ಸಿಬಿಐ ಹೆಚ್ಚುವರಿ ನಿರ್ದೇಶಕ ನಾಗೇಶ್ವರ್ ರಾವ್ ನ್ಯಾಯಾಂಗ ನಿಂದನೆಯ ತಪ್ಪಿತಸ್ಥ: ಸುಪ್ರೀಂ ಕೋರ್ಟ್ ತೀರ್ಪು

Update: 2019-02-12 09:30 GMT

ಹೊಸದಿಲ್ಲಿ, ಫೆ.12 ನ್ಯಾಯಾಲಯ ಆದೇಶವನ್ನು ತಿರಸ್ಕರಿಸಿದ  ಮಾಜಿ ಹಂಗಾಮಿ ಸಿಬಿಐ ಹೆಚ್ಚುವರಿ ನಿರ್ದೇಶಕ ನಾಗೇಶ್ವರ ರಾವ್ ಹಾಗೂ ಸಿಬಿಐ ಕಾನೂನು ಸಲಹೆಗಾರ ಬಾಸುರನ್ ನ್ಯಾಯಾಂಗ ನಿಂದನೆಯ ತಪ್ಪಿತಸ್ಥರು ಎಂದು ಸುಪ್ರೀಂಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ.

ರಾವ್ ಹಾಗೂ ಸಿಬಿಐ ಕಾನೂನು ಸಲಹೆಗಾರ ಒಂದು ವಾರದೊಳಗೆ ತಲಾ ಒಂದು ಲಕ್ಷ ರೂ. ದಂಡ ಪಾವತಿಸಬೇಕು ಹಾಗೂ ನ್ಯಾಯಾಲಯ ಕಲಾಪ ಮುಗಿಯುವ ತನಕ ಸಿಜೆಐ ಕೋರ್ಟ್ ರೂಮ್‌ನ ಮೂಲೆಯಲ್ಲಿ ಇಬ್ಬರೂ ಕುಳಿತುಕೊಂಡಿರಬೇಕು. ಇದು ಅವರಿಗೆ ಶಿಕ್ಷೆಯಾಗಿದೆ ಎಂದು ಸಿಜೆಐ ರಂಜನ್ ಗೊಗೊಯ್ ನೇತೃತ್ವದ ಸುಪ್ರೀಂಕೋರ್ಟ್ ನ್ಯಾಯಪೀಠ ಆದೇಶಿಸಿದೆ.

ನ್ಯಾಯಾಲಯವು ಸಿಬಿಐ ಜಂಟಿ ನಿರ್ದೇಶಕ ಅರುಣ್ ಕುಮಾರ್ ಶರ್ಮಾರನ್ನು ವರ್ಗಾವಣೆ ಮಾಡದಂತೆ ಆದೇಶಿಸಿತ್ತು.  ಆದರೆ ರಾವ್ ಅವರು ಸುಪ್ರೀಂಕೋರ್ಟ್ ಆದೇಶವನ್ನು ದಿಕ್ಕರಿಸಿ ಬಿಹಾರದ ಮುಝಫ್ಫರ್‌ಪುರ್ ಬಾಲಗೃಹದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿದ್ದ ಸಿಬಿಐ ಜಂಟಿ ನಿರ್ದೇಶಕ ಅರುಣ್ ಕುಮಾರ್ ಶರ್ಮಾರನ್ನು ವರ್ಗಾವಣೆ ಮಾಡಿದ್ದರು.

 ರಾವ್ ಅವರ ಬೇಷರತ್ ಕ್ಷಮೆಯಾಚನೆಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್, ಶರ್ಮಾರನ್ನು ಮುಝಫ್ಫರ್‌ಪುರ ಬಾಲಗೃಹ ಪ್ರಕರಣದ ತನಿಖೆಯಿಂದ ವರ್ಗಾವಣೆ ಮಾಡದಂತೆ ತಾನು ಎರಡು ಬಾರಿ ಆದೇಶ ನೀಡಿದ್ದರೂ ರಾವ್ ಭಾರೀ ಅವಸರ ಪ್ರದರ್ಶಿಸಿದರು. ಶರ್ಮಾರನ್ನು ವರ್ಗಾವಣೆ ಮಾಡಿ ನ್ಯಾಯಾಲಯದ ಆದೇಶವನ್ನು ಕಡೆಗಣಿಸಿದ್ದಾರೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News