ಟ್ಯಾಂಕರ್ ನೀರು ಪೂರೈಕೆ ಬಾಬ್ತು 32.31 ಲಕ್ಷ ರೂ. ಬಿಡುಗಡೆ: ಚಿಕ್ಕಮಗಳೂರು ತಾಪಂ ಅಧ್ಯಕ್ಷ ಜಯಣ್ಣ

Update: 2019-02-13 12:54 GMT

ಚಿಕ್ಕಮಗಳೂರು, ಫೆ.13: ಬರಗಾಲದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದ 2016-17ನೇ ಸಾಲಿನ ಬಾಬ್ತು 32.31 ಲಕ್ಷ ರೂ. ಬಿಡುಗಡೆಯಾಗಿದೆ. ತಾಲೂಕು ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದವರಿಗೆ ಈಗಾಗಲೇ ಈ ಹಣವನ್ನು ಪಾವತಿಸಲಾಗುತ್ತಿದೆ ಎಂದು ತಾಪಂ ಅಧ್ಯಕ್ಷ ಜಯಣ್ಣ ನೆಟ್ಟಕೆರೆಹಳ್ಳಿ ತಿಳಿಸಿದರು.

ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಬುಧವಾರ ತಾ.ಪಂ. ಅಧ್ಯಕ್ಷ ಜಯಣ್ಣ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ಟ್ಯಾಂಕರ್ ಮೂಲಕ ನೀರು ಪೂರೈಸಿದ ಟ್ಯಾಂಕರ್ ಮಾಲಕರಿಗೆ ಪಾವತಿಸಬೇಕಾಗಿರುವ ಬಾಕಿ 30 ಲಕ್ಷ ರೂ. ಹಣವನ್ನು ಗ್ರಾಮ ಪಂಚಾಯತ್‍ಗಳ 14ನೇ ಹಣಕಾಸು ಯೋಜನೆ ಮೂಲಕ ಪಾವತಿಸಲು ಸೂಚಿಸಲಾಗಿದೆ ಎಂದರು.

ಈ ವೇಳೆ ಮಾತನಾಡಿದ ತಾಪಂ ಸದಸ್ಯ ಈಶ್ವರಹಳ್ಳಿ ಮಹೇಶ್, ಬೇಸಿಗೆ ಆರಂಭವಾಗುವ ಮೊದಲೇ ತಾಲೂಕಿನ ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆ ಎದುರಾಗಿದೆ. ಇಂತಹ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ತಾಲೂಕು ಮಟ್ಟದಲ್ಲಿ ಟೆಂಡರ್ ಕರೆದು ದರ ನಿಗದಿಪಡಿಸುವುದು ಸರಿಯಲ್ಲ. ಕೆಲ ಗ್ರಾಮಗಳಲ್ಲಿ 300 ರೂ.ಗೆ ಟ್ಯಾಂಕರ್ ನೀರು ದೊರೆತರೆ ಕೆಲವೆಡೆ 500 ರೂ. ಕೊಟ್ಟರೂ ಸಿಗುವುದಿಲ್ಲ. ಹಾಗಾಗಿ ಪ್ರದೇಶವಾರು ಟೆಂಡರ್ ಕರೆಯುವುದು ಸೂಕ್ತ ಎಂದು ಸಲಹೆ ನೀಡಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಮಾತನಾಡಿದ ಸದಸ್ಯ ಮಲ್ಲೇಗೌಡ, ಚಿಕ್ಕಗೌಜ, ಸಾದರಹಳ್ಳಿ ಗ್ರಾಮಗಳಲ್ಲಿ ಬೋರ್‍ವೆಲ್‍ಗಳಲ್ಲಿ ನೀರು ಬರುತ್ತಿಲ್ಲ. ವಾರಕ್ಕೊಮ್ಮೆ 1 ಟ್ಯಾಂಕರ್ ನೀರು ಕೊಡಲಾಗುತ್ತಿದ್ದು, ಕೆಲವೆಡೆ ಬೋರ್‍ವೆಲ್‍ಗಳು ಸರಿ ಇದ್ದರೂ ವೋಲ್ಟೇಜ್ ಸಮಸ್ಯೆಯಿಂದಾಗಿ ನೀರು ಒದಗಿಸಲು ಆಗುತ್ತಿಲ್ಲ. ಟಿ.ಸಿ. ಬದಲಿಸುವಂತೆ ಮೆಸ್ಕಾಂ ಅಧಿಕಾರಿಗಳ ಬಳಿ ಅಂಗಲಾಚಿದರೆ ಟಿ.ಸಿ.ಗೆ ಹಣ ಕಟ್ಟುವಂತೆ ಹೇಳುತ್ತಾರೆ. ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯವರು ಮೆಸ್ಕಾಂಗೆ ಕಟ್ಟಲು ತಮ್ಮಲ್ಲಿ ಹಣವಿಲ್ಲ ಎನ್ನುತ್ತಾರೆ. ಹೀಗಾದರೆ ಸಾರ್ವಜನಿಕರಿಗೆ ನೀರು ಒದಗಿಸುವುದು ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಇಲಾಖೆಯ ಎಇಇ ವೇಣುಕುಮಾರ್, ತಮ್ಮ ಇಲಾಖೆಯಿಂದ ಮೆಸ್ಕಾಂಗೆ ಈವರೆಗೂ ಸುಮಾರು 2.50 ಕೋಟಿ ರೂ. ಹಣ ನೀಡಲು ಬಾಕಿ ಇದ್ದು, ಇದನ್ನು ಪಾವತಿಸುವವರೆಗೂ ಹೊಸದಾಗಿ ಯಾವ ಕೆಲಸವನ್ನೂ ಮಾಡಲು ಸಾಧ್ಯವಿಲ್ಲ ಎಂದು ಮೆಸ್ಕಾಂನವರು ತಿಳಿಸಿದ್ದಾರೆ. ಈ ಬಗ್ಗೆ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು. 

ಅಧಿಕಾರಿಯ ಈ ಸಮಾಜಾಯಿಸಿಗೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯ ಮಲ್ಲೇಗೌಡ, ಇಲಾಖೆಯಲ್ಲಿ ಹಣವಿಲ್ಲವೆಂದರೆ ಹೇಗೆ?, ನೀವು ಮೆಸ್ಕಾಂಗೆ ಹಣ ಕಟ್ಟಿ ಹೊಸ ಟಿ.ಸಿ. ಹಾಕಿಸಿಕೊಡಬೇಕು, ಇಲ್ಲವಾದರೆ ನಿಮ್ಮ ಇಲಾಖೆಯಿಂದಲೇ ಸಾರ್ವಜನಿಕರಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ ಎಂದರು.

ಸದಸ್ಯೆ ಶೋಭ ಮಾತನಾಡಿ, ಕುರುಬರಬೂದಿಹಾಳ್ ಗ್ರಾಮದಲ್ಲಿ ಶುದ್ಧಗಂಗಾ ಘಟಕವನ್ನು ಉದ್ಘಾಟಿಸಲಾಗಿದೆ. ಆದರೆ ಕಾಮಗಾರಿ ಪೂರ್ಣಗೊಂಡಿಲ್ಲ ಎಂದಾಗ, ತಾಪಂ ಅಧ್ಯಕ್ಷ ಜಯಣ್ಣ ಕೂಡಲೆ ಸ್ಥಳ ಪರಿಶೀಲಿಸಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗೆ ಸೂಚಿಸಿದರು. ಈ ಮಧ್ಯೆ, ತಾಲೂಕಿನ ಯಾವುದೇ ಭಾಗದಲ್ಲಿಯೂ ಶುದ್ಧಗಂಗಾ ಘಟಕಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅಧಿಕಾರಿಗಳು ಕುಳಿತಲ್ಲಿಯೇ ಬೇರೆಯವರನ್ನು ಕೇಳಿ ಎಲ್ಲವೂ ಸರಿಯಾಗಿದೆ ಎಂಬ ಮಾಹಿತಿ ನೀಡುತ್ತಿದ್ದಾರೆ ಎಂದು ಸದಸ್ಯ ಸುರೇಶ್ ಆರೋಪಿಸಿದರು. ಆಗ ತಾಪಂ ಅಧ್ಯಕ್ಷ ಜಯಣ್ಣ ಮಾತನಾಡಿ, ಸಂಬಂಧಿಸಿದ ಅಧಿಕಾರಿಗಳು ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಘಟಕಗಳ ಸ್ಥಿತಿಗತಿಗಳ ಬಗ್ಗೆ ವರದಿ ನೀಡುವಂತೆ ಸೂಚಿಸಿದರು.

ಬಳಿಕ ನಡೆದ ಚರ್ಚೆಯಲ್ಲಿ ತಾಪಂ ಸದಸ್ಯ ಈಶ್ವರಹಳ್ಲಿ ಮಹೇಶ್ ಮಾತನಾಡಿ, ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯ ನಿರ್ವಹಿಸಲು ಕೇವಲ ಒಬ್ಬರು ಇಂಜಿನಿಯರ್ ಮಾತ್ರ ಇದ್ದಾರೆ. ಕಡೂರು ತಾಲೂಕಿನಲ್ಲಿ 14 ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿಗೆ ಹೆಚ್ಚುವರಿ ಇಂಜಿನಿಯರ್ ಗಳನ್ನು ಕೂಡಲೇ ನೇಮಕ ಮಾಡುವಂತೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಜಯಣ್ಣ, ಈ ಕುರಿತು ಜಿ.ಪಂ. ಸಿಇಒ ಅವರೊಂದಿಗೆ ಚರ್ಚಿಸಲಾಗಿದೆ. 3 ಜನ ಇಂಜಿನಿಯರ್ ಗಳನ್ನು ನೇಮಿಸುವಂತೆ ಕೋರಲಾಗಿದೆ. ಇದಕ್ಕೆ ಸ್ಪಂದಿಸಿರುವ ಸಿಇಒ ಸದ್ಯ ಓರ್ವ ಇಂಜಿನಿಯರ್ ಅನ್ನು ಇಲ್ಲಿಗೆ ವರ್ಗಾಯಿಸಿದ್ದಾರೆ ಎಂದರು.

ತೋಟಗಾರಿಕೆ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕರು ಮಾತನಾಡಿ, ಸರ್ಕಾರವು ಒಣಗಿ ಹೋಗಿರುವ ತೆಂಗಿನ ಮರಗಳಿಗೆ ತಲಾ 400 ರೂ.ಗಳಂತೆ ಪರಿಹಾರ ನೀಡಲು ತಾಲೂಕಿಗೆ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಇಲಾಖೆ ವತಿಯಿಂದ ತಾಲೂಕಿನಾಧ್ಯಂತ ಸರ್ವೆ ನಡೆಸಿ ಒಣಗಿ ಹೋಗಿರುವ ತೆಂಗಿನ ಮರಗಳನ್ನು ಗುರುತಿಸಲಾಗಿದೆ. ಈವರೆಗೂ 3250 ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಅವರ ಖಾತೆಗೆ ಹಣ ಹಾಕುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ದಿವ್ಯಾ ನಟೇಶ್, ಇಒ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಶುದ್ಧಗಂಗಾ ನೀರಿನ ಘಟಕ ದುರಸ್ತಿ ವಿಚಾರ: ಅಧಿಕಾರಿ-ಸದಸ್ಯ ಜಟಾಪಟಿ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಯು ಅನುಪಾಲನಾ ವರದಿಯಲ್ಲಿ ಶಿರವಾಸೆಯ ಸುಗುಡವಾನಿ ಶುದ್ಧಗಂಗಾ ಘಟಕವನ್ನು ದುರಸ್ತಿಪಡಿಸಲಾಗಿದ್ದು, ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯ ರಮೇಶ್ ಸಿದ್ದಾಪುರ ಶುದ್ಧಗಂಗಾ ಘಟಕದಲ್ಲಿ ನೀರಿಲ್ಲ ಎಂದಾಗ, ಘಟಕದಲ್ಲಿ ನೀರಿದ್ದು, ಸರಿಯಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ಅಧಿಕಾರಿ ಸಮಾಜಾಯಿಸಿ ನೀಡಿದರು. ಈ ಸಮಾಜಾಯಿಸಿಯಿಂದ ಕುಪಿತರಾದ ಸದಸ್ಯ ರಮೇಶ್, ಈಗಲೇ ನನ್ನ ವಾಹನದಲ್ಲಿಯೇ ಅಲ್ಲಿಗೆ ಹೋಗೋಣ, ಅಲ್ಲಿ ಒಂದು ಲೋಟ ನೀರಿದ್ದರೂ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ. ಅಲ್ಲಿ ನೀರಿಲ್ಲದಿದ್ದರೆ ನೀವು ನಿಮ್ಮ ಕೆಲಸಕ್ಕೆ ರಾಜೀನಾಮೆ ಕೊಡುತ್ತೀರಾ? ಎಂದು ಅಸಮಾದಾನ ವ್ಯಕ್ತಪಡಿಸಿ, ಸಭೆಗೆ ತಪ್ಪು ಮಾಹಿತಿ ನೀಡಬೇಡಿ, ಅಧ್ಯಕ್ಷರೇ ನನಗೆ ಸಭೆಯಿಂದ ಹೊರಗೆ ಹೋಗಲು ಅನುಮತಿ ನೀಡಿ, ನನ್ನೊಡನೆ ಅಧಿಕಾರಿಯನ್ನೂ ಕರೆದೋಯ್ಯುತ್ತೇನೆ ಎಂದು ಮನವಿ ಮಾಡಿದರು. ಈ ವೇಳೆ ರಮೇಶ್ ಅವರನ್ನು ಉಳಿದ ಸದಸ್ಯರು ಸಮಾದಾನ ಮಾಡಲು ಯತ್ನಿಸಿದರೂ ಪಟ್ಟು ಸಡಿಲಿಸದ ರಮೇಶ್ ಈಗಲೇ ಹೋಗಬೇಕೆಂದು ಪಟ್ಟು ಹಿಡಿದರು. ಆಗ ಅಧ್ಯಕ್ಷ ಜಯಣ್ಣ, ಸಭೆಗೆ ಯಾವುದೇ ಅಧಿಕಾರಿಯೂ ತಪ್ಪು ಮಾಹಿತಿ ನೀಡಬಾರದು. ಇಂದು ಮಧ್ಯಾಹ್ನವೇ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಸರಿಯಾದ ಮಾಹಿತಿ ಅರಿತು ಸಂಜೆಯೊಳಗೆ ವರದಿ ನೀಡಬೇಕೆಂದು ಅಧಿಕಾರಿಗೆ ಸೂಚನೆ ನೀಡಿದರು.

ಪ್ರತಿಧ್ವನಿಸಿದ ಪ್ರೊಟೊಕಾಲ್ ವಿಷಯ
ತಾಪಂ ಸರ್ವ ಸದಸ್ಯರ ಸಭೆ ಆರಂಭವಾಗುತ್ತಿದ್ದಂತೆ ಶಿಷ್ಟಾಚಾರವನ್ನು ಪಾಲಿಸದ ಅಧಿಕಾರಿಗಳ ವಿರುದ್ಧ ತಾಪಂ ಸದಸ್ಯರುಗಳು ಅಸಮಾಧಾನ ವ್ಯಕ್ತಪಡಿಸಿದರು.
ಗಣರಾಜ್ಯೋತ್ಸವದ ಅಂಗವಾಗಿ ತೋಟಗಾರಿಕಾ ಇಲಾಖೆ ನಡೆಸಿದ ಫಲಪುಷ್ಪ ಪ್ರದರ್ಶನದ ಆಹ್ವಾನ ಪತ್ರಿಕೆಯು ತಮಗೆ ಫಲಪುಷ್ಪ ಪ್ರದರ್ಶನ ಪೂರ್ಣಗೊಂಡ ನಂತರ ಬಂದಿತು. ಆಹ್ವಾನ ಪತ್ರಿಕೆಯನ್ನು ಅಷ್ಟು ತಡವಾಗಿ ಕಳುಹಿಸಿದ್ದು ಏಕೆ? ಕನಿಷ್ಠ ದೂರವಾಣಿ ಕರೆಯಾದರೂ ಮಾಡಿ ವಿಚಾರ ತಿಳಿಸಬಹುದಿತ್ತು ಎಂದು ತಾಲೂಕು ಪಂಚಾಯತ್ ಸದಸ್ಯ ಡಿ.ಜೆ.ಸುರೇಶ್ ಸಭೆಯ ಆರಂಭದಲ್ಲಿ ಅಧಿಕಾರಿಯನ್ನು ತರಾಟೆಗೆ ಪಡೆದರು.

ಇದಕ್ಕೆ ಧ್ವನಿಗೂಡಿಸಿದ ಮತ್ತೋರ್ವ ಸದಸ್ಯ ವೈ.ಜೆ.ಸುರೇಶ್, ಕೃಷಿ ಇಲಾಖೆ ವತಿಯಿಂದ ನಡೆದ ಸಿರಿಧಾನ್ಯ ಮೇಳ ಮತ್ತು ಸಾವಯವ ಕೃಷಿ ಮೇಳಕ್ಕೆ ತಮಗೆ ಆಹ್ವಾನ ಪತ್ರಿಕೆಯನ್ನು ನೀಡಲಾಗಿತ್ತು. ಕಾರ್ಯಕ್ರಮದಲ್ಲಿ ತಮ್ಮನ್ನು ವೇದಿಕೆಯ ಮೇಲೆ ಕರೆಯಲಿಲ್ಲ. ಮಾಜಿ ಜನಪ್ರತಿನಿಧಿಗಳನ್ನು 2-3 ಬಾರಿ ಕರೆದು ವೇದಿಕೆಯ ಮೇಲೆ ಕೂರಿಸಲಾಯಿತು. ಹಾಲಿ ಸದಸ್ಯರಾದ ತಮ್ಮನ್ನು ವೇದಿಕೆಯ ಮೇಲೆ ಕರೆಯದೆ ಅಪಮಾನ ಮಾಡಲಾಯಿತು ಎಂದು ದೂರಿದರು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅಧ್ಯಕ್ಷ ನೆಟ್ಟೇಕೆರೆಹಳ್ಳಿ ಜಯಣ್ಣ ಪ್ರತಿಯೊಂದು ಸಭೆಯಲ್ಲಿ ಶಿಷ್ಟಾಚಾರ ಪಾಲಿಸದ ಕುರಿತು ಸದಸ್ಯರಿಂದ ಆಕ್ಷೇಪಗಳು ಕೇಳಿ ಬರುತ್ತಲೇ ಇವೆ. ಆದರೂ ತಪ್ಪನ್ನು ತಿದ್ದಿಕೊಳ್ಳುತ್ತಿಲ್ಲ. ಜಿಲ್ಲಾ ಮಟ್ಟದ ಕಾರ್ಯಕ್ರಮವಾದರೂ ಅದರಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೂ ಪಾಲ್ಗೊಂಡಿರುತ್ತೀರಿ. ಇಂತಹ ಕಾರ್ಯಕ್ರಮಗಳ ಸಂದರ್ಭ ಪ್ರತೀ ಇಲಾಖೆಯವರೂ ಶಿಷ್ಟಾಚಾರವನ್ನು ಪಾಲಿಸಲೇ ಬೇಕೆಂದು ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News