ವಿದ್ಯಾರ್ಥಿನಿ ನಾಪತ್ತೆ ಪ್ರಕರಣ: ಅತ್ಯಾಚಾರಗೈದು ಕೊಲೆಗೈದಿದ್ದ ದುಷ್ಕರ್ಮಿಗಳು
ಮಡಿಕೇರಿ, ಫೆ.13: ಎಮ್ಮೆಗುಂಡಿ ಎಸ್ಟೇಟ್ ಬಾಲಕಿಯ ನಾಪತ್ತೆ ಪ್ರಕರಣವನ್ನು ಭೇದಿಸಿರುವ ಕೊಡಗು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಪಶ್ಚಿಮಬಂಗಾಳ ಮೂಲದ ಕೂಲಿ ಕಾರ್ಮಿಕರಾದ ರಂಜಿತ್ ಹಾಗೂ ಸಂದೀಪ್ ಬಂಧನಕ್ಕೊಳಗಾದ ಆರೋಪಿಗಳು. ಇವರು ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಿ ಶವವನ್ನು ಬಂಡೆಕಲ್ಲಿನ ಬಳಿ ಬಚ್ಚಿಟ್ಟಿದ್ದರು ಎನ್ನಲಾಗಿದೆ.
ಕೊಡಗು ಜಿಲ್ಲೆಯ ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎಮ್ಮೆಗುಂಡಿ ಎಸ್ಟೇಟ್‍ನಿಂದ ಬಾಲಕಿ ಅಪಹರಣವಾಗಿದ್ದ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಜಿಲ್ಲಾ ಪೊಲೀಸರು ಸ್ಥಳೀಯ ಎಸ್ಟೇಟ್‍ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ವಿಚಾರಣೆಗೆ ಒಳಪಡಿಸಿದ್ದರು.
ಅಪಹರಣಕ್ಕೊಳಗಾದ ಬಾಲಕಿಯೊಂದಿಗೆ ಪಶ್ಚಿಮ ಬಂಗಾಳದ ರಂಜಿತ್ ಮತ್ತು ಆತನ ಸ್ನೇಹಿತ ಜಗಳವಾಡಿದ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಎಮ್ಮೆಗುಂಡಿ ಎಸ್ಟೇಟ್ ಸಮೀಪದ ಕರಡಿಕಾಡು ಎಸ್ಟೇಟ್‍ನಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ರಂಜಿತ್‍ನನ್ನು ವಶಕ್ಕೆ ಪಡೆದು ತೀವ್ರವಾಗಿ ವಿಚಾರಣೆಗೊಳಪಡಿಸಿದರು. ಈ ಸಂದರ್ಭ ಆತನು ಪಶ್ಚಿಮ ಬಂಗಾಲದ ಮೂಲದ ಸಂದೀಪನೊಂದಿಗೆ ಸೇರಿ ತಮ್ಮನ್ನು ಅವಮಾನಿಸಿದ್ದ ಎಮ್ಮೆಗುಂಡಿ ಎಸ್ಟೇಟ್‍ನ ಬಾಲಕಿಯ ಮೇಲೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಫೆ.04 ರಂದು ಪೂರ್ವ ತಯಾರಿಯೊಂದಿಗೆ ಆಕೆಯನ್ನು ಅಪಹರಣ ಮಾಡಿ ಅತ್ಯಾಚಾರವೆಸಗಿ, ಈ ವಿಷಯವನ್ನು ಯಾರಿಗಾದರೂ ಹೇಳಿ ತಮಗೆ ತೊಂದರೆಯಾಗಬಹುದೆಂದು ತಮ್ಮೊಂದಿಗೆ ಇದ್ದ ಹಗ್ಗದಿಂದ ಆಕೆಯ ಕುತ್ತಿಗೆಯನ್ನು ಬಿಗಿದು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪನ್ನೇಕರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಎಮ್ಮೆಗುಂಡಿ ಎಸ್ಟೇಟ್‍ನ ಗಣಪತಿ ದೇವಸ್ಥಾನದ ಕೆಳಭಾಗದಲ್ಲಿರುವ ಕಲ್ಲುಗುಡ್ಡದ ಬಂಡೆಯ ಬಳಿ ಮೃತದೇಹವನ್ನು ಬಚ್ಚಿಡಲಾಗಿತ್ತು. ಸಂದೀಪ್‍ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ ತಾನೂ ಕೂಡ ರಂಜಿತ್‍ನೊಂದಿಗೆ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಒಪ್ಪಿಕೊಂಡಿದ್ದಾನೆ ಎಂದು ಹೇಳಿದರು.
ಸದ್ಯ ಕಾರ್ಮಿಕರಾದ ರಂಜಿತ್ ಹಾಗೂ ಸಂದೀಪ್‍ರನ್ನು ದಸ್ತಗಿರಿ ಮಾಡಲಾಗಿದೆ. ಎಸ್‍ಪಿ ಡಾ.ಸುಮನ್ ಪನ್ನೇಕರ್ ಅವರ ನಿರ್ದೇಶನದಂತೆ ಡಿವೈಎಸ್‍ಪಿ ಸುಂದರ್ ರಾಜ್ ಅವರ ಮಾರ್ಗದರ್ಶನದಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸ್ ಇನ್ಸ್ ಪೆಕ್ಟರ್ ಎಂ.ಮಹೇಶ್, ಮಡಿಕೇರಿ ನಗರ ವೃತ್ತ ನಿರೀಕ್ಷಕರಾದ ಅನೂಪ್ ಮಾದಪ್ಪ, ಸಿದ್ದಾಪುರ ಪೊಲೀಸ್ ಠಾಣಾ ಪಿಎಸ್‍ಐ ದಯಾನಂದ್, ಸಿಬ್ಬಂದಿಗಳಾದ ಯೋಗೇಶ್ ಕುಮಾರ್, ವೆಂಕಟೇಶ್, ಅನಿಲ್, ವಸಂತ, ನಿರಂಜನ್, ಸಿಡಿಆರ್ ಸೆಲ್‍ನ ಎಂ.ಎ.ಗಿರೀಶ್, ಸಿ.ಕೆ.ರಾಜೇಶ್ ಮತ್ತು ಮಂಜುನಾಥ್, ಲವ ಕುಮಾರ್, ಪೃತ್ವೀಶ, ಮಲ್ಲಪ್ಪ ಹಾಗೂ ಚಾಲಕರಾದ ಶಶಿಕುಮಾರ್, ಪೂವಯ್ಯ, ಮೋಹನ ರವರು ಕಾರ್ಯಾಚರಣೆಯಲ್ಲಿದ್ದು, ಪ್ರಕರಣವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣವನ್ನು ಪತ್ತೆಹಚ್ಚಿದ ಜಿಲ್ಲಾ ಅಪರಾಧ ಪತ್ತೆ ದಳದ ಅಧಿಕಾರಿಗಳು ಇತರ ವಿಭಾಗಗಳ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.
ಮಾಹಿತಿ ನೀಡದಿದ್ದರೆ ಕ್ರಮ
ಕೊಡಗು ಜಿಲ್ಲೆಯಾದ್ಯಂತ ಕಾಫಿ ತೋಟಗಳಲ್ಲಿ ಅಸ್ಸಾಂ ಹಾಗೂ ಪಶ್ಚಿಮ ಬಂಗಾಲ ಹಾಗೂ ಇನ್ನಿತರೆ ರಾಜ್ಯಗಳ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಮಾಲಕರು ತಮ್ಮ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಹೊರರಾಜ್ಯದ ಕೂಲಿಕಾರ್ಮಿಕರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಒದಗಿಸುವುದು ಕಡ್ಡಾಯವೆಂದು ಈಗಾಗಲೇ ತಿಳಿಸಲಾಗಿದ್ದು, ಅದರೂ ಸಹ ಕೆಲವು ತೋಟದ ಮಾಲಕರು, ತಮ್ಮಲ್ಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರ ವಿವರಗಳನ್ನು ಪೊಲೀಸ್ ಠಾಣೆಗಳಿಗೆ ಸಲ್ಲಿಸುವಲ್ಲಿ ನಿರ್ಲಕ್ಷ್ಯತನ ತೋರಿಸುತ್ತಿದ್ದು, ಅಂತಹ ತೋಟದ ಮಾಲಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪನ್ನೇಕರ್ ತಿಳಿಸಿದ್ದಾರೆ.