ಬಿಎಸ್‌ವೈ ವಿರುದ್ಧ ಎಸ್ಪಿಗೆ ಶಾಸಕ ಪುತ್ರ ಶರಣಗೌಡ ದೂರು

Update: 2019-02-13 16:34 GMT

ರಾಯಚೂರು, ಫೆ. 14: ‘ಆಪರೇಷನ್ ಕಮಲ’ ಧ್ವನಿ ಸುರುಳಿ ಪ್ರಕರಣ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶಾಸಕರಾದ ಶಿವನಗೌಡ ನಾಯಕ್, ಪ್ರೀತಂಗೌಡ ಹಾಗೂ ಬಿಎಸ್‌ವೈ ಮಾಧ್ಯಮ ಸಲಹೆಗಾರ ಮರಂಕಲ್ ಸೇರಿದಂತೆ ನಾಲ್ವರ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಶಾಸಕ ನಾಗನಗೌಡ ಪುತ್ರ ಶರಣಗೌಡ ದೂರು ನೀಡಿದ್ದಾರೆ.

ಬುಧವಾರ ತಮ್ಮ ಬೆಂಬಲಿಗರೊಂದಿಗೆ ಎಸ್ಪಿಗೆ ಕಚೇರಿಗೆ ಆಗಮಿಸಿದ ಶರಣಗೌಡ, ಮೂರು ಪುಟಗಳ ದೂರಿನ ಪ್ರತಿಯೊಂದಿಗೆ ‘ಆಪರೇಷನ್ ಕಮಲ’ ಆಡಿಯೋ ಸಿಡಿಯನ್ನು ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರ್ ಬಾಬು ದೂರು ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.

ಆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಶರಣಗೌಡ, ‘ಆಪರೇಷನ್ ಕಮಲ’ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಶಾಸಕರಾದ ಶಿವನಗೌಡ ನಾಯಕ, ಪ್ರೀತಂಗೌಡ, ಮರಂಕಲ್ ಅವರ ಮೇಲೆ ದೂರು ಸಲ್ಲಿಸಿದ್ದೇನೆ ಎಂದರು.

ಶಾಸಕ ಶಿವನಗೌಡ ನಾಯಕ್, ಯಡಿಯೂರಪ್ಪನವರನ್ನು ಭೇಟಿ ಮಾಡಲು ಪದೆ ಪದೆ ಕರೆ ಮಾಡಿ ಒತ್ತಾಯ ಮಾಡುತ್ತಿದ್ದರು. ಈ ವಿಚಾರವನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಗಮನಕ್ಕೆ ತಂದಿದ್ದೆ. ಅವರಾಗಿಯೆ ಕರೆದರೆ ಹೋಗು ಎಂದು ಅವರು ಸೂಚಿಸಿದ್ದರು. ಹೀಗಾಗಿ ಬಿಜೆಪಿ ಶಾಸಕರು ಒತ್ತಡ ಹೇರಿರುವುದರಿಂದ ದೇವದುರ್ಗ ಪ್ರವಾಸಿ ಮಂದಿರಕ್ಕೆ ತೆರಳಿ, ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ನನಗೆ ಏನೇನು ಆಮಿಷವೊಡ್ಡಿದ್ದಾರೋ, ಅದನೆಲ್ಲಾ ದೂರಿನಲ್ಲಿ ವಿವರಿಸಿದ್ದೇನೆ ಎಂದು ಶರಣಗೌಡ ಇದೇ ವೇಳೆ ವಿವರಿಸಿದರು.

ಮೈತ್ರಿ ಸರಕಾರ ಇಂದು ಬೀಳುತ್ತೆ, ನಾಳೆ ಬೀಳುತ್ತೆ ಎಂದು ಹೇಳುವ ಮೂಲಕ ಸುಗಮವಾಗಿ ನಡೆಯುತ್ತಿರುವ ಸರಕಾರಕ್ಕೆ ಬಿಜೆಪಿಯವರು ತೊಂದರೆ ನೀಡುತ್ತಿದ್ದರು. ಇದಕ್ಕಾಗಿ ಪೂರ್ವನಿಗದಿ ಮಾಡಿಕೊಂಡು ಆಪರೇಷನ್ ಕಮಲದ ಆಡಿಯೋವನ್ನ ಬಿಡುಗಡೆ ಮಾಡಿದ್ದೇನೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News