ವೈದ್ಯಕೀಯ ನೌಕರರ ಪ್ರತಿಭಟನಾ ಧರಣಿ ಬಿಸಿ: ಆಸ್ಪತ್ರೆಗಳಲ್ಲಿ ಸೇವೆ ವ್ಯತ್ಯಯ ಸಾಧ್ಯತೆ

Update: 2019-02-11 16:23 GMT

ಬೆಂಗಳೂರು, ಫೆ.11: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ವೈದ್ಯಕೀಯ ಹೊರಗುತ್ತಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆ ಹೆಚ್ಚಿದೆ.

ಹೊರಗುತ್ತಿಗೆ ನೌಕರರ ಪ್ರತಿಭಟನಾ ಸ್ಥಳಕ್ಕೆ ಆರೋಗ್ಯ ಸಚಿವ ಶಿವಾನಂದ ಪಾಟೀಲ್, ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ ಪಾಂಡೆ ಸೇರಿದಂತೆ ಪ್ರಮುಖರು ಭೇಟಿ ನೀಡಿ, ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಆದರೆ ಪ್ರತಿಭಟನಾಕಾರರು ಲಿಖಿತ ರೂಪದ ಆಶ್ವಾಸನೆ ನೀಡುವಂತೆ ಆಗ್ರಹಿಸಿದರು. ಅಲ್ಲದೆ ಬೇಡಿಕೆ ಈಡೇರದಿದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದರು.

ರಾಜ್ಯಾದ್ಯಂತ 30 ಸಾವಿರ ವೈದ್ಯಕೀಯ ಹೊರಗುತ್ತಿಗೆ ನೌಕರರಿದ್ದು, ಪ್ರತಿಭಟನೆ ಮುಂದುವರೆದಲ್ಲಿ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಆದರೆ ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ಸರಕಾರ ಲಿಖಿತ ರೂಪದ ಭರವಸೆ ನೀಡುವುದು ಸಹ ಅನುಮಾನವಾಗಿದೆ.

ಆದೇಶ: ವೈದ್ಯಕೀಯ ಗುತ್ತಿಗೆ ಶುಶ್ರೂಶಕರ ಮುಷ್ಕರ ಹಿನ್ನೆಲೆ ಆರೋಗ್ಯ ಇಲಾಖೆ ಕೂಡ ಎಚ್ಚೆತ್ತುಕೊಂಡಿದೆ. ರೋಗಿಗಳಿಗೆ ತೊಂದರೆ ಆಗಬಾರದು ಎನ್ನುವ ನಿಟ್ಟಿನಲ್ಲಿ ಖಾಯಂ ನೌಕರರು ರಜಾ ತೆಗೆದುಕೊಳ್ಳದಂತೆ ಆದೇಶಿಸಿದೆ.

ಒಂದೆರಡು ದಿನಗಳ ಮುಷ್ಕರಕ್ಕೆ ಆರೋಗ್ಯ ಇಲಾಖೆ ಸಜ್ಜಾಗಿದ್ದು, ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸಿವೆ. ಆದರೆ ಮುಷ್ಕರ ಮುಂದುವರೆದಲ್ಲಿ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆಗೆ ವೈದ್ಯರು ಸಂದೇಶ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News