×
Ad

ಅನಂತಕುಮಾರ್ ಹೆಗಡೆ ಸ್ಪರ್ಧೆ ತೀರ್ಮಾನವಾಗಿಲ್ಲ ಎಂದ ಬಿಜೆಪಿ ನಾಯಕ ಲಿಂಗರಾಜ ಪಾಟೀಲ್

Update: 2019-02-13 22:26 IST

ಕಾರವಾರ, ಫೆ.13: ಕೆನರಾ ಕ್ಷೇತ್ರದಲ್ಲಿ 5 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕೇ ಅಥವಾ ಬೇಡವೇ ಎಂಬುದನ್ನು ಪಕ್ಷದ ವರಿಷ್ಠರು ಇದುವರೆಗೆ ತೀರ್ಮಾನ ಕೈಗೊಂಡಿಲ್ಲ ಎಂದು ಬಿಜೆಪಿ ಕೆನರಾ ಲೋಕಸಭಾ ಕ್ಷೇತ್ರದ ಜಿಲ್ಲಾ ಪ್ರಭಾರಿ ಲಿಂಗರಾಜ ಪಾಟೀಲ್ ತಿಳಿಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರ ಸೂಚನೆಯಂತೆ ಅಭ್ಯರ್ಥಿ ಆಯ್ಕೆ ನಡೆಯಲಿದೆ. ಈಗ ಪಕ್ಷದ ಗೆಲುವಿಗಾಗಿ ಸಂಘಟನೆ ಮಾಡಲಾಗುತ್ತಿದೆಯೇ ಹೊರತು ಅಭ್ಯರ್ಥಿಯ ಕುರಿತಾಗಿ ಅಲ್ಲ ಎಂದು ಸ್ಪಷ್ಟ ಪಡಿಸಿದರು.

ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ತಾವು ಪಾಲ್ಗೊಂಡ ಕಾರ್ಯಕ್ರಮಗಳಲ್ಲಿ ಅಥವಾ ಇತರೆಡೆಗಳಲ್ಲಿ ಯಾವುದೇ ರೀತಿಯ ಪ್ರಚೋದನಕಾರಿ ಹೇಳಿಕೆ ನೀಡಬಾರದು ಎಂದು ವರಿಷ್ಠರು ಈಗಾಗಲೇ ಅವರಿಗೆ ಸೂಚನೆ ನೀಡಿದ್ದಾರೆ. ಈ ಸೂಚನೆಗಳನ್ನು ಸಚಿವರು ಪಾಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಲಿಂಗರಾಜ ಪಾಟೀಲ್, ಆದರೆ ಕೆಲವೊಮ್ಮೆ ಸಂದರ್ಭಕ್ಕನುಗುಣವಾಗಿ ಕಟುವಾದ ಪ್ರತಿಕ್ರಿಯೆಯನ್ನು ನೀಡುವುದು ಅನಿವಾರ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಸಚಿವ ಹೆಗಡೆ ಸಮಯ ಹಾಗೂ ಸಂದರ್ಭಕ್ಕೆ ತಕ್ಕಂತೆ ಮಾತನಾಡಿದ್ದಾರೆ ಎಂದು ಸಚಿವ ಹೆಗಡೆ ಅವರನ್ನು ಸಮರ್ಥಿಸಿಕೊಂಡರು.

ಸಭೆಯಲ್ಲಿ ಪ್ರಮುಖರಾದ ರಾಜೇಶ ನಾಯಕ, ಮನೋಜ ಭಟ್ ಕಿಶನ್ ಕಾಂಬ್ಳಿ ಹಾಗೂ ಇನ್ನಿತರರು ಇದ್ದರು.

ಮುಂಬರುವ ಲೋಕಸಭಾ ಚುನಾವಣೆ ಮಹತ್ವದ್ದಾಗಿದ್ದು, ಕ್ಷೇತ್ರದಲ್ಲಿ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಬೂತ್ ಮಟ್ಟದಿಂದ ಪಕ್ಷವನ್ನು ಪ್ರಬಲವಾಗಿ ಸಂಘಟಿಸಲು ಕಾರ್ಯಕರ್ತರ ಸಭೆ ನಡೆಸಲಾಗುತ್ತಿದೆ. ಅಭ್ಯರ್ಥಿ ಯಾರೇ ಆದರೂ ಕ್ಷೇತ್ರದ ಒಟ್ಟು ಮತಗಳಲ್ಲಿ ಶೇ. 51ಕ್ಕೂ ಹೆಚ್ಚು ಮತಗಳನ್ನು ಪಡೆಯುವ ವಿಶ್ವಾಸವಿದೆ.

-ಲಿಂಗರಾಜ ಪಾಟೀಲ್, ಬಿಜೆಪಿ ಕೆನರಾ ಲೋಕಸಭಾ ಕ್ಷೇತ್ರದ ಜಿಲ್ಲಾ ಪ್ರಭಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News