×
Ad

ಮಾ.2, 3 ರಂದು ರಾಜ್ಯಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನ

Update: 2019-02-12 20:33 IST
ಡಾ.ಸುಧಾಮೂರ್ತಿ

ಬೆಂಗಳೂರು, ಫೆ.12: ‘ರಾಜ್ಯಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನ’ವನ್ನು ಮಾ.2 ಮತ್ತು 3 ರಂದು ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಲಾಗಿದೆ.

ನಗರದ ಕಸಾಪದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ ಅಧ್ಯಕ್ಷ ಡಾ.ಮನುಬಳಿಗಾರ್, ಮಹಿಳಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಹಾಗೂ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯಮಟ್ಟದ ಎರಡನೇ ಸಮ್ಮೇಳನ ಇದಾಗಿದ್ದು, ಎರಡೂ ದಿನವೂ ಸುಮಾರು 2 ಸಾವಿರಕ್ಕೂ ಹೆಚ್ಚು ಮಂದಿ ಮಹಿಳಾ ಸಾಹಿತಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾಹಿತಿಗಳು, ಲೇಖಕರು, ಬರಹಗಾರರು, ಕವಿಯತ್ರಿಯರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಬರುವ ಎಲ್ಲರಿಗೂ ಕಸಾಪದಿಂದ ಊಟ, ವಸತಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಸಮ್ಮೇಳನಕ್ಕೆ ಸುಮಾರು 20 ರಿಂದ 22 ಲಕ್ಷ ಹಣ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸಮ್ಮೇಳನದ ವಿವರಗಳು

ಮಾ.2 ರಂದು ಬೆಳಗ್ಗೆ 10.30ಕ್ಕೆ ಸಮ್ಮೇಳನ ಉದ್ಘಾಟನೆಯಾಗಲಿದೆ. ಸಂಸದೆ ಶೋಭಾ ಕರಂದ್ಲಾಜೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಜಾನಕಿ, ಚಿಕ್ಕಮಗಳೂರು ಜಿ.ಪಂ. ಅಧ್ಯಕ್ಷೆ ಸುಜಾತಾ ಕೃಷ್ಣ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್, ಖ್ಯಾತ ಬರಹಗಾರ್ತಿ ರಾಜೇಶ್ವರಿ ತೇಜಸ್ವಿ ಮತ್ತಿತರರು ಅತಿಥಿಗಳಾಗಿ ಭಾಗವಹಿಸುವರು. ಮಧ್ಯಾಹ್ನ 2 ಗಂಟೆಗೆ ಡಾ. ವೈ.ಸಿ. ಭಾನುಮತಿಯವರ ಅಧ್ಯಕ್ಷತೆಯಲ್ಲಿ ‘ಕನ್ನಡ ಸಾಹಿತ್ಯ: ಮಹಿಳಾ ನೋಟ’ ಕುರಿತು ಮೊದಲ ಗೋಷ್ಠಿ ನಡೆಯಲಿದೆ. ಈ ಕುರಿತಂತೆ ಡಾ.ಎಚ್.ಎಲ್. ಪುಷ್ಪ ಮತ್ತಿತರರು ಪ್ರಬಂಧಗಳನ್ನು ಮಂಡಿಸುವರು. ಸಂಜೆ 4 ಗಂಟೆಗೆ ರಾಧಾ ಸುಂದರೇಶ್ ಅವರ ಅಧ್ಯಕ್ಷತೆಯಲ್ಲಿ ‘ಮಹಿಳೆ ಮತ್ತು ಚಳವಳಿ’ ಕುರಿತಂತೆ ಎರಡನೇ ಗೋಷ್ಠಿ ನಡೆಯಲಿದೆ. ಡಾ.ಎಲ್.ಜಿ. ಮೀರಾ ಅವರು ‘ಅಸ್ಮಿತೆಗಾಗಿ ಮಹಿಳಾ ಹೋರಾಟ’ ಸೇರಿದಂತೆ ಹಲವು ಲೇಖಕರು ಪ್ರಬಂಧಗಳನ್ನು ಮಂಡಿಸುವರು.

ಮಾ.3ರಂದು ಬೆಳಗ್ಗೆ 10 ಗಂಟೆಗೆ ಡಾ. ಧರಣಿದೇವಿ ಮಾಲಗತ್ತಿಯವರ ಅಧ್ಯಕ್ಷತೆಯಲ್ಲಿ ‘ನಾನಾ ಕ್ಷೇತ್ರಗಳಿಗೆ ಮಹಿಳೆಯರ ಕೊಡುಗೆ’ ಕುರಿತಂತೆ ಮೂರನೇ ಗೋಷ್ಠಿ ನಡೆಯಲಿದೆ. ಡಾ. ಹೇಮಾ ಪಟ್ಟಣಶೆಟ್ಟಿ, ಎಚ್.ಎನ್. ಆರತಿ ಮತ್ತಿತರರು ಪ್ರಬಂಧಗಳನ್ನು ಮಂಡಿಸುವರು. ಮಧ್ಯಾಹ್ನ 12 ಗಂಟೆಗೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ನಡೆಯಲಿದೆ. ಡಾ. ಸುಶಿ ಕಾಡನಕುಪ್ಪೆ, ಸಹನಾ ಕಾಂತಬೈಲು, ಡಾ. ರೇಖಾ ವಸಂತ ಸೇರಿದಂತೆ ಹಲವರು ಸಂವಾದದಲ್ಲಿ ಭಾಗವಹಿಸುವರು. ಮಧ್ಯಾಹ್ನ 2.30ಕ್ಕೆ ಸವಿತಾ ನಾಗಭೂಷಣ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಏರ್ಪಡಿಸಲಾಗಿದೆ. ಡಾ. ಟಿ.ಸಿ. ಪೂರ್ಣಿಮಾ, ಡಾ. ವಿಜಯಶ್ರೀ ಸಬರದ, ಡಾ. ಕೆ. ಶರೀಫಾ ಮತ್ತಿತರರು ಕವಿಗೋಷ್ಠಿ ನಡೆಸಿಕೊಡುವರು. ಸಂಜೆ 4.30ಕ್ಕೆ ಸಮಾರೋಪ ನಡೆಯಲಿದೆ. ಮಾಜಿ ಸಚಿವೆ ಮೋಟಮ್ಮ, ಮಾಜಿ ಕೇಂದ್ರ ಸಚಿವೆ ಡಿ.ಕೆ. ತಾರಾದೇವಿ ಸಿದ್ಧಾರ್ಥ ಸೇರಿದಂತೆ ಹಲವರು ಅತಿಥಿಗಳಾಗಿ ಭಾಗವಹಿಸುವರು. ಇದೇ ವೇಳೆ ಸಮ್ಮೇಳನಾಧ್ಯಕ್ಷೆ ಡಾ. ಸುಧಾಮೂರ್ತಿಯವರನ್ನು ಸನ್ಮಾನಿಸಲಾಗುವುದು ಎಂದು ಅವರು ವಿವರಿಸಿದರು.

ಸರಕಾರಕ್ಕೆ ಪತ್ರ- ಉತ್ತರವಿಲ್ಲ

ಸರಕಾರಿ ಹಾಗೂ ಖಾಸಗಿ ಸಮಾರಂಭಗಳಲ್ಲಿ ನಾಡಗೀತೆ ಹಾಡಲಾಗುತ್ತದೆ. ಈ ಸಂದರ್ಭದಲ್ಲಿ ವಯಸ್ಸಾದವರು, ಅನಾರೋಗ್ಯಕ್ಕೆ ಒಳಗಾದವರು ಹೆಚ್ಚು ಸಮಯ ನಿಲ್ಲಲು ಸಾಧ್ಯವಾಗಲ್ಲ. ಹೀಗಾಗಿ, ಗೀತೆಯನ್ನು ಎಲ್ಲಿಯೂ ಕಡಿತ ಮಾಡದೆ, ಪುನಾರಾವರ್ತನೆಯಾಗದಂತೆ 2 ರಿಂದ 2.50 ನಿಮಿಷದಲ್ಲಿ ಹಾಡಿ ಮುಗಿಸಲು ಸಾಧ್ಯವಿದೆ. ಈ ಸಂಬಂಧ ಸರಕಾರಕ್ಕೆ ಪತ್ರ ಬರೆದಿದ್ದರೂ, ಇದುವರೆಗೂ ಉತ್ತರ ಬಂದಿಲ್ಲ ಎಂದು ಮನುಬಳಿಗಾರ್ ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News