ಶಾಸಕ ಪ್ರೀತಂ ನಿವಾಸದ ಮೇಲೆ ದಾಳಿ ಪ್ರಕರಣ: ರಾಜ್ಯಾದ್ಯಂತ ಪ್ರತಿಭಟನೆಗೆ ಬಿಜೆಪಿ ಕರೆ

Update: 2019-02-13 16:19 GMT

ಬೆಂಗಳೂರು, ಫೆ. 13: ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಗೌಡ ಅವರ ನಿವಾಸದ ಮೇಲಿನ ದಾಳಿಯನ್ನು ಖಂಡಿಸಿ ನಾಳೆ(ಫೆ.14) ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಜಿಲ್ಲಾ ಘಟಕಗಳಿಗೆ ಕರೆ ನೀಡಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.

ಪ್ರೀತಂಗೌಡ ಅಧಿವೇಶನದಲ್ಲಿರುವುದು ತಿಳಿದೇ ಅವರ ನಿವಾಸಕ್ಕೆ ನುಗ್ಗಿ ಮನೆಯಲ್ಲಿದ್ದ ಅವರ ತಾಯಿ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಲು ಈ ದಾಳಿ ನಡೆದಿದೆ. ಓರ್ವ ಕಾರ್ಯಕರ್ತ ತೀವ್ರವಾಗಿ ಗಾಯಗೊಂಡಿದ್ದು ಪೊಲೀಸರು ಮೂಕ ಪ್ರೇಕ್ಷಕರಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಹಾಸನ ಜಿಲ್ಲಾಡಳಿತದ ಮೇಲೆ ಗೂಂಡಾಗಳೇ ನಿಯಂತ್ರಣ ಹೊಂದಿರುವುದು ಈ ಘಟನೆಯಿಂದ ಸಾಬೀತಾಗಿದೆ. ಶಾಸಕರಿಗೆ ಮತ್ತು ಅವರ ನಿವಾಸಕ್ಕೆ ರಕ್ಷಣೆ ಒದಗಿಸುವಲ್ಲಿ ಪೊಲೀಸರ ಸಂಪೂರ್ಣ ವಿಫಲವಾಗಿದ್ದಾರೆ. ಈ ಹಲ್ಲೆಗೆ ಸಿಎಂ ಸಹೋದರ ಸಚಿವ ಎಚ್.ಡಿ.ರೇವಣ್ಣ ಅವರ ನೇರ ಜವಾಬ್ದಾರರೆಂದು ಅವರು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ಆರಂಭದಲ್ಲಿ ಬಿಜೆಪಿ ವಿರುದ್ಧ ದಂಗೆ ಏಳುವಂತೆ ಕರೆ ನೀಡುವುದಾಗಿ ಹೇಳಿದ್ದರು. ಹೀಗಾಗಿ ಅದರಿಂದ ಪ್ರೇರಿತರಾಗಿ ಹಾಸನ ಜಿಲ್ಲೆ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News