ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿನ ನ್ಯೂನತೆ ಸರಿಪಡಿಸಬೇಕು: ಎಚ್.ಡಿ.ಕುಮಾರಸ್ವಾಮಿ

Update: 2019-02-12 16:42 GMT

ಬೆಂಗಳೂರು, ಫೆ.12: ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಳ್ಳುವ ಮೂಲಕ ಈ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ತಡೆಯಲು ಶಾಶ್ವತ ಪರಿಹಾರ ಕಂಡುಕೊಂಡು ದೇಶಕ್ಕೆ ಮಾದರಿಯಾಗಬೇಕಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಮಂಗಳವಾರ ವಿಧಾನಸಭೆಯಲ್ಲಿ ಆಡಿಯೊ ಬಿಡುಗಡೆ ಮೇಲಿನ ಚರ್ಚೆ ವೇಳೆ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಹಾಗೂ ಇತರ ಸದಸ್ಯರ ಮಾಡಿದ ಆಪಾದನೆಗಳು ಹಾಗೂ ಎಸ್‌ಐಟಿ ತನಿಖೆಗೆ ವಿರೋಧಿಸಿದ ಕುರಿತು ಅವರು ಪ್ರತಿಕ್ರಿಯಿಸಿದರು.

ಎರಡು ನಿಮಿಷಗಳ ಆಡಿಯೋವನ್ನೆ ಅರಗಿಸಿಕೊಳ್ಳಲು ನಿಮಗೆ ಆಗಿಲ್ಲ. ಇನ್ನು ಪೂರ್ಣ ಪ್ರಮಾಣದ ಆಡಿಯೊ ಬಿಡುಗಡೆ ಮಾಡಿದ್ದರೆ ಏನಾಗುತ್ತಿತ್ತೊ. ಅದನ್ನೂ ಬಿಡುಗಡೆ ಮಾಡೋಣ. ಈ ಘಟನೆಗಳಲ್ಲಿ ನನ್ನಿಂದಲೇ ತಪ್ಪಾಗಿದ್ದರೆ ನನ್ನನ್ನೂ ಸೇರಿಸಿಕೊಂಡು ತನಿಖೆಯಾಗಲಿ. ನಾನು ಅಪರಾಧ ಮಾಡಿದ್ದರೆ ತಲೆ ಬಾಗುತ್ತೇನೆ. ಶಿಕ್ಷೆ ಅನುಭವಿಸುತ್ತೇನೆ ಎಂದು ಅವರು ಹೇಳಿದರು.

ಮುಖ್ಯಮಂತ್ರಿ ಸ್ಥಾನದ ಪ್ರಭಾವ ಬಳಸಿ ಯಾರ ವಿರುದ್ಧವೂ ದ್ವೇಷದ ರಾಜಕಾರಣ ಮಾಡಲು ಸಿದ್ಧನಿಲ್ಲ. ವ್ಯವಸ್ಥೆಯನ್ನು ಸರಿಪಡಿಸುವುದು ಮುಖ್ಯವಾಗಿದೆ. ತಾವು(ಅಧ್ಯಕ್ಷರು) ನಿನ್ನೆ(ಸೋಮವಾರ) ಸೂಚನೆ ನೀಡಿರುವಂತೆ ತನಿಖೆ ನಡೆಸಲು ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿ ಎಂದು ಕುಮಾರಸ್ವಾಮಿ ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ನಾಯಕ. ಕಳೆದ ಸರಕಾರದ ಅವಧಿಯಲ್ಲಿ ಅವರು ಮಾಡಿರುವ ಕೆಲಸಗಳಿಂದಲೇ ಕೆಲವು ಶಾಸಕರು ಆಯ್ಕೆಯಾಗಿ ಬಂದಿದ್ದಾರೆ. ಅವರ ಮೇಲಿನ ಅಭಿಮಾನದಿಂದ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಬಯಸುವುದರಲ್ಲಿ ಯಾವ ತಪ್ಪು ಇಲ್ಲ ಎಂದು ಅವರು ಹೇಳಿದರು.

ನಮ್ಮ ಸರಕಾರ ನಡೆಯುತ್ತಿರುವುದೇ ಸಿದ್ದರಾಮಯ್ಯ ಅವರ ಮಾರ್ಗದರ್ಶನದಿಂದ, ಅವರು ನೀಡುವ ಸಲಹೆಗಳಂತೆ ನಾವು ನಡೆಯುತ್ತಿದ್ದೇವೆ. ಇದನ್ನು ನಾನು ಸಾರ್ವಜನಿಕವಾಗಿಯೇ ಹೇಳಿದ್ದೇನೆ. ನಾನೇನು ಮುಖ್ಯಮಂತ್ರಿ ಕುರ್ಚಿಗೆ ಗೂಟ ಬಡಿದುಕೊಂಡು ಕೂತಿಲ್ಲ. ಯಾರೂ ಶಾಶ್ವತರಾಗಿ ಮುಖ್ಯಮಂತ್ರಿ ಸ್ಥಾನದಲ್ಲಿ ಇರಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು. ನಾನು ವಿಷ ಕಂಠನಂತೆ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದು ನಿಜ. ಸರಕಾರ ಇಂದು, ನಾಳೆ ಬೀಳುತ್ತೆ ಎಂದು ವಿಪಕ್ಷ ಸದಸ್ಯರು ಗಡುವು ನೀಡುತ್ತಿದ್ದರು. ಸಂಕ್ರಾಂತಿ ಹೋಯಿತು. ಬಜೆಟ್ ಮಂಡನೆಯೇ ಆಗಲ್ಲ ಎಂದರು. ಮಂಡನೆಯೂ ಆಯಿತು. ವಿಪಕ್ಷ ನಾಯಕರು, ಸದಸ್ಯರು ಮಾಧ್ಯಮಗಳನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದರು ಎಂದು ಅವರು ಹೇಳಿದರು.

ವಿಧಾನಸಭೆ ಚುನಾವಣೆ ವೇಳೆ ನಾವು ಹಾಗೂ ಕಾಂಗ್ರೆಸ್‌ನವರು ನಡೆಸಿದ ಪರಸ್ಪರ ಸಂಘರ್ಷದ ಹೋರಾಟದಿಂದಲೇ ನಮಗೆ ಶಕ್ತಿ ಬಂದಿದೆ. ಸಿದ್ದರಾಮಯ್ಯ ನಾಯಕತ್ವದಲ್ಲಿ ಸಭೆ ಮಾಡಿ, ಚರ್ಚೆ ನಡೆಸಿದ್ದಾರೆ. ನನ್ನನ್ನು ಸಿಎಂ ಮಾಡಿದ್ದಾರೆ. ಅತಂತ್ರ ಪರಿಸ್ಥಿತಿ ಬಂದಾಗ ನನ್ನ ಮೇಲೆ ವಿಶ್ವಾಸವಿಟ್ಟು ಕಾಂಗ್ರೆಸ್ ಶಾಸಕರು ಒಮ್ಮತದ ನಿರ್ಣಯಕ್ಕೆ ಬಂದರು. ನಾಯಕರ ಉದ್ದೇಶ ಅರ್ಥಮಾಡಿಕೊಂಡಿದ್ದೇನೆ ಎಂದು ಅವರು ಹೇಳಿದರು.

ನಾವು ಬಡಿದಾಡಿಕೊಳ್ಳುವವರೆಗೆ ನೀವು ಕಾಯಬೇಕಿತ್ತು. ಯಾಕೆ ಆತುರಪಟ್ಟಿರಿ ಎಂದು ವಿಪಕ್ಷ ಸದಸ್ಯರಿಗೆ ಕುಟುಕಿದ ಮುಖ್ಯಮಂತ್ರಿ, ಮುಂದಿನ ಚುನಾವಣೆಗೆ ದೇಶಕ್ಕೆ ಕರ್ನಾಟಕದಿಂದ ಒಂದು ಸಂದೇಶ ಹೋಗಬೇಕು ಎಂಬ ಉದ್ದೇಶದಿಂದ ಏನೇ ಸಮಸ್ಯೆ ಬಂದರೂ ಕಲ್ಲು ಬಂಡೆಯಂತೆ ಹೊರಟಿದ್ದೇವೆ ಎಂದು ಎಂದರು.

ಅತ್ಯಾಚಾರಕ್ಕೆ ಒಳಗಾದ ಭಾವನೆ ಕಾಡುತ್ತಿದೆ: ಸ್ಪೀಕರ್ ರಮೇಶ್‌ ಕುಮಾರ್

ನನ್ನ ಪರಿಸ್ಥಿತಿ ಹೇಗಿದೆ ಎಂದರೆ ರೇಪ್(ಅತ್ಯಾಚಾರ) ಆಗಿದ್ದು ಒಂದೇ ಸಲ. ನ್ಯಾಯ ಕೇಳಲು ನ್ಯಾಯಾಲಯಕ್ಕೆ ಹೋದರೆ ವಕೀಲ ಅತ್ಯಾಚಾರದ ಬಗ್ಗೆ ವಿವಿಧ ಪ್ರಶ್ನೆಗಳನ್ನು ಕೇಳುತ್ತಾರೆ. ಹೊರಗೆ ಇರುವವರು ನ್ಯಾಯ ಸಿಕ್ಕಿತಾ ಎಂದು ಕೇಳಿದರೆ, ನನ್ನ ಮೇಲೆ ಒಂದು ಬಾರಿ ಮಾತ್ರ ಅತ್ಯಾಚಾರವಾಯಿತು. ಆದರೆ, ಇಲ್ಲಿ ಪದೇ ಪದೇ ಅದನ್ನು ಪ್ರಸ್ತಾಪಿಸಿ 100 ಸಲ ಅತ್ಯಾಚಾರವಾದಂತೆ ಮಾಡಿದ್ದಾರೆ. ನನ್ನ ಮೇಲೆ ಗೌರವವಿದೆ ಎಂದು ಮಾತು ಆರಂಭಿಸಿ, ಈಗ ನನ್ನನ್ನು ತಂದು ಬೀದಿಯಲ್ಲಿ ಮಲಗಿಸಿದ್ದಾರೆ ಎಂದು ಸದನದಲ್ಲಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News