ಆಪರೇಷನ್ ಕಮಲಕ್ಕೆ ಬಲಿಯಾಗಲ್ಲ: ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ

Update: 2019-02-13 13:31 GMT

ಬೆಂಗಳೂರು, ಫೆ.13: ಬಿಜೆಪಿಯ ಯಾವ ನಾಯಕರೂ ನನ್ನನ್ನು ಸಂಪರ್ಕ ಮಾಡಿಲ್ಲ. ನಾವು ಆಪರೇಷನ್ ಕಮಲಕ್ಕೆ ಬಲಿಯಾಗುವುದಿಲ್ಲ ಎಂದು ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ತಿಳಿಸಿದರು.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಕಮಲನೂ ನನ್ನ ಬಳಿ ಸುಳಿಯುವುದಿಲ್ಲ. ಈ ಹಿಂದೆ ನಾನು ಒಂದು ಬಾರಿ ಬಿಜೆಪಿಯಿಂದ ಗೆದ್ದಿದ್ದೆ. ಈಗ ಕಾಂಗ್ರೆಸ್ ಪಕ್ಷದಲ್ಲಿದ್ದು, ಕಾಂಗ್ರೆಸ್ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದರು.

ಪಕ್ಷದ ಎಲ್ಲ ನೋಟಿಸ್‌ಗಳಿಗೂ ಉತ್ತರ ನೀಡಿದ್ದೇನೆ. ಕೆಲವು ವಿಚಾರಗಳ ಕುರಿತು ಅಸಮಾಧಾನ ಇದ್ದದ್ದು ನಿಜ. ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಥಳೀಯ ಅಭ್ಯರ್ಥಿಗೆ ಅವಕಾಶ ನೀಡುವಂತೆ ಕೇಳಿದ್ದೆವು. ಆದರೆ, ಉಗ್ರಪ್ಪನವರಿಗೆ ಟಿಕೆಟ್ ಕೊಟ್ಟರು ಎಂದು ಅವರು ಹೇಳಿದರು.

ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ. ಆದರೆ, ಅವಕಾಶ ಸಿಕ್ಕಿಲ್ಲ. ಪಕ್ಷದ ಪ್ರಮುಖ ನಾಯಕರೊಂದಿಗೆ ಚರ್ಚೆ ನಡೆಸಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಉತ್ತಮ ಅವಕಾಶ ನೀಡುವ ಭರವಸೆಯನ್ನು ನೀಡಿದ್ದಾರೆ. ವೈಯಕ್ತಿಕ ಕೆಲಸಕ್ಕಾಗಿ ಮುಂಬೈಗೆ ಹೋಗಿದ್ದೆ. ಕಳೆದ 6 ತಿಂಗಳಿನಿಂದ ನನ್ನ ಕ್ಷೇತ್ರಕ್ಕೆ ಹೋಗಿಲ್ಲ. ಇನ್ನು ಮುಂದೆ ಕ್ಷೇತ್ರದಲ್ಲಿ ಇರುತ್ತೇನೆ ಎಂದು ನಾಗೇಂದ್ರ ತಿಳಿಸಿದರು.

ಶಾಸಕತ್ವ ಅನರ್ಹತೆ ಸಂಬಂಧ ಸ್ಪೀಕರ್‌ಗೆ ಸಲ್ಲಿಕೆಯಾಗಿರುವ ದೂರು ಕುರಿತು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಜೊತೆ ಮಾತನಾಡುತ್ತೇನೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News