ರಾಜ್ಯ ಸರಕಾರದಿಂದ ಕೇಂದ್ರದ ಯೋಜನೆ, ಅನುದಾನಗಳ ದುರುಪಯೋಗ: ಮಾಜಿ ಸಚಿವ ಜೀವರಾಜ್

Update: 2019-02-13 18:20 GMT

ಚಿಕ್ಕಮಗಳೂರು, ಫೆ.13: ನರೇಂದ್ರ ಮೋದಿ ಆಡಳಿತದಿಂದಾಗಿ ದೇಶಕ್ಕೆ ವಿಶ್ವ ಮಾನ್ಯತೆ ಪಡೆದುಕೊಮಡಿದೆ. ಇಂತಹ ನಾಯಕನನ್ನು ಮತ್ತೊಮ್ಮೆ ದೇಶದ ಪ್ರಧಾನಿ ಮಾಡಲು ಬಿಜೆಪಿ ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕೆಂದು ಮಾಜಿ ಸಚಿವ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಎನ್.ಜೀವರಾಜ್ ಕರೆ ನೀಡಿದರು.

ಬುಧವಾರ ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಎಪ್ರಿಲ್ ತಿಂಗಳಲ್ಲಿ ಲೋಕಸಭೆ ಚುನಾವಣೆ ಘೋಷಣೆ ಆಗಲಿದೆ. ಚುನಾವಣೆ ಪೂರ್ವ ಸಿದ್ಧತಾ ಕಾರ್ಯದಲ್ಲಿ ಕಾರ್ಯಕರ್ತರು ತಮ್ಮನ್ನು ತೊಡಗಿಸಿಕೊಳ್ಳಬೇಕು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಾಧ್ಯಕ್ಷರ ಮಾರ್ಗದರ್ಶನದಂತೆ ಪೂರ್ವಸಿದ್ಧತಾ ಕಾರ್ಯಕ್ರಮಗಳು ಪ್ರಾರಂಭವಾಗಿವೆ. ಕೇಂದ್ರದ ಯೋಜನೆ ಫಲಾನುಭವಿಗಳ ಪಟ್ಟಿ ತಯಾರಿಸಿ ಬೂತ್‍ಮಟ್ಟದ ಕಾರ್ಯಕರ್ತರಿಗೆ ನೀಡಲಾಗಿದೆ. ಕಾರ್ಯಕರ್ತರು ಫಲಾನುಭವಿಗಳಿಗೆ ಕೇಂದ್ರ ಸರಕಾರದ ಜನಪರ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಪಕ್ಷವನ್ನು ಗ್ರಾಮ ಮಟ್ಟದಿಂದ ಬಲಪಡಿಸಬೇಕು ಎಂದರು.

ಕೇಂದ್ರ ಸರಕಾರ ಜಾರಿಗೆ ತಂದ ಆಯುಷ್ಮಾನ್ ಭಾರತ ಯೋಜನೆಯಡಿಯಲ್ಲಿ ಜಿಲ್ಲೆಯ 1,739 ಫಲಾನುಭವಿಗಳು 7.59 ಕೋಟಿ ರೂ. ನೆರವು ಪಡೆದಿದ್ದಾರೆ. ಉಜ್ವಲ ಯೋಜನೆಯಡಿಯಲ್ಲಿ ಜಿಲ್ಲೆಯ 25,626 ಕುಟುಂಬಗಳು ಪ್ರಯೋಜನ ಪಡೆದಿವೆ. ಮಾರ್ಚ್ ಅಂತ್ಯದೊಳಗೆ 3,897 ಕುಟುಂಬ ಗ್ಯಾಸ್ ಸಂಪರ್ಕ ಪಡೆಯಲಿವೆ. ಆದರೆ ಕೇಂದ್ರ ಸರಕಾರದ ಯೋಜನೆ ಹಣ ಬಳಸಿಕೊಂಡಿರುವ ರಾಜ್ಯ ಸರಕಾರ ಆರೋಗ್ಯ ಕರ್ನಾಟಕ, ಅನಿಲಭಾಗ್ಯ ಎಂದು ಹೆಸರು ಬದಲಿಸಿ ಜನಸಾಮಾನ್ಯರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಸರಕಾರ ಪ್ರತಿಹಳ್ಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿದೆ. ಅಂಚೆ ಕಚೆರಿಗಳಲ್ಲಿ ಫಲಾನುಭವಿಗಳು ಹೆಸರು ನೋಂದಾಯಿಸಿರೆ ಸಾಕು ವಿದ್ಯುತ್ ಸಂಪರ್ಕ ದೊರೆಯಲಿದೆ. ರೈತರ ಖಾತೆಗೆ ವಾರ್ಷಿಕ ಆರು ಸಾವಿರ ನೀಡಲಾಗುತ್ತಿದೆ. ಇಂತಹ ಜನಪರ ಕೇಂದ್ರದ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಿಕೊಂಡುವ 2019ರ ಚುನಾವಣೆಯಲ್ಲಿ ಮೋದಿ ಅವರನ್ನು ಭಾರೀ ಬಹುಮತದಿಂದ ಪ್ರಧಾನಿ ಮಾಡುವ ಜವಾಬ್ದಾರಿ ಕಾರ್ಯಕರ್ತರದ್ದಾಗಿದೆ. ರಾಜ್ಯ ಸರಕಾರ ಕೇಂದ್ರದ ಯೋಜನೆಗಳ ಹೆಸರು, ಹಣ ದುರುಪಯೋಗ ಪಡಿಸಿಕೊಳ್ಳುತ್ತಿರುವುದನ್ನು ಜನತೆಗೆ ತಿಳಿಸಿಕೊಡುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ಕಾರ್ಯಕರ್ತರು ನಿಷ್ಠೆಯಿಂದ ಕೆಲಸ ಮಾಡಬೇಕೆಂದರು.

ಸಭೆಯಲ್ಲಿ ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಉಪಾಧ್ಯಕ್ಷ ಕೆ.ಆರ್.ಆನಂದಪ್ಪ, ಸಂಘಟನಾ ಕಾರ್ಯದರ್ಶಿ ಗಣೇಶ್ ರಾಯ್ಕರ್, ವರಸಿದ್ಧಿ ವೇಣುಗೋಪಾಲ್, ಪ್ರೇಮ್ ಕುಮಾರ್, ಜಿಪಂ ಸದಸ್ಯರಾದ ಜಸಂತಾ, ರವೀಂದ್ರ ಬೆಳವಾಡಿ ಸೇರಿದಂತೆ ಕಾರ್ಯಕರ್ತರು, ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.

ಮೋದಿ ಮತ್ತೆ ಪ್ರಧಾನಿ ಆದಲ್ಲಿ ಪ್ರಗತಿಯ ಕ್ರಾಂತಿಯಾಗಲಿದೆ: ಜಿಎಸ್‍ಟಿ ಜಾರಿ ಬಳಿಕ ದೇಶದಲ್ಲಿ ಅಗತ್ಯ ಸಾಮಾಗ್ರಿಗಳ ಬೆಲೆ ಇಳಿದಿದೆ. ಆದರೆ ಕಾಂಗ್ರೆಸ್ ಅವರು ಇದನ್ನು ಗುಜರಿ ಸಾಬ್ರು ಟ್ಯಾಕ್ಸ್ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹ ಅಪಪ್ರಚಾರನ್ನು ಜನತೆಗೆ ತಿಳಿಸುವ ಕೆಲಸ ಕಾರ್ಯಕರ್ತರು ಮಾಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿನ ಐದು ವರ್ಷಗಳ ಅವಧಿಯಲ್ಲಿ ದೇಶ ಇನಷ್ಟು ಪ್ರಗತಿ ಸಾಧಿಸಲಿದೆ. ಮೋದಿ ಅವರು ಎಂದೂ ಓಟಿಗಾಗಿ ರಾಜಕಾರಣ ಮಾಡಿಲ್ಲ, ದೇಶದ ಪ್ರಗತಿಗಾಗಿ ಕೆಲಸ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News