ಸಂಗೀತ ಕಲಾವಿದೆ ನಂದಾ ಪಾಟೀಲರಿಗೆ ಗೌರವ ಡಾಕ್ಟರೇಟ್ ಪ್ರದಾನ

Update: 2019-02-13 17:29 GMT

ವಿಜಯಪುರ,ಫೆ.13: ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 10 ನೇ ಘಟಿಕೋತ್ಸವದಲ್ಲಿ ಸಂಗೀತ ಕ್ಷೇತ್ರದಲ್ಲಿ ಅನುಪಮ ಸಾಧನೆ ತೋರಿದ ನಂದಾ ಪಾಟೀಲ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಲಾಯಿತು. 

ಘಟಿಕೋತ್ಸವದ ಮುಖ್ಯ ಅತಿಥಿಯಾಗಿದ್ದ ಖ್ಯಾತ ಲೇಖಕಿ ಎಚ್‍ಎಎಲ್ ಮ್ಯಾನೇಜ್‍ಮೆಂಟ್ ಅಕಾಡೆಮಿಯ ಡೀನ್ ನೇಮಿಚಂದ್ರ, ಕುಲಪತಿ ಪ್ರೊ.ಸಬೀಹಾ ಭೂಮಿಗೌಡ, ವಿವಿಧ ನಿಖಾಯಗಳ ಡೀನರ ಸಮ್ಮುಖದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಮುಖ್ಯಭಾಷಣ ಮಾಡಿದ ಖ್ಯಾತ ಲೇಖಕಿ ನೇಮಿಚಂದ್ರ, ಮಹಿಳೆ ತನಗಿಷ್ಟದ ಉದ್ಯೋಗ ಕಂಡುಕೊಳ್ಳಲು ಇಂದಿಗೂ ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ. ಕಾನೂನಿನ ದೃಷ್ಟಿಯಲ್ಲಿ ಮಹಿಳೆ ಎಲ್ಲ ಉದ್ಯೋಗಗಳನ್ನು ಕೈಗೊಳ್ಳಬಹುದಾದರೂ ವಾಸ್ತವ ಬದುಕಿನಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ ಎಂದರು. ಸಾಧಕ ಮಹಿಳೆಯ ಸಾಧನೆಯ ವಿವರಿಸುವ ಜೊತೆಗೆ ಇತಿಹಾಸ ಪುಟಗಳಲ್ಲಿ ಮಹಿಳಾ ವಿಜ್ಞಾನಿಗಳ ಸಂಶೋಧನೆ, ಅನ್ವೇಷಣೆಯ ಅಂಶಗಳನ್ನು ಮರೆಮಾಚಲಾಗಿದೆ ಎಂಬ ವಿಷಯದ ಕುರಿತು ಉದಾಹರಣೆಗಳೊಂದಿಗೆ ಮಹಿಳಾ ಸಾಧಕಿಯರ ಹೆಸರು ಮಾಯವಾಗಿರುವ ಬಗ್ಗೆ ಸಂದೇಶದಲ್ಲಿ ವಿವರಿಸಿದರು. ಸಾಧಿಸಲು ಸಾಧ್ಯವಾಗುವುದಿಲ್ಲ ಎಂದುಕೊಳ್ಳದೇ ಅಂತಶಕ್ತಿಯನ್ನು ವೃದ್ಧಿಸಿಕೊಳ್ಳಿ, ಕನಸು ಕಾಣಬೇಕು ಎಂದು ಹೇಳಿದರು.

ಮಹಿಳಾ ವಿ.ವಿ. ಕುಲಪತಿ ಪ್ರೊ.ಸಬೀಹಾ ಭೂಮಿಗೌಡ ಅವರು, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಗತಿಯ ಹೆಜ್ಜೆಗಳು, ಮುಂಬರುವ ದಿನಗಳಲ್ಲಿ ಕೈಗೊಳ್ಳಲಾಗುತ್ತಿರುವ ಯೋಜನೆಗಳು, ವರ್ಷದುದ್ದಕ್ಕೂ ವಿಶ್ವವಿದ್ಯಾಲಯದಲ್ಲಿ ಕೈಗೊಳ್ಳಲಾಗಿರುವ ಕಾರ್ಯಚಟುವಟಿಕೆ, ಶೈಕ್ಷಣಿಕ ಕಾರ್ಯಕ್ರಮ, ಕಾರ್ಯಾಗಾರಗಳ ಕುರಿತು ಸಮಗ್ರವಾಗಿ ವಿವರಿಸಿದರು. 

ಇದೇ ಸಂದರ್ಭದಲ್ಲಿ ವಿವಿಧ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‍ಗಳಲ್ಲಿ ಗರಿಷ್ಠ ಅಂಕಗಳನ್ನು ಗಳಿಸಿ ತೇರ್ಗಡೆಯಾದ ಒಟ್ಟು 56 ವಿದ್ಯಾರ್ಥಿನಿಯರಿಗೆ 67 ಚಿನ್ನದ ಪದಕಗಳನ್ನು ವಿತರಿಸಲಾಯಿತು. ಮತ್ತು 46 ವಿದ್ಯಾರ್ಥಿನಿಯರಿಗೆ ಪಿಎಚ್‍ಡಿ ಹಾಗೂ 10 ವಿದ್ಯಾರ್ಥಿನಿಯರಿಗೆ ಎಂಫಿಲ್ ಪದವಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ವಿವಿ ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿಯರಿಂದ ಮಹಿಳಾ ಗೀತೆ ಹಾಗೂ ನಾಡಗೀತೆ ಮೊಳಗಿದವು. ಕುಲಪತಿ ಪ್ರೊ.ಸಬಿಹಾ ಸ್ವಾಗತಿಸಿದರು. ಪಿಎಚ್‍ಡಿ, ಎಂಫಿಲ್ ಹಾಗೂ ರ‍್ಯಾಂಕ್ ವಿಜೇತರ ಪಟ್ಟಿಯನ್ನು ಕುಲಸಚಿವೆ ಪ್ರೊ.ಆರ್.ಸುನಂದಮ್ಮ ಮಂಡಿಸಿದರು. ಮೌಲ್ಯಮಾಪನ ಕುಲಸಚಿವ ಪ್ರೊ.ಪಿ.ಜಿ.ತಡಸದ ಅವರು ಮೆರವಣಿಗೆಯ ನೇತೃತ್ವ ವಹಿಸಿದ್ದರು. ಘಟಿಕೋತ್ಸವದಲ್ಲಿ ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು. 

ಉನ್ನತ ಶಿಕ್ಷಣ ಸಚಿವ ಗೈರು
ಈ ಬಾರಿ ಘಟಿಕೋತ್ಸವದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರ ಹೆಸರು ಆಮಂತ್ರಣ ಪತ್ರಿಕೆಯಲ್ಲಿಯೇ ಇರಲಿಲ್ಲ, ಅದರಂತೆ ವಿಶ್ವವಿದ್ಯಾಲಯದ ಸಮ ಕುಲಾಧಿಪತಿಗಳೂ ಆಗಿರುವ ಉನ್ನತ ಶಿಕ್ಷಣ ಸಚಿವ ಜೆ.ಟಿ. ದೇವೆಗೌಡ ಗೈರಾಗಿದ್ದರು. ಕಳೆದ ವರ್ಷವೂ ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರೆಡ್ಡಿ ಅವರು ಸಹ ಗೈರಾಗಿದ್ದರು. ಗೈರಾಗುವ ಪರಂಪರೆ ಈ ವರ್ಷವೂ ಪುನರಾವರ್ತನೆಯಾಯಿತು.

ಉಳಿದ ವಿಶ್ವವಿದ್ಯಾಲಯಗಳಲ್ಲಿ ಕುಲಾಧಿಪತಿಗಳಿಲ್ಲದೇ ಹೋದರೆ ಸಮಕುಲಾಧಿಪತಿಗಳಾದರೂ ಉಪಸ್ಥಿತರಿದ್ದು ಪದವಿ ಪ್ರದಾನ ಮಾಡುತ್ತಾರೆ, ಮಹಿಳಾ ವಿಶ್ವವಿದ್ಯಾಲಯವೆಂದರೆ ಏಕೆ ತಾತ್ಸಾರ? ಕಳೆದ ಬಾರಿಯೂ ಕುಲಾಧಿಪತಿಗಳು, ಸಮಕುಲಾಧಿಪತಿಗಳು ಗೈರಾಗಿದ್ದರು, ಈಗಲೂ ಅದೇ ರೀತಿ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News