ಪ್ರತೀ ಮನೆಗೆ ತೆರಳಿ ಕೇಂದ್ರ ಸರ್ಕಾರದ ವೈಫಲ್ಯ ಮನವರಿಕೆ: ಶಿವಮೊಗ್ಗ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್

Update: 2019-02-11 17:36 GMT

ಶಿವಮೊಗ್ಗ, ಫೆ. 11: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಕಾಂಗ್ರೆಸ್ ಪಕ್ಷ ಸಕಲ ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ತಳಮಟ್ಟದಿಂದ ಪಕ್ಷದ ಸಂಘಟನೆ ಮಾಡುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ತಿಳಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅವರು ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಈ ಬಾರಿ ಅತ್ಯಂತ ವ್ಯವಸ್ಥಿತವಾಗಿ ಚುನಾವಣೆ ಎದುರಿಸಲಾಗುವುದು. ಯಾವುದೇ ಗೊಂದಲ-ಗಡಿಬಿಡಿಗೆ ಆಸ್ಪದವಾಗದಂತೆ ಎಚ್ಚರ ವಹಿಸಲಾಗುವುದು. ಕಾರ್ಯಕರ್ತರು, ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಅತ್ಯಂತ ಸಮರ್ಥವಾಗಿ ಚುನಾವಣೆ ಎದುರಿಸಲಾಗುವುದು ಎಂದರು.

ಜಿಲ್ಲೆಯಾದ್ಯಂತ ಜನ ಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಮೂಲಕ ಮನೆ ಮನೆಗೆ ತೆರಳಿ ಮೋದಿ ಸರ್ಕಾರದ ವೈಫಲ್ಯಗಳು ಹಾಗೂ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಾಧೆನಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.

ಹಸಿಸುಳ್ಳು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಸಿ ಸುಳ್ಳುಗಳನ್ನು ಹೇಳುತ್ತಿದ್ದಾರೆ. ಅಧಿಕಾರಕ್ಕೆ ಬರುವ ಮುನ್ನ ಅವರು ದೇಶವಾಸಿಗಳಿಗೆ ನೀಡಿದ್ದ ಎಲ್ಲ ಭರವಸೆಗಳು ಹುಸಿಯಾಗಿವೆ. ಈ ಬಾರಿ ಮೋದಿ ಅಧಿಕಾರದಿಂದ ದೂರ ಉಳಿಯುವುದು ನಿಶ್ಚಿತವಾಗಿದೆ ಎಂದು ತಿಳಿಸಿದರು.

ಚುನಾವಣೆ ಹತ್ತಿರ ಬರುತ್ತಿದ್ದಂತೆ ಕೇಂದ್ರ ಸರ್ಕಾರ ಮತ ಬ್ಯಾಂಕ್ ರಾಜಕಾರಣ ನಡೆಸುತ್ತಿದೆ. ಬಹುಸಂಸ್ಕೃತಿಗೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದೆ. ಧರ್ಮಗಳ ನಡುವೆ ಕಂದಕ ಏರ್ಪಡಿಸಿ ಬಡಜನರನ್ನು ದೂರ ತಳ್ಳಿ, ಕಾರ್ಪೋರೇಟ್ ವಲಯಕ್ಕೆ ಆದ್ಯತೆ ಕೊಟ್ಟು ಇಡೀ ವ್ಯವಸ್ಥೆಯನ್ನೇ ಹಾಳುಗೆಡವುವ ಕಾರ್ಯದಲ್ಲಿ ಕೇಂದ್ರ ಸರ್ಕಾರ ತೊಡಗಿದೆ. ಈ ಎಲ್ಲ ವಿಚಾರಗಳನ್ನು ಜನರಿಗೆ ತಿಳಿಸಿ ಈ ಬಾರಿ ಕಾಂಗ್ರೆಸ್‍ನ್ನು ಬೆಂಬಲಿಸುವಂತೆ ಮನವಿ ಮಾಡಲಾಗುವುದು ಎಂದರು.

ನೋಟು ಅಮಾನ್ಯೀಕರಣದ ನಷ್ಟಗಳು, ಆರ್‍ಟಿಐ ದುರ್ಬಲಗೊಳಿಸಿದ್ದು, ವಿನಾಕಾರಣ ದೇಶ ಸುತ್ತಿದ್ದು, ಕಪ್ಪು ಹಣವನ್ನು ವಾಪಾಸ್ ಪಡೆಯದೇ ಇರುವುದು, ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿರುವುದು, ಚುನಾವಣಾ ಸಮಯದಲ್ಲಿ ರಾಮ ಮಂದಿರ ವಿಷಯ ಎಳೆದು ತರುವುದು ಇವೆಲ್ಲವೂ ಇವರ ದುರಾಡಳಿತಕ್ಕೆ ಸಾಕ್ಷಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಜೊತೆಗೆ ರೆಫೆಲ್ ಯುದ್ದ ವಿಮಾನ ಖರೀದಿ ಅಪಹರಣ, ಗಂಗಾ ಸ್ವಚ್ಚ ಯೋಜನೆಯ 2 ಕೋಟಿ ರೂ. ಹಗರಣ, ಗುಜರಾತಿನ ಜಿಎಸ್‍ಪಿಸಿಯ 20 ಕೋಟಿ, ಓಎನ್‍ಜಿಸಿಎಲ್ ನಲ್ಲಿ 16 ಸಾವಿರ ಕೋಟಿ, ಧಾನ್ಯ ಖರೀದಿಯಲ್ಲಿ 2.50 ಲಕ್ವ ಕೋಟಿ, ಸೋಲಾರ್ ಯೋಜನೆಯ ಹೆಸರಿನಲ್ಲಿ 2,200 ಕೋಟಿ, ಅಮಿತ್ ಶಾ ಅವರ ರಾಜ್‍ಕೋಟ್ ಬ್ಯಾಂಕ್ ಹಗರಣದಲ್ಲಿ 7 ಸಾವಿರ ಕೋಟಿ, ಆದಾನಿಯವರ 1.92 ಲಕ್ಷ ಕೋಟಿ, ಮಲ್ಯ ಅವರ 9 ಸಾವಿರ ಕೋಟಿ, ಆನಾರ್ ಪಟೇಲ್ ಜಮೀನು ಹಗರಣದ 14 ಸಾವಿರ ಕೋಟಿ, ಜೈಶಾ ಅವರ 800 ಕೋಟಿ ಹೀಗೆ ಹಗರಣಗಳೇ ಮೋದಿ ಕೊಟ್ಟ ದೊಡ್ಡ ಉಡುಗೊರೆಯಾಗಿದೆ ಎಂದು ಟೀಕಿಸಿದರು.

ದೇಶ ಲೂಟಿ ಮಾಡಿದರು. ರೈತ ವಿರೋಧಿಯಾಗಿದ್ದರು. ನಿರುದ್ಯೋಗಕ್ಕೆ ಕಾರಣರಾದರು, ಶ್ರೀಮಂತರಿಗೆ ಮಣೆ ಹಾಕಿದರು, ಕಾರ್ಮಿಕರ ಹಣಕ್ಕೂ ಕೈಹಾಕಿದರು, ಫಸಲ್ ವಿಮಾ ಯೋಜನೆಯ ಮೂಲಕ ವಿಮಾ ಕಂಪೆನಿಗಳಿಗೆ ದುಡ್ಡು ಮಾಡಿಕೊಟ್ಟರು ಹೀಗೆ ಕೇಂದ್ರ ಸರ್ಕಾರ ವಿಫಲವಾಗಿ ಜನರ ಮನಸ್ಸಿನಿಂದ ದೂರ ಉಳಿದಿದೆ ಎಂದರು. ಗೋಷ್ಠಿಯಲ್ಲಿ ಪ್ರಮುಖರಾದ ವಿಶ್ವನಾಥ್ ಕಾಶಿ, ಹೆಚ್.ಎಂ.ಚಂದ್ರಶೇಖರಪ್ಪ, ನಾಗರಾಜ್, ಶಾಮೀರ್ ಖಾನ್ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News