ವಿಜಯಪುರ: ಅಂಗವಿಕಲರ ಮಾಶಾಸನ ಹೆಚ್ಚಿಸಲು ಒತ್ತಾಯಿಸಿ ಧರಣಿ

Update: 2019-02-12 17:33 GMT

ವಿಜಯಪುರ,ಫೆ.12: 2019-20ನೇ ಸಾಲಿನ ಬಜೆಟ್‍ನಲ್ಲಿ ಅಂಗವಿಕಲರಿಗೆ ಮಾಶಾಸನ ಹೆಚ್ಚಿಸುವ ಮತ್ತು ಇನ್ನಿತರ ಬೇಡಿಕೆಗಳನ್ನು ಮರು ಸೇರ್ಪಡೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ವಿಜಯಪುರ ಜಿಲ್ಲಾ ಸಮಿತಿ ಪದಾಧಿಕಾರಿಗಳು ರ‍್ಯಾಲಿ ನಡೆಸಿದರು. ನೂರಾರು ಅಂಗವಿಕಲರು ತಮ್ಮ ಬೇಡಿಕೆಗಳ ಈಡೇರಿಕೆಗೆ ಹಕ್ಕೊತ್ತಾಯ ಮಂಡಿಸಿದರು.

ಧರಣಿಯ ನೇತೃತ್ವ ವಹಿಸಿದ್ದ ಒಕ್ಕೂಟದ ಜಿಲ್ಲಾಧ್ಯಕ್ಷ ವಿನೋದ ಖೇಡ ಮಾತನಾಡಿ, 2019-20ನೇ ಸಾಲಿನ ಬಜೆಟ್‍ನಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಅಂಗವಿಕಲರಿಗೆ ಸಂಪೂರ್ಣವಾಗಿ ಕಡೆಗಣಿಸಿದ್ದು ಖಂಡನೀಯ. ಅಂಗವಿಕಲರ ಕುರಿತು ಬಜೆಟ್‍ನಲ್ಲಿ ಯಾವ ಬಜೆಟ್ ಮಂಡಿಸದೆ ಇರುವುದು ಪ್ರಜಾಪ್ರಭುತ್ವದ ವಿರೋಧಿ ನೀತಿಯನ್ನು ಎತ್ತಿ ತೋರಿಸಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಂಗವಿಕಲರ ಪ್ರಗತಿಗೆ ಯಾವುದೇ ಸರ್ಕಾರಗಳು ಇಚ್ಛಾಶಕ್ತಿ ಪ್ರದರ್ಶಿಸದೇ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವುದು ಸರಿಯಲ್ಲ. ಅಂಗವಿಕಲರಿಗೆ ಅನುಕಂಪ ಬೇಕಾಗಿಲ್ಲ. ಕೇವಲ ಆತ್ಮಸ್ಥೈರ್ಯ ಕಲ್ಪಿಸಿ ಕೆಲವೊಂದು ಸೌಲಭ್ಯ ಕಲ್ಪಿಸಿದರೆ ಸಾಕು. ಈ ನ್ಯಾಯಯುತವಾದ ಬೇಡಿಕೆಯನ್ನು ಯಾವೊಂದು ಸರ್ಕಾರಗಳೂ ಈಡೇರಿಸಲು ಮುಂದಾಗದೇ ಬಜೆಟ್‍ನಲ್ಲಿ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿರುವುದು ಖಂಡನೀಯ ಎಂದರು. 

ರಾಜ್ಯದ ತಾಲೂಕು ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು (ಎಂಆರ್‍ಡಬ್ಲ್ಯೂ) ಮತ್ತು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಗೌರವ ಧನ ಹೆಚ್ಚಿಸಬೇಕು. ರಾಜ್ಯದ ಎಲ್ಲಾ ಅಂಗವಿಕಲರಿಗೆ ಪ್ರತಿ ತಿಂಗಳು 5000 ಮಾಶಾಸನ ನೀಡಬೇಕು. ರಾಜ್ಯದ ವಿದ್ಯಾವಂತ ಎಲ್ಲ ಅಂಗವಿಕಲರಿಗೆ ಉದ್ಯೋಗ ಕಲ್ಪಿಸಿ ಬದುಕು ರೂಪಿಸಿಕೊಳ್ಳುವಂತೆ ಪ್ರೇರೆಪಿಸುವುದು, ಅಂಗವಿಕಲರ ವ್ಯಕ್ತಿಗಳ ಮನೆಗಳಿಗೆ ಗೃಹ ತೆರಿಗೆ ವಿನಾಯಿತಿ ನೀಡುವುದು ಸೇರಿದಂತೆ ಅಂಗವಿಕಲರ ಪ್ರಗತಿಗೆ ಪೂರಕವಾದ ವಿವಿಧ ಯೋಜನೆಗಳನ್ನು ರೂಪಿಸಿ ಅಂಗವಿಕಲರಿಗೆ ಅನುಕೂಲ ಕಲ್ಪಿಸಬೇಕು ಎಂದು ಅಂಗವಿಕಲರು ಒಕ್ಕೊರಲಿನಿಂದ ಒತ್ತಾಯಿಸಿದರು. 

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ವಾಲೀಕಾರ, ಮಲ್ಲಿಕಾರ್ಜುನ ಬಿರಾದಾರ, ಮಲ್ಲಿಕಾರ್ಜುನ ಉಮರಾಣಿ, ಸಾವಿತ್ರಿ ಮೋರೆ ಮಾತನಾಡಿದರು. ಎ.ಎ.ಹಕೀಂ, ಅಂಬಣ್ಣ ಗುನ್ನಾಪುರ, ಸರ್ಫರಾಝ್ ಮಕಾಂದಾರ, ನಿಂಗರಾಜ ಬಿಸನಾಳ, ವಿಠ್ಠಲ ಕರ್ಜಗಿ, ವಸಂತ ಕುಲಕರ್ಣಿ, ಬಸವನ ಬಾಗೇವಾಡಿ ವಿಠ್ಠಲ ಹಂಚನಾಳ, ಬಾಶ್ಯಾ ಮಕಾಂದಾರ, ಮುದ್ದೇಬಿಹಾಳ ಬಾಬು ಸಾತಿಹಾಳ, ನಿಮಿಷ ಆಚಾರ್ಯ, ಭೀಮನಗೌಡ ಪಾಟೀಲ,ಶಂಕ್ರೆಮ್ಮ ಕೋರಿ, ತುಳಸಾ ಕನಸೆ, ಕಸ್ತೂರಿ ಬೂದಿಹಾಳ, ಚೆನ್ನಯ್ಯ ಸಾರಂಗಮಠ, ಶಿವಪ್ಪ ಪಟ್ಟಣದ, ರಾಜು ಬುಯ್ಯಾರ, ಈರಪ್ಪ ನಾಶಿ, ಮಹೇಶ ಮುದೋಳ ಮೊದಲಾದವರು ರ‍್ಯಾಲಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News