಿಂದ ರಾಜ್ಯದ ಎಲ್ಲ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ತಿಳಿಸಿದ್ದಾರೆ.

ಸೋಮವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣವನ್ನು ಸ್ವಚ್ಛಗೊಳಿಸುವ, ಆಡಳಿತದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ತರುವ, ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಳ್ಳುವ ನಿಟ್ಟಿನಲ್ಲಿ ಒಂದು ರಾಜಕೀಯ ಪಕ್ಷವನ್ನು ಕಟ್ಟಬೇಕು ಎನ್ನುವ ನಿಲುವಿನಿಂದಾಗಿ, ಕರ್ನಾಟಕ ಜನತಾ ರಂಗ ಪಕ್ಷವನ್ನು ನೋಂದಾಯಿಸಿದ್ದು, ಲೋಕಸಭಾ ಚುನಾವಣೆಗೂ ಮೊದಲೇ ಪಕ್ಷಕ್ಕೆ ಮಾನ್ಯತೆ ಸಿಗುವ ಭರವಸೆಯಿದೆ ಎಂದು ಹೇಳಿದರು.

ಮುಂಬರುವ ಲೋಕಸಭಾ ಚುನಾವಣೆಯ ದಿನಾಂಕದ ಘೋಷಣೆಯನ್ನು ಚುನಾವಣಾ ಆಯೋಗ ಇನ್ನೊಂದು ತಿಂಗಳಲ್ಲಿ ಘೋಷಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪಕ್ಷವು ರಾಜ್ಯ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ನಿಲ್ಲಿಸುವ ನಿರ್ಣಯವನ್ನು ಕೈಗೊಳ್ಳಲಿದೆ. ಪಕ್ಷದ ಧ್ಯೇಯ ಮತ್ತು ಸಿದ್ಧಾಂತಗಳಾದ ಸ್ವಚ್ಛ, ಪ್ರಾಮಾಣಿಕ, ಜನಪರ ರಾಜಕಾರಣದಲ್ಲಿ ವಿಶ್ವಾಸ ಇಟ್ಟಿರುವ ನಾಡಿನ ಭಾಷೆ, ನೆಲ- ಜಲ ರಕ್ಷಿಸಲು ಬಯಸುವ ಜನರು ಮತ್ತು ನಾಯಕರು ನಮ್ಮ ಪಕ್ಷವನ್ನು ಸೇರಿ ಬಲಪಡಿಸಲು ಮುಕ್ತ ಆಹ್ವಾನವಿದೆ ಎಂದರು.

ಇನ್ನು ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳು ಜನರಿಗೆ ಸುಳ್ಳು ಹೇಳುತ್ತಾ, ಮೋಸ ಮಾಡುತ್ತಾ, ಮತದಾರರು ಹಾಗೂ ಕಾರ್ಯಕರ್ತರನ್ನು ವಂಚಿಸುತ್ತಾ ಅವುಗಳ ನಾಯಕತ್ವವು ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಮತ್ತು ಕುಟಿಲ ರಾಜಕೀಯದಲ್ಲಿ ಮುಳುಗಿವೆ. ಇನ್ನೊಂದು ಕಡೆ ಪರ್ಯಾಯ ರಾಜಕಾರಣ ಎಂದು ಹೇಳಿಕೊಂಡು ಅಸ್ತಿತ್ವಕ್ಕೆ ಬಂದಿರುವ ಇತರೆ ಒಳ್ಳೆಯ ಪಕ್ಷಗಳು ಉತ್ತಮ, ಕ್ರಿಯಾಶೀಲ ನಾಯಕತ್ವ ಕಂಡುಕೊಳ್ಳದೆ ಸೊರಗಿ ಜನರಲ್ಲಿ ವಿಶ್ವಾಸ ಗಳಿಸುವಲ್ಲಿ ಸೋತಿವೆ ಎಂದು ದೂರಿದರು.

ಅಧಿಕಾರಕ್ಕಾಗಿ ಅಸಹ್ಯಕರವಾಗಿ ಹೊಡೆದಾಡಿಕೊಳ್ಳುವ ಮಟ್ಟಕ್ಕೆ ರಾಜಕೀಯವನ್ನು ಜೆಸಿಬಿ ಹಾಗೂ ಪರ್ಯಾಯ ಪಕ್ಷಗಳು ತಂದಿಟ್ಟಿರುವುದು ನಮ್ಮ ದೌರ್ಭಾಗ್ಯವಾಗಿದೆ. ರಾಜ್ಯವು ಬರಗಾಲದಿಂದ ಬಳಲುತ್ತಿದ್ದರೆ, ವಾರಾನುಗಟ್ಟಲೆ ರೆಸಾರ್ಟಿನಲ್ಲಿ ಶಾಸಕರು ಕಾಲ ಕಳೆಯುತ್ತಿದ್ದಾರೆ. ರಾಜ್ಯದಲ್ಲಿ ನಿರಂತರವಾಗಿ ರೆಸಾರ್ಟ್ ರಾಜಕಾರಣ ಮುಂದುವರೆಯುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಇದಕ್ಕೆಲ್ಲ ತಕ್ಕ ಉತ್ತರವನ್ನು ಜನತೆ ಕೊಡುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಭ್ರಷ್ಟಾಚಾರ ದಿನೇ ದಿನೆ ಹೆಚ್ಚಾಗುತ್ತಿದ್ದು, ಮರಳು, ಗಣಿ, ಕಲ್ಲು, ರಿಯಲ್ ಎಸ್ಟೇಟ್ ಮಾಫಿಯಾಗಳು ಆಡಳಿತವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿವೆ. ರಾಜ್ಯದ ಅಮೂಲ್ಯ ಪ್ರಾಕೃತಿಕ ಸಂಪತ್ತನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಅದರ ವಿರುದ್ಧ ದನಿ ಎತ್ತಲು ಮೊದಲ ಹಂತದ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮಿಕ್ಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಚಾಲ್ತಿಯಲ್ಲಿದೆ. ಪಕ್ಷದಲ್ಲಿ ವಿಶ್ವಾಸವಿಟ್ಟಿರುವ ಜನತೆ ಚುನಾವಣೆಯಲ್ಲಿ ಸ್ಪರ್ಧಿಸಬಯಸಿದಲ್ಲಿ ಮೊ.ಸಂ: 79756 25575 ಅನ್ನು ಸಂಪರ್ಕಿಸಲು ರವಿ ಕೃಷ್ಣಾರೆಡ್ಡಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News