×
Ad

ಮಹಿಳೆಯರು ಪುರುಷರಿಗೆ ಸಮಾನರಲ್ಲ ಎಂದ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ

Update: 2019-02-12 22:54 IST

ಮೈಸೂರು,ಫೆ.12: ಮಹಿಳೆಯರಿಗೆ ಸಮಾನತೆ ಬೇಡ. ಮಹಿಳೆಯರು ಪುರುಷರಿಗೆ ಸಮಾನರಲ್ಲ ಎಂದು  ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ ಹೇಳಿದ್ದಾರೆ.

ನಗರದ ಚಾಮರಾಜಪುರಂನಲ್ಲಿ ನೂತನವಾಗಿ ಪ್ರಾರಂಭ ಮಾಡಿರುವ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಿಳೆಯರು ಪುರುಷರಿಗೆ ಸಮಾನರಲ್ಲ. ಪುರುಷರಿಗೆ ಇರುವ ಎಲ್ಲಾ ಸ್ವತಂತ್ರವೂ ಮಹಿಳೆಯರಿಗೆ ಬೇಡ. ಮಹಿಳೆಯರ ವೈಯಕ್ತಿಕ ಸ್ವತಂತ್ರ, ಧಾರ್ಮಿಕ ಸ್ವಾತಂತ್ರ್ಯ ಬೇರೆ ಬೇರೆ. ಪುರುಷರು ರಾತ್ರಿ ಪಬ್ ನಲ್ಲಿ, ರೆಸ್ಟೋರೆಂಟ್ ನಲ್ಲಿ ಕುಡಿಯುತ್ತಾರೆ. ಮಹಿಳೆಯರಿಗೂ ಅಂತಹ ಸ್ವಾತಂತ್ರ್ಯ ಬೇಕು ಅಂಥ ನಾನು ಬಯಸುವುದಿಲ್ಲ. ಮಹಿಳೆಯರಿಗೆ ಸಾಂಪ್ರದಾಯಿಕ ಇತಮಿತಿಗಳಿರುತ್ತವೆ. ಪ್ರತಿ ಧರ್ಮದಲ್ಲೂ ಮಹಿಳೆಯರಿಗೆ ಧಾರ್ಮಿಕ ಚೌಕಟ್ಟಿರುತ್ತವೆ. ಆ ಚೌಕಟ್ಟನ್ನು ಮೀರಲು ನಾನು ಬಯಸುವುದಿಲ್ಲ ಎಂದು ತಿಳಿಸಿದರು.

ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೂ ನಮ್ಮ ವಿರೋಧ ಇದೆ. ಮುಸ್ಲಿಂ ಮಹಿಳೆಯರ ಕೌಟುಂಬಿಕ ಸಮಸ್ಯೆಗಳನ್ನು ನಿವಾರಿಸುವ ಸಲಯವಾಗಿ ತ್ರಿವಳಿ ತಲಾಕ್ ಗೆ ನಿಷೇಧ ಹೇರಲಾಗಿದೆ ಎಂದು  ಭಾರತಿಶೆಟ್ಟಿ ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಆಡಿಯೋ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಭಾರತಿಶೆಟ್ಟಿ, ಯಡಿಯೂರಪ್ಪ ಅವರಿಗೆ ಇದೆಲ್ಲ ದೊಡ್ಡ ವಿಚಾರ ಅಲ್ಲವೇ ಅಲ್ಲ, ಕುಮಾರಸ್ವಾಮಿ ಅವರು ತೇಜೋವಧೆ ಮಾಡುವ ದೃಷ್ಟಿಯಿಂದ ಆಡಿಯೋ ಬಿಡುಗಡೆ ಮಾಡಿದ್ದಾರೆ. ರಾಜಕಾರಣದಲ್ಲಿ ಇದೆಲ್ಲ ಹೊಸತೇನಲ್ಲ, ಯಡಿಯೂರಪ್ಪ ಅವರು ಹುಟ್ಟು ಹೋರಾಟಗಾರ. ಇಂತಹ ಆರೋಪಗಳಿಂದ ಮುಕ್ತರಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News