ಗೌರಿ ಹತ್ಯೆ ಪ್ರಕರಣ: ಆರೋಪಿ ಮೋಹನ್ ನಾಯಕ್ ಜಾಮೀನು ಅರ್ಜಿ ವಜಾ

Update: 2019-02-11 15:16 GMT

ಬೆಂಗಳೂರು, ಫೆ.11: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಮೋಹನ್ ನಾಯಕ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಕುರಿತ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎ.ಪಾಟೀಲ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಜಾ ಮಾಡಿ ಆದೇಶಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ನಿವಾಸಿಯಾದ ಎನ್.ಮೋಹನ್ ನಾಯಕ್‌ಗೆ ಈ ಮೊದಲು ವಿಚಾರಣಾ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿತ್ತು. ಗೌರಿ ಹತ್ಯೆ ಪ್ರಕರಣದ ಆರೋಪಿಗಳಿಗೆ ಕುಂಬಳಗೋಡಿನಲ್ಲಿ ಬಾಡಿಗೆ ಮನೆ ಮಾಡಿ ಆಶ್ರಯ ನೀಡಿದ್ದ ಆರೋಪವನ್ನು ಮೋಹನ್ ನಾಯಕ್ ಎದುರಿಸುತ್ತಿದ್ದಾರೆ.

ಪ್ರಕರಣವೇನು: ಮೋಹನ್ ನಾಯಕ್ ಕುಂಬಳಗೋಡಿನಲ್ಲಿ ಶಾಸ್ತ್ರ ಕೂಡ ಹೇಳುತ್ತಿದ್ದ. ಈತನಿಗೆ ಗೋವಾ ಮೂಲದ ಸಂಘಟನೆಯ ಮೂಲಕ ಅಮೋಲ್ ಕಾಳೆಯ ಪರಿಚಯ ಆಗಿತ್ತು. ಆರಂಭದಲ್ಲಿ ಬೇರೊಂದು ಹೆಸರಿನಲ್ಲಿ ಅಮೋಲ್ ಕಾಳೆ ಪರಿಚಿತನಾಗಿದ್ದ. ಈತನ ಜತೆಗೆ ಶಿಕಾರಿಪುರ ಮೂಲದ ಬಂಧಿತ ಆರೋಪಿ ಪ್ರವೀಣ್ ಕೂಡ ಕುಂಬಳಗೋಡಿನ ಮೋಹನ್ ನಾಯಕ್‌ನ ಮನೆಗೆ ಬರುತ್ತಿದ್ದರು. ಆರಂಭದಲ್ಲಿ ಇಬ್ಬರೇ ಬರುತ್ತಿದ್ದವರು ಕೊನೆಗೆ ಪರಶುರಾಮ್ ವಾಗ್ಮೋರೆಯನ್ನೂ ಕರೆದುಕೊಂಡು ಬರಲಾರಂಭಿಸಿದ್ದರು. ಈ ಮೂವರು ಗೌರಿ ಹತ್ಯೆ ಸಂಬಂಧದ ಆರಂಭಿಕ ತಯಾರಿಗಳನ್ನು ಇದೇ ಮನೆಯಲ್ಲಿ ನಡೆಸಿದ್ದು, ನಂತರ ಮಾಗಡಿ ರಸ್ತೆಯ ಮುಖ್ಯ ರಸ್ತೆಯಲ್ಲಿರುವ ಸೀಗೇಹಳ್ಳಿಯ ಸುರೇಶ್ ಎನ್ನುವವರ ಮನೆಗೆ ನೆಲೆ ಬದಲಿಸಿದ್ದರು. ಆ ನಂತರದ ದಿನಗಳಲ್ಲಿ ಮೋಹನ್ ನಾಯಕ್ ಕುಂಬಳಗೋಡಿನ ಕ್ಲಿನಿಕ್ ಮತ್ತು ಮನೆಯನ್ನು ಖಾಲಿ ಮಾಡಿಕೊಂಡು ವಾಪಸ್ ಮಂಗಳೂರಿಗೆ ತೆರಳಿದ್ದ ಎಂದು ಮೂಲಗಳು ತಿಳಿಸಿವೆ. ಆರೋಪಿ ವಿರುದ್ಧ ಸೆಕ್ಷನ್ 120(ಬಿ) ಹತ್ಯೆಗೆ ಒಳಸಂಚು, ಸೆಕ್ಷನ್ 302(ಕೊಲೆ) ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News