ಶಾಸಕ ಕುಮಾರಸ್ವಾಮಿಯಿಂದ ದಲಿತ ಕುಟುಂಬದ ಮೇಲೆ ದೌರ್ಜನ್ಯ: ಆರೋಪ

Update: 2019-02-12 13:38 GMT

ಚಿಕ್ಕಮಗಳೂರು, ಫೆ.12: ಮೂಡಿಗೆರೆ ವಿಧಾನಸಭೆ ಕ್ಷೇತ್ರದ ಬಿಜೆಪಿ ಪಕ್ಷದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ತಮ್ಮ ರಾಜಕೀಯ ಅಧಿಕಾರ ಹಾಗೂ ಪ್ರಭಾವ ಬಳಿಸಿಕೊಂಡು ದಲಿತ ಕುಟುಂಬವೊಂದರ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿರುವುದಲ್ಲದೇ ಕೊಲೆ ಬೆದರಿಕೆಯೊಡ್ಡಿ ದಲಿತ ಕುಟುಂಬಕ್ಕೆ ಸೇರಿದ 7 ಎಕರೆ ಜಮೀನು ಕಬಳಿಸಲು ಸಂಚು ನಡೆಸುತ್ತಿದ್ದಾರೆಂದು ನೊಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ನೊಂದ ಕುಟುಂಬದ ಸದಸ್ಯ ಲೋಕೇಶ್ ಮಾತನಾಡಿ, ತಾನು ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಕಲ್ಮನೆ ಗ್ರಾಮದ ನಿವಾಸಿಯಾಗಿದ್ದು, ಈ ಗ್ರಾಮದ ಸ.ನಂ.49 ರಲ್ಲಿ ತನ್ನ ತಂದೆ ಸಿದ್ದಯ್ಯ ಎಂಬವರಿಗೆ 1981-82ನೇ ಸಾಲಿನಲ್ಲಿ ಫಾರಂ ನಂ.53, 57ರಲ್ಲಿ 5 ಎಕರೆ ಹಾಗೂ ತಾಯಿ ಜಾನಕಮ್ಮ ಅವರಿಗೆ 2 ಎಕರೆ ಜಮೀನು ಮಂಜೂರಾಗಿದೆ. ಈ ಸಂಬಂಧ ಸರಕಾರ ನೀಡಿರುವ ಸಾಗುವಳಿ ಚೀಟಿ, ಮ್ಯುಟೇಶನ್ ಮತ್ತಿತರ ಜಮೀನಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನೂ ನೀಡಿದ್ದಾರೆ. ತಂದೆಯ ಮರಣ ನಂತರ 5 ಎಕರೆ ಜಮೀನು ನನ್ನ ಹೆಸರಿಗೆ ಖಾತೆಯಾಗಿದ್ದು, ಜಮೀನಿನಲ್ಲಿ ಕಾಫಿ ಕೃಷಿ ಮಾಡಿದ್ದೇನೆ. ಇದೇ ಗ್ರಾಮದ ಸ.ನಂ.49 ರಲ್ಲಿ ತನ್ನ ಜಮೀನಿನ ಪಕ್ಕದಲ್ಲಿ ಸರಕಾರಿ ಜಮೀನನ್ನು ಸ್ಥಳೀಯ ಬಿಜೆಪಿ ಮುಖಂಡ ಶಿವರಾಜ್‍ಗೌಡ ಎಂಬವರು ಒತ್ತುವರಿ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಆ ಜಮೀನನ್ನು ಆ ಜಮೀನನ್ನು ಶಾಸಕ ಕುಮಾರಸ್ವಾಮಿ ಅವರಿಗೆ ಮಾರಾಟ ಮಾಡಿದ್ದು, ತನ್ನ ಸ್ವಾಧೀನದಲ್ಲಿರುವ ಜಮೀನು ಕಬಳಿಸಲು ಶಾಸಕ ಕುಮಾರಸ್ವಾಮಿ ಅವರು ಕಳೆದ ಮೂರು ವರ್ಷಗಳಿಂದ ತಮ್ಮ ಬೆಂಬಲಿಗರ ಮೂಲಕ ತನಗೆ ಹಾಗೂ ತನ್ನ ಕುಟುಂಬದ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆಂದು ಆರೋಪಿದರು.

ಕಳೆದ 2018, ಡಿ.21ರಂದು ಶುಕ್ರವಾರ ಬೆಳಗ್ಗೆ ಕುಮಾರಸ್ವಾಮಿ ಅವರ ಬೆಂಬಲಿಗರಾದ ಶಿವರಾಜ್‍ ಗೌಡ, ಧರ್ಮಪಾಲ್, ಗಿರೀಶ್‍ ಗೌಡ, ರವೀಂದ್ರಗೌಡ, ಶಿವಣ್ಣಗೌಡ, ಅಣ್ಣಪ್ಪಹೆಮ್ಮಕ್ಕಿ, ಹೆಸ್ಗಲ್ ಗಿರೀಶ, ತರುವೆ ಮಹೇಶ, ಹೊಸ್ಕೆರೆ ಪರಮೇಶ್, ರಂಗನಾಥ್, ರವಿ, ಸಚಿನ್‍ಗೌಡ, ಸಂತೋಷ್ ಎಂಬವರು ಇದು ಶಾಸಕ ಕುಮಾರಸ್ವಾಮಿ ಅವರ ಜಮೀನು ಎಂದು ಹೇಳಿಕೊಂಡು ಏಕಾಏಕಿ ಸುಮಾರು 200 ಜನರೊಂದಿಗೆ ತನ್ನ ಕಾಫಿ ತೋಟಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದಾಗ ತನ್ನನ್ನು ಹಾಗೂ ತನ್ನ ಕುಟುಂಬದ ಸದಸ್ಯರನ್ನು ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಕತ್ತಿ, ದೊಣ್ಣೆ ತೋರಿಸಿ ಹೆದರಿಸಿದ್ದಾರೆ. ಇದರಿಂದ ಬೆದರಿದ ನಾವು ಪೊಲೀಸರಿಗೆ ದೂರು ನೀಡುವ ಸಲುವಾಗಿ ತೋಟದಿಂದ ಹೊರ ಬಂದಿದ್ದೆವು. ಈ ವೇಳೆ ಕುಮಾರಸ್ವಾಮಿ ಬೆಂಬಲಿಗರು ನನ್ನ ಕಾಫಿ ತೋಟದಲ್ಲಿ ಬೆಳೆದಿದ್ದ ಸುಮಾರು 60 ಮೂಟೆಗಳಷ್ಟು ಕಾಫಿ ಹಣ್ಣುಗಳನ್ನು ಕಟಾವು ಮಾಡಿ 9 ವಾಹನಗಳಲ್ಲಿ ಕದ್ದೊಯ್ದಿದ್ದಾರೆ ಎಂದು ಅಳಲು ತೋಡಿಕೊಂಡರು.

ಘಟನೆ ಸಂಬಂಧ ಕೂಡಲೇ ಬಾಳೂರು ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಠಾಣೆಗೆ ತಮ್ಮನ್ನು ಕರೆಸಿದ ಪೊಲೀಸರು ಕುಮಾರಸ್ವಾಮಿ ಅವರಿಗೆ ಈ ಜಮೀನು ಸೇರಿದೆ ಎನ್ನುವುದಕ್ಕೆ ಯಾವುದೇ ದಾಖಲೆಗಳಿಲ್ಲದಿದ್ದರೂ ಜಮೀನು ಕುಮಾರಸ್ವಾಮಿ ಅವರಿಗೆ ಸೇರಿದ್ದೆಂದು ಹೇಳುವ ಮೂಲಕ ಅವರ ರಾಜಕೀಯ ಒತ್ತಡಕ್ಕೆ ಮಣಿದು ನನಗೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಅವರ ಗಮನಕ್ಕೆ ಈ ವಿಚಾರವನ್ನು ತಂದಿದ್ದ ವೇಳೆ ಅವರು ದಾಖಲೆಗಳನ್ನು ಪರಿಶೀಲಿಸಿ ಶಾಸಕರಿಂದ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಿ ಕೊಡವ ಭರವಸೆ ನೀಡಿದ್ದರು. ಆದರೆ ಇದುವರೆಗೂ ತನಗೆ ಹಾಗೂ ತನ್ನ ಕುಟುಂಬಕ್ಕೆ ನ್ಯಾಯ ಸಿಗದಂತಾಗಿದ್ದು, ಇಂದಿಗೂ ಶಾಸಕರ ಬೆಂಬಲಿಗರಿಂದ ದೌರ್ಜನ್ಯ ಮುಂದುವರಿದಿದೆ ಎಂದು ಆರೋಪಿಸಿದ ಲೋಕೇಶ್ ತನ್ನ ಕುಟುಂಬಕ್ಕೆ ಜಿಲ್ಲಾಡಳಿತ ನ್ಯಾಯ ಒದಗಿಸದಿದ್ದಲ್ಲಿ ಫೆ.18ರಿಂದ ತಾನು ಕುಟುಂಬಸ್ಥರೊಂದಿಗೆ ಬಾಳೂರು ಪೊಲೀಸ್ ಠಾಣೆ ಎದುರು ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳುವುದಾಗಿ ಇದೇ ಅವರು ಎಚ್ಚರಿಸಿದರು.

ಸಿಪಿಐ ಪಕ್ಷದ ಮುಖಂಡ ರವಿ ಮಾತನಾಡಿ, ಕಲ್ಮನೆ ಗ್ರಾಮದ ಸ.ನಂ.49ರಲ್ಲಿ ಶಾಸಕರಿಗಾಗಲೀ, ಅವರ ಸಂಬಂಧಿಕರಿಗಾಗಲೀ ಯಾವುದೇ ಜಮೀನು ಮಂಜೂರಾಗಿಲ್ಲ. ಈ ಬಗ್ಗೆ ಮಾಹಿತಿ ಹಕ್ಕಿನಡಿಯಲ್ಲಿ ಪಡೆದ ದಾಖಲೆ ಸಾಕ್ಷಿಯಾಗಿದೆ. ಯಾವುದೇ ದಾಖಲೆಗಳಿಲ್ಲದಿದ್ದರೂ ಶಾಸಕ ಕುಮಾರಸ್ವಾಮಿ ಅವರು ಅಧಿಕಾರದ ಮದದಿಂದ ತಮ್ಮದೇ ಸಮುದಾಯದ ಬಡ ಕುಟುಂಬದ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಈ ದೌರ್ಜನ್ಯದ ವಿರುದ್ಧ ಶೀಘ್ರ ಜನತೆ ತಿರುಗಿ ಬೀಳುವ ಮುನ್ನ ಶಾಸಕ ಕುಮಾರಸ್ವಾಮಿ ಎಚ್ಚೆತ್ತುಕೊಳ್ಳಬೇಕೆಂದರು.

ಸುದ್ದಿಗೋಷ್ಠಿಯಲ್ಲಿ ಸಿಪಿಐ ಪಕ್ಷದ ಮೂಡಿಗೆರೆ ತಾ.ಕಾರ್ಯದರ್ಶಿ ಗೋಪಾಲ್‍ಶೆಟ್ಟಿ, ಜಿಲ್ಲಾ ಮುಖಂಡ ರಘು, ಕೆಳಗೂರು ಘಟಕದ ರಮೇಶ್, ಲೋಕೇಶ್ ಪತ್ನಿ ಸರೋಜ ಹಾಗೂ ಮಕ್ಕಳು ಉಪಸ್ಥಿತರಿದ್ದರು.

ಶಾಸಕ ಕುಮಾರಸ್ವಾಮಿ ಅವರನ್ನು ಕ್ಷೇತ್ರದ ಶಾಸಕರನ್ನಾಗಿ ಚುನಾಯಿಸಿರುವುದು ನೊಂದ ಜನರಿಗೆ ನ್ಯಾಯ ಒದಗಿಸಲಿ ಎಂದು. ಆದರೆ ಅವರು ಶಾಸಕರಾದಾಗಿನಿಂದ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡುತ್ತಿದ್ದಾರೆ. ಕಲ್ಮನೆ ಗ್ರಾಮದಲ್ಲಿರುವ ಜಮೀನು ಲೋಕೇಶ್ ಕುಟುಂಬಕ್ಕೆ ಸೇರಿದೆ ಎಂಬುದನ್ನು ಸರಕಾರ ನೀಡಿರುವ ದಾಖಲೆಗಳೇ ಹೇಳುತ್ತಿವೆ. ಆದರೆ ಶಾಸಕ ಕುಮಾರಸ್ವಾಮಿ ತಮ್ಮ ಸವರ್ಣೀಯ ಹಿಂಬಾಲಕರ ಒತ್ತಡ, ಪ್ರಭಾವಕ್ಕೊಳಗಾಗಿ ಬಡವರ ಜಮೀನು ಕಬಳಿಸಲು ಹುನ್ನಾರ ನಡೆಸಿದ್ದಾರೆ. ನೊಂದ ಕುಟುಂಬದವರು ಪೊಲೀಸ್ ಠಾಣೆ ಎದುರು ನಡೆಸುವ ಹೋರಾಟಕ್ಕೆ ಸಿಪಿಐ ಪಕ್ಷ ಬೆಂಬಲ ನೀಡಲಿದೆ. ಪಕ್ಷದ ಪ್ರತೀ ಶಾಖೆಗಳು ಒಂದೊಂದು ದಿನ ಕುಟುಂಬದ ಹೋರಾಟದಲ್ಲಿ ಭಾಗವಹಿಸಲಿದೆ. ಶಾಸಕನ ಈ ದೌರ್ಜನ್ಯವನ್ನು ಇಡೀ ಜಿಲ್ಲೆಗೆ ಸಾರುವ ನಿಟ್ಟಿನಲ್ಲಿ ಹಾಗೂ ದಲಿತ ಕುಟುಂಬದ ಹೋರಾಟ ಬೆಂಬಲಿಸಿ ಜಿಲ್ಲಾದ್ಯಂತ ಜನಜಾಗೃತಿ ಸಭೆಗಳನ್ನು ಆಯೋಜಿಸಲಾಗುವುದು.

- ಗೋಪಾಲ್ ಶೆಟ್ಟಿ, ತಾ.ಕಾರ್ಯದರ್ಶಿ, ಸಿಪಿಐ

ತಮಗೆ ಸೇರಿದ ಜಾಗದಲ್ಲಿ ಮನೆ ಕಟ್ಟಿಕೊಳ್ಳಲು ಇಟ್ಟಿಗೆ, ಕಲ್ಲು, ಮರಳು ಮತ್ತಿತರ ಸಾಮಗ್ರಿಗಳನ್ನು ತಂದಿದ್ದೇವೆ. ಆದರೆ ಶಾಸಕರ ಬೆಂಬಲಿಗ ಶಿವರಾಜ್ ಗೌಡ ಇದುವರೆಗೂ ಮನೆ ನಿರ್ಮಿಸಿಕೊಳ್ಳಲು ಬಿಟ್ಟಿಲ್ಲ. ಪ್ರಶ್ನಿಸಿದರೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಜಮೀನು ನಮ್ಮದೇ ಎಂಬುದಕ್ಕೆ ನಮ್ಮ ಬಳಿ ದಾಖಲೆಗಳಿವೆ. ಈ ದಾಖಲೆಗಳನ್ನು ಆಧಾರದ ಮೇಲೆಯೇ ಕೃಷಿ ಬ್ಯಾಂಕ್‍ನವರು 2 ಲಕ್ಷ ಸಾಲ ನೀಡಿದ್ದಾರೆ. ಈ ಜಮೀನು ಶಾಸಕ ಕುಮಾರಸ್ವಾಮಿ ಅವರಿಗೆ ಸೇರಿರುವುದಕ್ಕೆ ದಾಖಲೆಗಳನ್ನು ನೀಡಲಿ. ಶಾಸಕನ ಬೆಂಬಲಿಗರು ಕಾಫಿ ಬೆಳೆಯನ್ನು ಕದ್ದೊಯ್ದಿರುವುದರಿಂದ ಬ್ಯಾಂಕ್ ಸಾಲ ಕಟ್ಟಲು ಸಾಧ್ಯವಾಗುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಬಾಳೂರು ಪೊಲೀಸರು ಶಾಸಕರ ಒತ್ತಡ, ಹಣಕ್ಕೆ ಬಲಿಯಾಗಿದ್ದಾರೆ. ಅವರಿಂದ ನ್ಯಾಯ ಸಿಗುವುದಿಲ್ಲ. ಜಿಲ್ಲಾಧಿಕಾರಿ, ಎಸ್ಪಿ ಸ್ಥಳ ಪರಿಶೀಲಿಸಿ ನ್ಯಾಯ ಒದಗಿಸಬೇಕು.

- ಸರೋಜ, ಲೋಕೇಶ್ ಪತ್ನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News