ಟಯರ್ ಸ್ಫೋಟಗೊಂಡು ಕಾರು ಢಿಕ್ಕಿ: ಬಾಲಕ, ಮಹಿಳೆ ಸೇರಿ ನಾಲ್ವರು ಮೃತ್ಯು

Update: 2019-02-13 14:36 GMT

ದಾವಣಗೆರೆ,ಫೆ.13: ಕಾರಿನ ಟಯರ್ ಸ್ಫೋಟಗೊಂಡು ರಸ್ತೆ ಬದಿ ನಿಂತಿದ್ದವರಿಗೆ ಢಿಕ್ಕಿಯಾದ ಪರಿಣಾಮ ಬಾಲಕ, ಮಹಿಳೆ, ಕಾರಿನ ಚಾಲಕ ಸೇರಿ ನಾಲ್ವರು ಮೃತಪಟ್ಟ ಘಟನೆ ಹೊನ್ನಾಳಿ ತಾಲೂಕಿನ ದಿಡಗೂರು ಹರಳಲ್ಲಿ ಬಳಿ ನಡೆದಿದೆ.

ಮೃತರನ್ನು ಹರಳಲ್ಲಿ ನಿವಾಸಿ ರಮೇಶ್(40) ಅರಬಗಟ್ಟ ನಿವಾಸಿ ಉಷಾ(28) ಚಂದ್ರು (6) ಹಾಗೂ ಕಾರಿನ ಚಾಲಕ ದಾವಣಗೆರೆಯ ಎಸ್ಸೆಸ್ ಲೇಔಟ್ ನಿವಾಸಿ, ಗುತ್ತಿಗೆದಾರ ಹಿರೇಮಠ್(45) ಎಂದು ಗುರುತಿಸಲಾಗಿದೆ.

ಶಿವಮೊಗ್ಗದಿಂದ ಹೊನ್ನಾಳಿ ಕಡೆ ಬರುತ್ತಿದ್ದ ಕಾರಿನ ಟಯರ್ ದಿಡಗೂರು ಹರಳಲ್ಲಿ ಬಳಿ ಸ್ಫೋಟಗೊಂಡಿದೆ. ಪರಿಣಾಮ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿ ನಿಂತಿದ್ದವರಿಗೆ ಗುದ್ದಿ, ಬಳಿಕ ಮರಕ್ಕೆ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಬಾಲಕ, ಮಹಿಳೆ, ಕಾರಿನ ಚಾಲಕ ಸೇರಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ತಾಲೂಕಿನ ಅರಬಗಟ್ಟೆ ಗ್ರಾಮದ ಚೀಲೋಡಿ ಮನೆತನದ ಒಂದೇ ಕುಟುಂಬಕ್ಕೆ ಸೇರಿದ ರಮೇಶ್, ಉಷಾ, ಚಂದ್ರು ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮಕ್ಕೆ ತೆರಳಲು ಬಸ್‍ಗೆ ಕಾಯುತ್ತಿದ್ದದ್ದರು. ಕಾರು ಶಿವಮೊಗ್ಗದಿಂದ ದಾವಣಗೆರೆಗೆ ತೆರಳುತ್ತಿತ್ತು ಎನ್ನಲಾಗಿದೆ.

ಹೊನ್ನಾಳಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹೊನ್ನಾಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News