ಅತ್ಯಾಚಾರ ಸಂತ್ರಸ್ಥೆಯರ ಬಗ್ಗೆ ಸಭಾಧ್ಯಕ್ಷರ ಹೇಳಿಕೆಗೆ ಜನವಾದಿ ಮಹಿಳಾ ಸಂಘಟನೆ ಖಂಡನೆ

Update: 2019-02-13 17:09 GMT

ಬೆಂಗಳೂರು, ಫೆ.13: ಅತ್ಯಾಚಾರಕ್ಕೀಡಾದ ಮಹಿಳೆಯರ ಕುರಿತು ವಿಧಾನಸಭೆಯ ಸಭಾಧ್ಯಕ್ಷ ರಮೇಶ್‌ ಕುಮಾರ್ ಹಗುರವಾಗಿ ಮಾತನಾಡಿರುವುದು ಸರಿಯಲ್ಲವೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗೌರಮ್ಮ ಖಂಡಿಸಿದ್ದಾರೆ.

ಮಂಗಳವಾರ ವಿಧಾನಸಭೆಯಲ್ಲಿ ಸಭಾಧ್ಯಕ್ಷ ರಮೇಶ್ ಕುಮಾರ್ ಆಪರೇಷನ್ ಕಮಲಕ್ಕೆ ಸಂಬಂಧಿಸಿದ ಆಡಿಯೋ ಬಗ್ಗೆ ಪ್ರಸ್ತಾಪಿಸುತ್ತ, ತಮ್ಮ ಅಸಹಾಯಕತೆಯನ್ನು ವಿವರಿಸಲು ಅತ್ಯಾಚಾರದ ಸಂತ್ರಸ್ಥೆಗೆ ತಮ್ಮನ್ನು ಹೋಲಿಸಿಕೊಂಡು ಅತ್ಯಂತ ಹಗುರವಾಗಿ ಮಾತುಗಳನ್ನು ಆಡಿದ್ದಾರೆ. ಇದು ಅವರ ಘನತೆಗೆ ತಕ್ಕುದಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಸಭಾಧ್ಯಕ್ಷ ರಮೇಶ್‌ ಕುಮಾರ್ ಮಾತನಾಡುವಾಗ ಸದನದಲ್ಲಿ ಮಾಜಿ, ಹಾಲಿ ಮುಖ್ಯಮಂತ್ರಿಗಳು, ಆಡಳಿತ ವಿರೋಧ ಪಕ್ಷಗಳ ಶಾಸಕರು, ಮಹಿಳಾ ಶಾಸಕರು ಹಾಜರಿದ್ದರು. ಅವರ್ಯಾರು ರಮೇಶ್‌ ಕುಮಾರ್‌ರವರ ಹಗುರವಾದ ಮಾತಿಗೆ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಬದಲಿಗೆ, ಹಾಸ್ಯವೆಂಬಂತೆ ಪರಿಗಣಿಸಿ ನಗುತ್ತಿದ್ದುದು ಲಿಂಗಸೂಕ್ಷ್ಮವಿಲ್ಲದ ಮನಃಸ್ಥಿತಿಯ ದ್ಯೋತಕವಾಗಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ. ಅತ್ಯಾಚಾರದಂತಹ ಹೀನ ಕೃತ್ಯವನ್ನು ಮತ್ತು ಅದಕ್ಕೆ ಒಳಗಾದ ಮಹಿಳೆಯರು ಎದುರಿಸುವ ಸಂಕಟ ಹಾಗೂ ಅವಮಾನದ ಕ್ಷಣಗಳನ್ನು ನಗೆಚಾಟಿಕೆ ಮಾಡಿ ಆಡಿಕೊಂಡ ಈ ಸದನದ ಸದಸ್ಯರು ಅತ್ಯಾಚಾರದ ಸಂತ್ರಸ್ಥೆಯ ಬಗ್ಗೆ ಕಾಳಜಿ, ಅಂತಃಕರಣ ತೋರಿಸಬಲ್ಲರೇ ಎಂಬುದು ಪ್ರಶ್ನೆಯಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ಥೆಯರ ಮೇಲೆ ಜನಪ್ರತಿನಿಧಿಗಳಿಗಿರುವ ಹಗುರವಾದ ಭಾವನೆಯಿಂದಾಗಿಯೆ ಅತ್ಯಾಚಾರ ಸಂತ್ರಸ್ಥರು ನ್ಯಾಯಕ್ಕಾಗಿ ವರ್ಷಾನುಗಟ್ಟಲೆ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು. ಹೀಗಾಗಿ ಕೂಡಲೆ ಸಭಾಧ್ಯಕ್ಷ ರಮೇಶ್‌ ಕುಮಾರ್ ತಮ್ಮ ಮಾತಿಗೆ ಕ್ಷಮೆಯಾಚಿಸಬೇಕು. ಹಾಗೂ ಮುಂದಿನ ದಿನಗಳಲ್ಲಿ ಈಗಾಗದಂತೆ ಎಚ್ಚರಿಕೆ ವಹಿಸಬೇಕೆಂದು ಜನವಾದಿ ಮಹಿಳಾ ಸಂಘಟನೆ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News