'ಸರ್ದಾರ್ ಪ್ರತಿಮೆಗೆ 3,000 ಕೋಟಿ, ಜಲಿಯನ್ ವಾಲಾ ಬಾಗ್ ಸ್ಮಾರಕಕ್ಕೆ ಒಂದು ರೂ. ಕೂಡ ಇಲ್ಲ'

Update: 2019-02-12 10:26 GMT

ಹೊಸದಿಲ್ಲಿ, ಫೆ. 12: ಅಮೃತಸರ್ ನಗರದಲ್ಲಿರುವ ಜಲಿಯನ್ ವಾಲಾ ಬಾಗ್ ನಲ್ಲಿನ ಬೆಳಕು ಮತ್ತು ಧ್ವನಿ ಶೋ (ಲೈಟ್ ಆ್ಯಂಡ್ ಸೌಂಡ್ ಶೋ) ಮರು ಆರಂಭಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಿಪಿಐ(ಎಂ) ಸದಸ್ಯ ಎಂಬಿ ರಾಜೇಶ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಹಣಕಾಸಿನ ಕೊರತೆಯಿಂದಾಗಿ ಈ ಶೋ ನಿಲ್ಲಿಸಲಾಗಿದೆ ಎಂದು ಇತ್ತೀಚೆಗೆ ಈ ಐತಿಹಾಸಿಕ ಸ್ಥಳಕ್ಕೆ ತಮ್ಮ ಕುಟುಂಬದ ಜತೆ ಭೇಟಿಯಾಗಿದ್ದ ರಾಜೇಶ್ ಗೆ ಅಲ್ಲಿನ ಸಿಬ್ಬಂದಿ ತಿಳಿಸಿದ್ದರು. ಸ್ಮಾರಕದ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತ ಜಲಿಯನ್ ವಾಲಾ ಬಾಗ್ ನ್ಯಾಷನಲ್ ಮೆಮೋರಿಯಲ್ ಟ್ರಸ್ಟ್ ಪ್ರಧಾನಿಯ ನೇತೃತ್ವದಲ್ಲಿದೆ.

ಈ ಬಗ್ಗೆ ಟ್ವೀಟ್ ಮಾಡಿದ ರಾಜೇಶ್ ''ಹಣಕಾಸಿನ ಕೊರತೆಯ ನೆಪದಲ್ಲಿ ಪ್ರಧಾನಿ ಮೋದಿ ನೇತೃತ್ವದ ಟ್ರಸ್ಟ್ ಜಲಿಯನ್ ವಾಲಾ ಬಾಗ್ ಲೈಟ್ ಆ್ಯಂಡ್ ಸೌಂಡ್ ಕಾರ್ಯಕ್ರಮವನ್ನು ದುರಂತದ ನೂರನೇ ವರ್ಷದಲ್ಲಿ ನಿಲ್ಲಿಸಿದೆ.  ಒಂದು ಪ್ರತಿಮೆಗೆ 3,000 ಕೋಟಿ ರೂ. ಆದರೆ ಹುತಾತ್ಮರಿಗೆ ಒಂದು ರೂಪಾಯಿ ಕೂಡ ಇಲ್ಲ. ಅನುದಾನ ಬಿಡುಗಡೆಗೆ ಪ್ರಧಾನಿಯನ್ನು ಕೋರಿದ್ದೇನೆ,'' ಎಂದು ಬರೆಯುವ ಮೂಲಕ ಸರ್ದಾರ್ ಪ್ರತಿಮೆಗೆ ಸರಕಾರ ರೂ 3,000 ಕೋಟಿ ಬಳಸಿದ್ದ ಬಗ್ಗೆ ಉಲ್ಲೇಖಿಸಿದ್ದಾರೆ.

ಜಲಿಯನ್ ವಾಲಾ ಬಾಗ್ ಹುತಾತ್ಮರ ಗೌರವಾರ್ಥ ಕೇಂದ್ರ ಸರಕಾರ ಎಪ್ರಿಲ್ 2010ರಂದು ಈ ಲೈಟ್ ಆ್ಯಂಡ್ ಸೌಂಡ್ ಶೋ ಆರಂಭಿಸಿತ್ತು. ಇದರ ಉದ್ಘಾಟನೆಯನ್ನು ಅಂದಿನ ರಕ್ಷಣಾ ಸಚಿವ ಎಕೆ ಆ್ಯಂಟನಿ ಉದ್ಘಾಟಿಸಿದ್ದರು. ಆದರೆ 2014ರಿಂದ ಈ ಶೋ ಅಲ್ಲಿ ನಡೆಯುತ್ತಿಲ್ಲವೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News