ಮಂಡ್ಯ: ಗಣಿಗಾರಿಕೆ ಸ್ಥಗಿತ, ಡಿಸ್ನಿಲ್ಯಾಂಡ್ ಯೋಜನೆ ಕೈಬಿಡಲು ಒತ್ತಾಯಿಸಿ ಧರಣಿ

Update: 2019-02-11 18:24 GMT

ಮಂಡ್ಯ,ಫೆ.11: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ಸ್ಥಗಿತ, ಡಿಸ್ನಿಲ್ಯಾಂಡ್ ಮಾದರಿ ಯೋಜನೆ ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಾವೇರಿ- ಕೆಆರ್‍ಎಸ್ ಉಳಿವಿಗಾಗಿ ಜನಾಂದೋಲನ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ಕುಳಿತ ಪ್ರತಿಭಟನಾಕಾರರು, ಅಕ್ರಮ ಕಲ್ಲು ಗಣಿಗಾರಿಕೆಯನ್ನು ನಿಲ್ಲಿಸುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್ ಮಾತನಾಡಿ, ಜಿಲ್ಲೆಯಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂದು ತಿಳಿದಿದ್ದರೂ ಜಿಲ್ಲಾಡಳಿತ ಕೇವಲ ಕಾಟಾಚಾರಕ್ಕೆ 144 ಸೆಕ್ಷನ್ ಜಾರಿ ಮಾಡಿ ಹಿಂಪಡೆಯುವ ನಾಟಕವಾಡುತ್ತಿರುವುದು ಖಂಡನೀಯ. ಕೂಡಲೇ ಜಿಲ್ಲೆಯಲ್ಲಿರುವ ಎಲ್ಲ ಅಕ್ರಮ ಕಲ್ಲುಗಣಿಗಾರಿಕೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಅಕ್ರಮ ಗಣಿಗಾಕೆಯಿಂದ ಚಂಬಲ್ ಕಣಿವೆಗಳು ಸೃಷ್ಟಿಯಾಗುತ್ತಿವೆ. ರಾಜಕಾರಣಿಗಳ ಹಣದ ಲೂಟಿಗೆ ಸುಲಭ ಸಾಧನವಾಗಿರುವ ಅಕ್ರಮ ಗಣಿಗಾರಿಕೆಯ ಘೋರ ಪರಿಣಾಮ ಇದಾಗಿದೆ. ಸೂಕ್ಷ್ಮ ಹಾಗೂ ಸಂರಕ್ಷಿತ ಪ್ರದೇಶವಾದ ಕೆಆರ್‍ಎಸ್ ಅಣೆಕಟ್ಟೆ ಸುತ್ತಲಿನ ಸಾವಿರಾರು ಎಕರೆ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಪಾಲಿಸಬೇಕಾದ ಹಲವು ಸುರಕ್ಷಿತ ಕಾಯ್ದೆಗಳನ್ನು ಉಲ್ಲಂಘಿಸಿ ಡಕಾಯಿತಿಗೆ ಸಮನಾದ ಗಣಿಗಾರಿಕೆ ನಡೆಸಲಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಡಳಿತದ ಹಲವು ಇಲಾಖೆಗಳು ಕನಿಷ್ಠ ಪ್ರಮಾಣದ ಕರ್ತವ್ಯ ಪಾಲನೆ ಮಾಡಿದ್ದರೂ ಇಂತಹದೊಂದು ಶೋಚನೀಯ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಒಂದು ಕಡೆ ಬಳ್ಳಾರಿ, ಚಿತ್ರದುರ್ಗ ತುಮಕೂರು ಜಿಲ್ಲೆಗಳಲ್ಲಿ ಗಣಿಗಾರಿಕೆಯಿಂದ ಬಾಧಿತವಾದ ಪ್ರದೇಶಗಳ ಅಭಿವೃದ್ಧಿಗೆ ಸುಮಾರು 24 ಸಾವಿರ ಕೋಟಿ ರೂ.ಗಳ ಅನುದಾನ ಬಿಡುಗಡೆಗೆ ಸುಪ್ರೀಂಕೋರ್ಟ್ ಮೊರೆ ಹೋಗಿರುವ ರಾಜ್ಯ ಸರ್ಕಾರ ಜಿಲ್ಲೆಯ ಅಕ್ರಮ ಗಣಿಗಾರಿಕೆಯ ದುಷ್ಪರಿಣಾಮಗಳ ಬಗ್ಗೆ ಜಾಣ ಮೌನ ವಹಿಸಿರುವುದು ಶೋಚನಿಯ. ಕೂಡಲೇ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದರು.

ಡಿಎಸ್‍ಎಸ್ ಮುಖಂಡ ಗುರುಪ್ರಸಾದ್ ಕೆರಗೋಡು ಮಾತನಾಡಿ, ಪ್ರಸ್ತುತ ಕೆಆರ್‍ಎಸ್ ಅಣೆಕಟ್ಟಯ 20 ಕಿಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆಗೆ ತಾತ್ಕಾಲಿಕ ನಿಷೇಧವಿದೆ. ಆದರೂ ಗಣಿಗಾರಿಕೆಯಿಂದ ಕೆಆರ್‍ಎಸ್ ಅಣೆಕಟ್ಟೆಗೆ ಯಾವುದೇ ಅಪಾಯವಿಲ್ಲವೆಂದು ವಿಜ್ಞಾನಿಗಳಿಂದ ವರದಿ ಪಡೆಯಲು ಯತ್ನಿಸಿ ವಿಫಲರಾಗಿರುವ ಗಣಿ ಮಾಲಕರು ಕಳೆದ ಕಲವು ದಿನಗಳಿಂದ ಬೇಬಿ ಬೆಟ್ಟದ ಆಸುಪಾಸಿನಲ್ಲಿ 144 ಸೆಕ್ಷನ್ ಉಲ್ಲಂಘಿಸಿ ಗಣಿಗಾರಿಕೆ ಪುನರಾರಂಭಿಸಿದ್ದಾರೆ. ಇದಕ್ಕೆ ಜಿಲ್ಲಾಡಳಿತ ವೈಫಲ್ಯವೇ ಕಾರಣ ಎಂದು ಆರೋಪಿಸಿದರು.

ಪಾಂಡವಪುರ ತಹಶೀಲ್ದಾರ್ ಅವರ ಮಹಜರು ವರದಿ ಆಧಾರಿಸಿ ಅಕ್ರಮ ಗಣಿಗಾರಿಕೆ ನಡೆಸಿರುವ 195 ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಗಣಿಗಾರಿಕೆಗೆ ಸ್ಥಾಪಿಸಲಾಗಿರುವ ಯಂತ್ರೋಪಕರಣಗಳನ್ನು ವಶಕ್ಕೆ ಪಡೆದುಕೊಳ್ಳಬೇಕು ಹಾಗೂ ಜನರ ಪರವಾಗಿ ಕೆಲಸ ನಿರ್ವಹಿಸುವ ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ಕೆಆರ್‍ಎಸ್ ಬಳಿ ಡಿಸ್ನಿಲ್ಯಾಂಡ್ ಮಾದರಿ ನಿರ್ಮಾಣ ಮಾಡಿ, ಅತಿ ಎತ್ತರದ ಕಾವೇರಿ ಪ್ರತಿಮೆ ಹಾಗು ಅಷ್ಟೇ ಎತ್ತರದ ವೀಕ್ಷಣಾ ಗೋಪುರ ನಿರ್ಮಿಸಲು ಸರ್ಕಾರ ಮುಂದಾಗಿರುವುದು ರಾಜ್ಯದ ಜನರ ಪಾಲಿಗೆ ದುರಂತವೇ ಸರಿ. ಇನ್ನಾದರೂ ಕೆಆರ್‍ಎಸ್‍ನಂತಹ ಸೂಕ್ಷ್ಮ ಪ್ರದೇಶದಲ್ಲಿ ಈ ಯೋಜನೆ ಮಾಡುವ ಬದಲು ಮತ್ತೊಂದು ಪ್ರವಾಸಿ ತಾಣವಾಗಿರುವ ಶಿವನ ಸಮುದ್ರದ ಬಳಿ ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಸಮಿತಿಯ ಪ.ಮಲ್ಲೇಶ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ  ಹೆಚ್.ಡಿ.ಜಯರಾಂ, ಸಿಐಟಿಯು ಸಿ.ಕುಮಾರಿ, ರೈತಸಂಘ ಮಹಿಳಾ ಘಟಕೆ ಜಿಲ್ಲಾಧ್ಯಕ್ಷೆ ಲತಾಶಂಕರ್, ಸುನಂದಜಯರಾಂ, ಎಂ.ಬಿ.ನಾಗಣ್ಣಗೌಡ, ಬೊಮ್ಮೇಗೌಡ ಸೇರಿದಂತೆ ಮತ್ತಿತರರು ಪಾಲೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News