ಕಳಸ: ಅರಣ್ಯಾಧಿಕಾರಿಯಿಂದ ಅರಣ್ಯ ರಕ್ಷಕನ ಮೇಲೆ ಹಲ್ಲೆ; ವಿಡಿಯೋ ವೈರಲ್

Update: 2019-02-14 14:53 GMT

ಕಳಸ, ಫೆ.14: ಅಕ್ರಮ-ಸಕ್ರಮ ಜಮೀನು ಪ್ರಕರಣದ ನಕಲಿ ಪಂಚನಾಮೆ ದಾಖಲೆಗಳಿದ್ದ ಅನಾಮಧೇಯ ಕಡತವೊಂದಕ್ಕೆ ಸಹಿ ಹಾಕಲು ಒಪ್ಪಲಿಲ್ಲ ಎಂಬ ಕಾರಣಕ್ಕೆ ಅರಣ್ಯ ರಕ್ಷಕನಿಗೆ ಹಿರಿಯ ಅರಣ್ಯ ಅಧಿಕಾರಿಯೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾದ ಘಟನೆ ಪಟ್ಟಣದ ಅರಣ್ಯ ಇಲಾಖೆ ಕಚೇರಿಯಲ್ಲಿ ಗುರುವಾರ ನಡೆದಿದೆ.

ಕಳಸ ವಲಯದ ಅರಣ್ಯ ಇಲಾಖೆ ಬಾಳೆಹೊಳೆ ಶಾಖೆಯ ಉಪವಲಯ ಅರಣ್ಯಾಧಿಕಾರಿ ಎಂ.ವೀರಭದ್ರ ಎಂಬವರು ಬಾಳೆಹೊಳೆ ಬೀಟ್‍ನ ಅರಣ್ಯ ರಕ್ಷಕ ಕೀರ್ತನ್ ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಘಟನೆಯ ವಿಡಿಯೋ ಜಿಲ್ಲಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 

ಕಳಸ ಹೋಬಳಿಯ ಬಾಳೆಹೊಳೆಯ ನಿವಾಸಿಯೊಬ್ಬರು ತಮ್ಮ ಜಮೀನಿನ ಸಾಗುವಳಿ ಚೀಟಿಗೆ 94ಸಿ ಅರ್ಜಿಯಡಿಯಲ್ಲಿ ಅಕ್ರಮ ಸಕ್ರಮ ಕಮಿಟಿಗೆ ಅರ್ಜಿ ಸಲ್ಲಿಸಿದ್ದರು. ಈ ಜಮೀನು ಸಂಬಂಧ ಅರಣ್ಯ ಇಲಾಖೆಯ ಪಂಚನಾಮೆ ವರದಿ ಕೋರಲಾಗಿತ್ತು ಎಂದು ತಿಳಿದು ಬಂದಿದ್ದು, ಉಪವಲಯದ ಅರಣ್ಯಾಧಿಕಾರಿ ವೀರಭದ್ರ ಈ ಜಮೀನಿಗೆ ಸಂಬಂಧಿಸಿದ ನಕಲಿ ಪಂಚನಾಮೆ ವರದಿ ಸಿದ್ಧಪಡಿಸಿ, ವರದಿಗೆ ಬಾಳೆಹೊಳೆ ಬೀಟ್‍ನ ಅರಣ್ಯ ರಕ್ಷಕ ಕೀರ್ತನ್ ಅವರ ಸಹಿ ಅಗತ್ಯವಿದ್ದ ಕಾರಣ ಅಧಿಕಾರಿ ಕೀರ್ತನ್ ಅವರಿಗೆ ವರದಿಯನ್ನು ತೋರಿಸದೇ ಸಹಿ ಮಾಡುವಂತೆ ಒತ್ತಾಯಿಸಿದ್ದರು. ಆದರೆ ವರದಿ, ದಾಖಲೆಗಳನ್ನು ಪರಿಶೀಲಿಸದೇ ಸಹಿ ಮಾಡುವುದಿಲ್ಲ ಎಂದು ಕೀರ್ತನ್ ಪಟ್ಟು ಹಿಡಿದ್ದರಿಂದ ಕುಪಿತಗೊಂಡ ವೀರಭದ್ರ ಕಚೇರಿಯಲ್ಲಿಯೇ ಕೀರ್ತನ್ ಅವರಿಗೆ ನಿಂದಿಸಿದ್ದಲ್ಲೇ ದೈಹಿಕವಾಗಿ ಹಲ್ಲೆ ಮಾಡಿದ್ದಾರೆಂದು ತಿಳಿದುಬಂದಿದೆ. 

ಈ ಘಟನೆ ವಿಡಿಯೋ ತುಣುಕು ಇದೀಗ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದ್ದು, ಉಪ ಅರಣ್ಯಾಧಿಕಾರಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಅಧಿಕಾರಿ ಕಡತಕ್ಕೆ ಸಹಿ ಮಾಡಲು ಅರಣ್ಯ ರಕ್ಷಕ ಕೀರ್ತನ್ ಅವರನ್ನು ಒತ್ತಾಯಿಸುತ್ತಿರುವುದು ಹಾಗೂ ಇದಕ್ಕೆ ಕೀರ್ತನ್ ಸಹಿ ಮಾಡುವುದಿಲ್ಲ ಎನ್ನುವುದು ವಿಡಿಯೋ ತುಣುಕಿನಲ್ಲಿ ದಾಖಲಾಗಿದೆ. ಅಲ್ಲದೇ, ಆಕ್ರೋಶಿತ ಅಧಿಕಾರಿಯು ಕೀರ್ತನ್ ಅವರನ್ನು ಎಳೆದಾಡುವುದು, ನಿಂದಿಸುವುದು, ಹಲ್ಲೆ ಮಾಡುವುದುಲ್ಲದೇ ಸಹಿ ಮಾಡುವುದಿಲ್ಲ ಎಂದು ಬರೆದು ಕೊಡು ಎಂದು ಗದರಿಸುತ್ತಿರುವ ದೃಶ್ಯಗಳು ಸೆರೆಯಾಗಿವೆ.

ಈ ಘಟನೆ ಅರಣ್ಯ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೂ ತಲುಪಿದೆ ಎಂದು ತಿಳಿದು ಬಂದಿದ್ದು, ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲವಾದರೂ ಮೇಲಾಧಿಕಾರಿಗಳು ಘಟನೆ ಬಗ್ಗೆ ವರದಿ ನೀಡುವಂತೆ ಕಳಸ ಅರ್‍ಎಫ್‍ಒ ರವಿಕುಮಾರ್ ಗೆ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಕಳಸ ಅರಣ್ಯ ವಲಯದ ಬಾಳೆಹೊಳೆ ವಿಭಾಗದ ಉಪ ಅರಣ್ಯಾಧಿಕಾರಿ ವೀರಭದ್ರ ಅವರು ಅರಣ್ಯ ರಕ್ಷಕ ಕೀರ್ತನ್ ಮೇಲೆ ಹಲ್ಲೆ ಮಾಡಿದ ವಿಚಾರ ಗಮನಕ್ಕೆ ಬಂದಿದೆ. ಘಟನೆ ಸಂಬಂಧ ಪೂರ್ಣ ಮಾಹಿತಿ ಇಲ್ಲ. ಕಳಸದ ಆರ್‍ಎಫ್‍ಒ ರವಿಕುಮಾರ್‍ ಗೆ ಘಟನೆ ಸಂಬಂಧದ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ವರದಿ ಶೀಘ್ರ ಕೈಸೇರಲಿದ್ದು, ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು. ವೀರಭದ್ರ ಅವರ ಕಾರ್ಯವೈಖರಿ ಬಗ್ಗೆ ಅರಣ್ಯ ಸಿಬ್ಬಂದಿಯಿಂದ ಈ ಹಿಂದೆಯೂ ದೂರು ಬಂದಿವೆ. ಈ ಬಗ್ಗೆ ತಿಳುವಳಿಕೆ ಹೇಳಲಾಗಿದೆ. ಈ ಘಟನೆಯಲ್ಲಿ ತಪ್ಪಿತಸ್ಥ ಎಂದು ಕಂಡು ಬಂದಲ್ಲಿ ಕ್ರಮ ಕೈಗೊಳ್ಳುತ್ತೇನೆ.
- ರಾಣಾವತ್ ಸಿಂಗ್, ಡಿಎಫ್‍ಒ, ಕೊಪ್ಪ ಅರಣ್ಯ ವಿಭಾಗ

ಬಾಳೆಹೊಳೆ ಭಾಗದ ಕೃಷಿಕರೊಬ್ಬ ಕೃಷಿ ಜಮೀನಿಗೆ ಸಂಬಂಧಿಸಿದಂತೆ ಜಮೀನು ಅರಣ್ಯಕ್ಕೆ ಸೇರಿದೆಯೋ, ಕಂದಾಯ ಜಾಗವೋ ಎಂಬ ಬಗ್ಗೆ ಅಕ್ರಮ ಸಕ್ರಮ ಸಮಿತಿ ವರದಿ ಕೋರಿತ್ತು. ನಾನು ಬಾಳೆ ಅರಣ್ಯ ಪ್ರದೇಶದ ಫಾರೆಸ್ಟ್ ಗಾರ್ಡ್ ಆಗಿದ್ದು, ಈ ಜಮೀನಿನ ವರದಿಯನ್ನು ನಾನೇ ಸಿದ್ಧಪಡಿಸಬೇಕಿತ್ತು. ಆದರೆ ಉಪ ಅರಣ್ಯಾಧಿಕಾರಿ ವೀರಭದ್ರ ಅವರು ನನ್ನ ಗಮನಕ್ಕೆ ಬಾರದಂತೆ ನಕಲಿ ಪಂಚನಾಮೆ ವರದಿ ತಯಾರಿಸಿದ್ದಾರೆ. ವರದಿ ಸುಳ್ಳಾದರೇ ತಾನು ಕೆಲಸ ಕಳೆದುಕೊಳ್ಳಬೇಕಾಗುವ ಸಂಭವ ಇದೆ. ಈ ಕಾರಣಕ್ಕೆ ಈ ಕಡತಕ್ಕೆ ವೀರಭದ್ರ ಅವರು ಸಹಿ ಮಾಡುವಂತೆ ಹೇಳಿದರು. ಕಡತ ಪರಿಶೀಲಿಸದೇ ಸಹಿ ಮಾಡುವುದಿಲ್ಲ ಎಂದಿದ್ದಕ್ಕೆ ಯೂನಿಫಾರ್ಮ್ ಹಿಡಿದು ಎಳೆದಾಡಿದರು. ದೈಹಿಕ ಹಲ್ಲೆಯನ್ನೂ ಮಾಡಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿದ್ದೇನೆ. ವೀರಭದ್ರ ಅವರು ಸಿಬ್ಬಂದಿಗೆ ಕಿರುಕುಳ ನೀಡುವುದು ಅನೇಕ ವರ್ಷಗಳಿಂದ ನಡೆಯುತ್ತಿದೆ. ನಕಲಿ ದಾಖಲೆಗಳನ್ನೂ ತಯಾರಿಸಿದ ಬಗ್ಗೆ ಅವರ ಮೇಲೆ ದೂರುಗಳಿವೆ. ಈ ವಿಚಾರ ಮೇಲಾಧಿಕಾರಿಗಳಿಗೂ ತಿಳಿದಿದೆ. 
- ಕೀರ್ತನ್, ಉಪ ಅರಣ್ಯಾಧಿಕಾರಿಯಿಂದ ಹಲ್ಲೆಗೊಳಗಾದ ಅರಣ್ಯ ರಕ್ಷಕ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News