ಒಕ್ಕೂಟ ವ್ಯವಸ್ಥೆಗೆ ಅಪಚಾರ

Update: 2019-02-13 04:29 GMT

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮನ್ನು ತಾವು ಏನೆಂದು ತಿಳಿದುಕೊಂಡಿದ್ದಾರೋ ಅರ್ಥವಾಗುತ್ತಿಲ್ಲ. ಆದರೆ ಜನತೆ ಇದನ್ನು ತಿಳಿದುಕೊಳ್ಳಲೇಬೇಕಾಗಿದೆ. ನರೇಂದ್ರ ಮೋದಿಯವರು ತಾನು ಭಾರತ ಒಕ್ಕೂಟದ ಪ್ರಧಾನಿ ಎಂಬುದನ್ನು ಮರೆತಿದ್ದಾರೋ ಅಥವಾ ಮರೆತಂತೆ ನಟಿಸುತ್ತಿದ್ದಾರೋ ಗೊತ್ತಾಗುತ್ತಿಲ್ಲ. ತಾನು ಭರತಖಂಡದ ಸಿಂಹಾಸಾನಾಧೀಶ್ವರ ಎಂದು ಅವರು ಭ್ರಮೆಗೊಳಗಾದಂತೆ ಕಾಣುತ್ತದೆ. ತಾನು ಚಕ್ರವರ್ತಿ, ರಾಜ್ಯಗಳ ಮುಖ್ಯಮಂತ್ರಿಗಳು ತನ್ನ ಮಾಂಡಲೀಕರು ಎಂದು ಅವರು ತಿಳಿದಂತೆ ಕಾಣುತ್ತದೆ. ಅಂತಲೇ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಅವರು ನಡೆಸಿಕೊಳ್ಳುವ ರೀತಿ ಪ್ರಜಾಪ್ರಭುತ್ವಕ್ಕೆ ಪೂರಕವಾಗಿಲ್ಲ.

ಭಾರತದಲ್ಲಿರುವುದು ಒಕ್ಕೂಟ ವ್ಯವಸ್ಥೆ, ರಾಜ್ಯಗಳ ಚುನಾಯಿತ ಸರಕಾರಗಳು ಹೇಗೆ ನಡೆದುಕೊಳ್ಳಬೇಕೆಂಬ ಬಗ್ಗೆ ಕೆಲ ನಿಯಮಾವಳಿಗಳು, ಸಂಪ್ರದಾಯಗಳು, ಶಿಷ್ಟಾಚಾರಗಳು ಇವೆ. ಇವುಗಳನ್ನೆಲ್ಲ ಪ್ರಧಾನಿ ಉಲ್ಲಂಘಿಸುತ್ತಿದ್ದಾರೆ. ಇದರಿಂದ ಒಕ್ಕೂಟ ವ್ಯವಸ್ಥೆ ಛಿದ್ರ ಛಿದ್ರವಾಗಿ ಹೋಗುತ್ತದೆಂಬ ಅರಿವು ಅವರಿಗೆ ಇದ್ದಂತಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಕರ್ನಾಟಕಕ್ಕೆ ಭೇಟಿ ನೀಡಿದ್ದರು.ಆಗ ಹುಬ್ಬಳ್ಳಿ, ಧಾರವಾಡಗಳಲ್ಲಿ ಐಐಟಿ ಸೇರಿದಂತೆ ಅನೇಕ ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರು. ಈ ಯಾವ ಕಾರ್ಯಕ್ರಮಗಳಿಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಆಮಂತ್ರಣವಿರಲಿಲ್ಲ. ಆದರೂ ಶಿಷ್ಟಾಚಾರವೆಂದು ಸಚಿವ ದೇಶಪಾಂಡೆ ಹೋಗಿದ್ದರು. ಧಾರವಾಡ ಐಐಟಿಗೆ ರಾಜ್ಯ ಸರಕಾರ 300 ಎಕರೆ ಭೂಮಿಯನ್ನು ನೀಡಿದೆ, ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಿದೆ, ಆದರೂ ರಾಜ್ಯದ ಮುಖ್ಯಮಂತ್ರಿಗೆ ಆಮಂತ್ರಣ ಇಲ್ಲವೆಂದರೆ ಏನರ್ಥ?

ಧಾರವಾಡದಲ್ಲಿ ನಡೆದಿರುವುದು ಬಿಜೆಪಿ ಕಾರ್ಯಕ್ರಮವಲ್ಲ, ಅದು ಸರಕಾರದ ಕಾರ್ಯಕ್ರಮ. ರಾಜ್ಯದ ಮುಖ್ಯಮಂತ್ರಿಯನ್ನು ಕಡ್ಡಾಯವಾಗಿ ಆಮಂತ್ರಿಸಬೇಕಾಗಿತ್ತು. ಈ ಶಿಷ್ಟಾಚಾರ ಪಾಲನೆಯಾಗಲಿಲ್ಲ. ಈ ಹಿಂದೆ ಕಲಬುರಗಿ-ಬೀದರ್ ರೈಲು ಮಾರ್ಗವನ್ನು ಲೋಕಾರ್ಪಣೆ ಮಾಡುವ ಕಾರ್ಯಕ್ರಮಕ್ಕೆ ಸ್ಥಳೀಯ ಸಂಸದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಮಂತ್ರಿಸದೆ ಅವಮಾನ ಮಾಡಲಾಗಿತ್ತು. ಖರ್ಗೆಯವರು ರೈಲ್ವೆ ಸಚಿವರಾಗಿದ್ದಾಗ ಮಂಜೂರಾದ ರೈಲು ಮಾರ್ಗದ ಲೋಕಾರ್ಪಣೆಗೆ ಅವರನ್ನೇ ಕಡೆಗಣಿಸಿದ್ದು ವ್ಯಾಪಕ ಖಂಡನೆಗೆ ಗುರಿಯಾಗಿತ್ತು. ಈಗ ಧಾರವಾಡದಲ್ಲಿ ಅದರ ಪುನರಾವರ್ತನೆಯಾಗಿದೆ,

ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳ ಬಗ್ಗೆ ಕೇಂದ್ರ ಸರಕಾರ ಅದರಲ್ಲೂ ಪ್ರಧಾನಿ ನಡೆದುಕೊಳ್ಳುತ್ತಿರುವ ರೀತಿ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿದೆ. ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ದಿಲ್ಲಿ ಹಾಗೂ ಕೇರಳ ರಾಜ್ಯಗಳ ಬಗ್ಗೆ ಪ್ರಧಾನಿ ನಡೆ ಸಂಘರ್ಷಕಾರಿಯಾಗಿದೆ. ಬಂಗಾಳದಲ್ಲಿ ಉನ್ನತ ಪೊಲೀಸ್ ಅಧಿಕಾರಿಯನ್ನು ಬಂಧಿಸಲು ಸಿಬಿಐ ತಂಡವನ್ನು ಕಳಿಸಿದ್ದು, ಆ ತಂಡವನ್ನು ಆ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಿಡಿದು ಒಳಗೆ ಹಾಕಿದ್ದು, ಒಕ್ಕೂಟ ವ್ಯವಸ್ಥೆಗೆ ಶೋಭೆ ತರುವ ಸಂಗತಿಯಲ್ಲ. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜೊತೆ ಪ್ರಧಾನಿ ವೈರ ಸಾಧಿಸುವಂತೆ ವರ್ತಿಸುತ್ತಿದ್ದಾರೆ. 2014ರ ಆಂಧ್ರಪ್ರದೇಶ ವಿಭಜನೆಯ ಸಂದರ್ಭದಲ್ಲಿ ವಿಶೇಷ ಸ್ಥಾನಮಾನ ಸೇರಿದಂತೆ ಯಾವ ಬೇಡಿಕೆಯನ್ನು ಈಡೇರಿಸಲೂ ಪ್ರಧಾನಿ ನಿರಾಕರಿಸುತ್ತಿದ್ದಾರೆ. ಆಂಧ್ರಪ್ರದೇಶಕ್ಕೆ ಹೋಗಿ ರಾಜ್ಯದ ಮುಖ್ಯಮಂತ್ರಿ ವಿರುದ್ಧ ಅಸಭ್ಯವಾಗಿ ಟೀಕಿಸುತ್ತಿದ್ದಾರೆ. ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ರಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡುತ್ತಿದ್ದಾರೆ. ಹಲ್ಲೆಕೋರರಿಗೆ ಕೇಂದ್ರ ಸರಕಾರ ರಕ್ಷಣೆ ನೀಡುತ್ತಿದೆ. ಕೇರಳದಲ್ಲಿ ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶ ಜಾರಿಗೆ ರಾಜ್ಯದ ಎಡರಂಗ ಸರಕಾರ ಮುಂದಾದರೆ ಅದನ್ನೂ ಟೀಕಿಸುವ ಪ್ರಧಾನಿ ಗಲಭೆಗೆ ಪ್ರಚೋದಿಸುತ್ತಿದ್ದಾರೆ. ಹೀಗೆ ಬಿಜೆಪಿಯೇತರ ರಾಜ್ಯ ಸರಕಾರಗಳ ಜೊತೆ ಕೇಂದ್ರ ಸರಕಾರ ಸಂಘರ್ಷಕ್ಕಿಳಿದಿರುವುದು ಸರಿಯಲ್ಲ

ಈ ದೇಶದ ಹಿಂದಿನ ಯಾವ ಪ್ರಧಾನಿಯೂ ರಾಜ್ಯಗಳ ಜೊತೆಗೆ ಇಷ್ಟು ಕೆಟ್ಟದಾಗಿ ನಡೆದುಕೊಂಡಿಲ್ಲ. ಇವರು ಎಷ್ಟು ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದಾರೆಂದರೆ ಅಸ್ಸಾಂನಲ್ಲಿ ಇತ್ತೀಚೆಗೆ ಜನರು ಇವರಿಗೆ ಧಿಕ್ಕಾರದ ಸ್ವಾಗತ ನೀಡಿದರು. ದೇಶದ ಯಾವುದೇ ರಾಜ್ಯಕ್ಕೆ ಹೋದರೂ ‘‘ಗೋ ಬ್ಯಾಕ್ ಮೋದಿ’’ ಘೋಷಣೆ ಸಾಮಾನ್ಯವಾಗಿದೆ

ಹಿಂದೆ ಇವರದೇ ಪಕ್ಷದ ಅಟಲ್ ಬಿಹಾರಿ ವಾಜಪೇಯಿ ದೇಶದ ಪ್ರಧಾನಿಯಾಗಿದ್ದರು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳೇನೇ ಇರಲಿ ರಾಜ್ಯಗಳ ಜೊತೆ ಅವರು ಸೌಹಾರ್ದ ಸಂಬಂಧ ಹೊಂದಿದ್ದರು. ತಾತ್ವಿಕವಾಗಿ ಶತ್ರುಗಳೇ ಆಗಿರುವ ಕಮ್ಯುನಿಸ್ಟರು ಅಧಿಕಾರದಲ್ಲಿದ್ದ ಪಶ್ಚಿಮ ಬಂಗಾಳದಲ್ಲಿ ರಾಜ್ಯಪಾಲರ ನೇಮಕ ಮಾಡುವಾಗ ಆ ರಾಜ್ಯದ ಮುಖ್ಯಮಂತ್ರಿ ಜ್ಯೋತಿಬಸು ಅವರೊಂದಿಗೆ ಚರ್ಚಿಸದೆ ನೇಮಕ ಮಾಡುತ್ತಿರಲಿಲ್ಲ, ಮೋದಿಯವರ ವರ್ತನೆ ಅದಕ್ಕೆ ತದ್ವಿರುದ್ಧವಾಗಿದೆ. ಅವರು ಇದೇ ರೀತಿ ಮುಂದುವರಿದರೆ ಒಕ್ಕೂಟ ವ್ಯವಸ್ಥೆಗೆ ಅಪಾಯ ಉಂಟಾಗುವ ಅಪಾಯವಿದೆ. ಈ ಲೋಪವನ್ನು ಅವರು ಸರಿಪಡಿಸಿಕೊಂಡರೆ ಅವರಿಗೂ ಕ್ಷೇಮ, ದೇಶಕ್ಕೂ ಕ್ಷೇಮ.

ಭಾರತ ವಿಭಿನ್ನ ಭಾಷೆ, ಧರ್ಮ, ಸಂಸ್ಕೃತಿಗಳನ್ನು ಹೊಂದಿದ ದೇಶ. ಈ ವಿಭಿನ್ನತೆಗೆ ಪೂರಕವಾಗಿ ನಮ್ಮ ಸಂವಿಧಾನವಿದೆ. ಅನೇಕತೆಯಲ್ಲಿ ಏಕತೆ ನಮ್ಮ ನೆಲದ ಜೀವ ಸತ್ವ. ಈ ಅನೇಕತೆಯನ್ನು ನಾಶ ಮಾಡಿ ಏಕ ಧರ್ಮ, ಏಕ ಭಾಷೆ, ಏಕ ಸಂಸ್ಕೃತಿಯನ್ನು ಹೇರಲು ಹೊರಟರೆ ಈ ದೇಶ ನಾಶವಾಗಿ ಹೋಗುತ್ತದೆ. ಪ್ರಧಾನಿ ಸ್ಥಾನದಲ್ಲಿರುವವರಿಗೆ ಈ ಎಚ್ಚರವಿರಬೇಕು. ಮೋದಿಯವರು ಆರೆಸ್ಸೆಸ್ ಶಾಖೆಯಲ್ಲಿ ಬೆಳೆದವರು. ಆದರೆ ಈಗ ಅವರು ಪ್ರಧಾನಿ ಸ್ಥಾನದಲ್ಲಿದ್ದಾರೆ ಎಂಬುದನ್ನು ಮರೆಯ ಬಾರದು. ಸಂವಿಧಾನಕ್ಕೆ ಚ್ಯುತಿಯಾಗದಂತೆ ನಡೆದುಕೊಳ್ಳಬೇಕು.

ರಾಜ್ಯಗಳ ಮುಖ್ಯಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರನ್ನೂ ಗೌರವಿಸಿದರೆ ಅದು ಅವರಿಗೆ ವಾಪಸು ಸಿಗುತ್ತದೆ ಎಂಬುದು ನೆನಪಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News