×
Ad

ಕ್ರೈಸ್ತರು-ಮುಸ್ಲಿಮರನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆಗೊಳಿಸಲು ಆಗ್ರಹ

Update: 2019-02-12 22:38 IST

ಬೆಂಗಳೂರು, ಫೆ.12: ಕೇಂದ್ರ ಸರಕಾರ ಯಾವುದೇ ವೈಜ್ಞಾನಿಕ ಅಧ್ಯಯನ ಮಾಡದೆ ಮೇಲ್ಜಾತಿಗಳಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆ ಜಾರಿಗೆ ತಂದಿರುವುದು ಸರಿಯಲ್ಲವೆಂದು ಭಾರತ ಕ್ಯಾಥಲಿಕ್ ಬಿಷಪ್ ಸಮ್ಮೇಳನದ ರಾಷ್ಟ್ರೀಯ ಕಾರ್ಯದರ್ಶಿ ಫಾ. ದೇವಸಗಾಯರಾಜ್ ತಿಳಿಸಿದ್ದಾರೆ. ಪರಿಶಿಷ್ಟ ಜಾತಿ ಮೂಲದ ಕ್ರೈಸ್ತ ಮತ್ತು ಮುಸ್ಲಿಮರ ಕುರಿತು ಸರಕಾರ ಅದೇ ರೀತಿಯ ಕಾಳಜಿಯನ್ನು ತೋರದಿರುವುದು ನಮ್ಮ ಆತಂಕಕ್ಕೆ ಕಾರಣವಾಗಿದ್ದು, ಧರ್ಮದ ಹೆಸರಿನಲ್ಲಿ ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಪಕ್ಷಪಾತ ಧೋರಣೆ ತಾಳಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ಆರೋಪಿಸಿದ್ದಾರೆ. 

ಪರಿಶಿಷ್ಟ ಜಾತಿ ಮೂಲದ ಕ್ರೈಸ್ತ ಮತ್ತು ಮುಸ್ಲಿಮರು 1950 ರಿಂದಲೂ ತಮ್ಮನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸುತ್ತಿದ್ದಾರೆ. ಅವರು ಅಸ್ಪೃಶ್ಯ ಸಮುದಾಯಗಳಲ್ಲಿ ಜನಿಸಿದವರಾಗಿದ್ದು ಈಗಲೂ ಅದರ ನೋವನ್ನು ಅನುಭವಿಸುತ್ತಿದ್ದಾರೆ. ಅವರು ತಮ್ಮ ಸಹೋದರರಾದ ಹಿಂದೂ ದಲಿತರಂತೆ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಬಹಳ ಹಿಂದುಳಿದಿದ್ದಾರೆ. ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗ 2007 ರಲ್ಲಿ ಹೇಳಿರುವಂತೆ, ಪರಿಶಿಷ್ಟ ಜಾತಿ ಮೂಲದ ಕ್ರೈಸ್ತ ಮತ್ತು ಮುಸ್ಲಿಮರನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ ಮಾಡದಿರುವುದು ಧರ್ಮದ ಆಧಾರದ ಮೇಲೆ ಪಕ್ಷಪಾತ ಮಾಡಿದಂತೆ ಆಗುತ್ತದೆ ಮತ್ತು ಅದು ಸಂವಿಧಾನಕ್ಕೆ ವಿರೋಧವಾಗಿರುತ್ತದೆ ಎಂದು ಸ್ಪಷ್ಟಪಡಿಸಿದೆ. ಭಾರತ ಸರಕಾರದ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗಕ್ಕಾಗಿ ಪ್ರೊ.ಸತೀಶ್ ದೇಶಪಾಂಡೆ ಸಿದ್ಧಪಡಿಸಿದ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯಗಳಲ್ಲಿ ದಲಿತರು, ಪ್ರಸಕ್ತ ಸಾಮಾಜಿಕ ಮತ್ತು ವೈಜ್ಞಾನಿಕ ಜ್ಞಾನದ ಸ್ಥಿತಿಗತಿಯ ವರದಿ ಸ್ಪಷ್ಟವಾಗಿ ಹೇಳಿರುವಂತೆ, ದಲಿತ ಮುಸ್ಲಿಮರು ಮತ್ತು ದಲಿತ ಕ್ರೈಸ್ತರಿಗೆ ಪರಿಶಿಷ್ಟ ಜಾತಿಯ ಸ್ಥಾನಮಾನ ನೀಡುವುದನ್ನು ನಿರಾಕರಿಸುವುದಕ್ಕೆ ಯಾವುದೇ ಸೂಕ್ತ ಸಾಕ್ಷ್ಯಾಧಾರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿವಿಧ ಆಯೋಗಗಳು ಮತ್ತು ವೈಜ್ಞಾನಿಕ ಅಧ್ಯಯನಗಳ ಶಿಫಾರಸುಗಳಿದ್ದರೂ ಪರಿಶಿಷ್ಟ ಜಾತಿ ಮೂಲದ ಕ್ರೈಸ್ತರು ಮತ್ತು ಮುಸ್ಲಿಮರಿಗೆ ನ್ಯಾಯವನ್ನು ಸರಕಾರ ನಿರಾಕರಿಸುವುದು ನಿಜವಾದ ಸಾಮಾಜಿಕ ಅನ್ಯಾಯವಾಗಿದೆ. ಹಾಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪರಿಶಿಷ್ಟ ಜಾತಿ ಮೂಲದ ಕ್ರೈಸ್ತರು ಮತ್ತು ಮುಸ್ಲಿಮರನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆಗೊಳಿಸುವ ಮಸೂದೆಯನ್ನು ಅನುಮೋದಿಸಬೇಕು ಮತ್ತು ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿಯನ್ನು ಹೆಚ್ಚಿಸಬೇಕು ಎಂದು ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News